ಪಹಲ್ಗಾಂನ ಪೈಶಾಚಿಕ ಕೃತ್ಯ - ನಾವು ಒಂದಾಗಿದ್ದೇವೆಂಬ ಸಂದೇಶರ ವಾನಿಸಲೇಬೇಕು : ನಿರ್ಮಲಾನಂದ ಶ್ರೀ

KannadaprabhaNewsNetwork | Updated : Apr 24 2025, 09:17 AM IST

ಸಾರಾಂಶ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲಿನ ಭಯೋತ್ಪಾದಕರ ಪೈಶಾಚಿಕ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಆದಿಚುಂಚನಗಿರಿ ಮಹಾ ಸಂಸ್ಥಾನದ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ನಾವು ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸಲೇಬೇಕು ಎಂದು ಪ್ರತಿಪಾದಿಸಿದ್ದಾರೆ.

  ಬೆಂಗಳೂರು : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲಿನ ಭಯೋತ್ಪಾದಕರ ಪೈಶಾಚಿಕ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಆದಿಚುಂಚನಗಿರಿ ಮಹಾ ಸಂಸ್ಥಾನದ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ನಾವು ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸಲೇಬೇಕು ಎಂದು ಪ್ರತಿಪಾದಿಸಿದ್ದಾರೆ.

ಇದು ಭಾರತದ ಸಾರ್ವಭೌಮತೆ ಮೇಲೆ ನಡೆದಿರುವ ದಾಳಿ. ಉಗ್ರರನ್ನು ಮಟ್ಟಹಾಕಲು ಸರ್ಕಾರ ಏನೆಲ್ಲ ಸಾಧ್ಯವೋ ಅದನ್ನು ಮಾಡಬೇಕು ಎಂದೂ ಅವರು ಹೇಳಿದ್ದಾರೆ.

ಘಟನೆಯಲ್ಲಿ 26 ಮಂದಿ ಮೃತಪಟ್ಟಿರುವುದು ಮನಸ್ಸಿಗೆ ಆಘಾತ ನೀಡಿದೆ. ತಮ್ಮ ಪ್ರೀತಿ ಪಾತ್ರರ ಕಳೆದುಕೊಂಡ ಕುಟುಂಬದವರಿಗೆ ನನ್ನ ಸಂತಾಪಗಳು. ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಶ್ರೀಗಳು ಹಾರೈಸಿದ್ದಾರೆ.

ಭಯೋತ್ಪಾದಕರ ದಾಳಿಯಲ್ಲಿ ಕರ್ನಾಟಕದ ಮೂವರು ಸಾವಿಗೀಡಾಗಿರುವುದು ದುರದೃಷ್ಟಕರ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಸಂತ್ರಸ್ತರ ಕುಟುಂಬದವರ ಜೊತೆ ಶ್ರೀಮಠ ಇರಲಿದೆ. ಮೃತರ ಕಳೆಬರವನ್ನು ಜಮ್ಮು ಮತ್ತು ಕಾಶ್ಮೀರದಿಂದ ಸ್ವಗ್ರಾಮಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಿರುವುದು ಶ್ಲಾಘನೀಯ ಎಂದು ತಿಳಿಸಿದ್ದಾರೆ.

ಒಂದು ಕಾಲದಲ್ಲಿ ಜಮ್ಮು-ಕಾಶ್ಮೀರ ಅಶಾಂತಿಯ ಬೀಡಾಗಿತ್ತು. ಪ್ರಧಾನಿ ಮೋದಿ ಅವರ ದಿಟ್ಟ ನಿರ್ಧಾರಗಳಿಂದಾಗಿ ಕಣಿವೆ ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಶಾಂತಿ ನೆಲೆಸಿದೆ. ಇದನ್ನು ಸಹಿಸದ ಉಗ್ರರು ಮನುಷ್ಯತ್ವ ಮರೆತು ಅತ್ಯಂತ ಬರ್ಬರವಾಗಿ ಗುಂಡಿನ ದಾಳಿ ನಡೆಸಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಕಂಬನಿ ಮಿಡಿದಿದ್ದಾರೆ.

ಭಯೋತ್ಪಾದನೆಗೆ ಜಾತಿ ಮತ್ತು ಧರ್ಮದ ಬಣ್ಣ ಕಟ್ಟುವುದು ಬೇಡ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ನಾವು ಖಂಡಿಸಲೇಬೇಕು. ಪಕ್ಷ ರಾಜಕಾರಣ ಮರೆತು ನಾವೆಲ್ಲ ಒಗ್ಗಟ್ಟಾಗಿರಬೇಕಾದ ಸಮಯ ಇದು ಎಂದು ಸಲಹೆ ಕೊಟ್ಟಿದ್ದಾರೆ. ಇಲ್ಲಿ ತಪ್ಪುಗಳನ್ನು ಹುಡುಕುವ ಅಗತ್ಯವಿಲ್ಲ. ನಾವೆಲ್ಲರೂ ಕೇಂದ್ರ ಸರ್ಕಾರಕ್ಕೆ ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡಲು ಸಹಕಾರ ನೀಡಬೇಕು. ನಾವು ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸಲೇಬೇಕು. ಇದು ಭಾರತದ ಸಾರ್ವಭೌಮತೆ ಮೇಲೆ ನಡೆದಿರುವ ದಾಳಿ. ಉಗ್ರರನ್ನು ಮಟ್ಟ ಹಾಕಲು ಸರ್ಕಾರ ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡಬೇಕು. ಅದಕ್ಕೆ ಸಹಕಾರ ಕೊಡಬೇಕು ಎಂದು ಶ್ರೀಗಳು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

Share this article