ಕನ್ನಡಪ್ರಭ ವಾರ್ತೆ ಕೊಲ್ಹಾರ
ದೇಶದಲ್ಲಿ ರೈತರು ಪರಿಶ್ರಮದಿಂದ ಬೆಳೆದ ಬೆಳೆಗೆ ಯೋಗ್ಯ ದರ ನೀಡುವ ಶಕ್ತಿ ಇರುವ ಪ್ರಧಾನಿ ನಮ್ಮ ದೇಶಕ್ಕೆ ಸಿಕ್ಕಿಲ್ಲ ಎಂಬುದು ರೈತರ ದುರ್ದೈವ. ಒಂದೊಮ್ಮೆ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಿದರೆ ಸಾಕು, ನಾವು ಇನ್ನಾವುದೇ ಸೌಲಭ್ಯ ನೀಡದಿದ್ದರೂ ನಮ್ಮ ರೈತರಿಗೆ, ದೇಶಕ್ಕೆ ಸಾಲ ನೀಡುವ ಶಕ್ತಿ ಬರಲಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಕೊಲ್ಹಾರ ತಾಲೂಕಿನ ಮುತ್ತಲದಿನ್ನಿ ಗ್ರಾಮದಲ್ಲಿ ಶನಿವಾರ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದರು. ಅನ್ಯರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ರೈತರಿಗೆ ಹೆಚ್ಚಿನ ಸೌಲಭ್ಯ ನೀಡುತ್ತಿದೆ.
ರೈತರು ಪರಿಶ್ರಮದಿಂದ ಆಹಾರ ಧಾನ್ಯ ಉತ್ಪಾದಿಸುತ್ತಾರೆ ಎಂಬ ಕಾರಣಕ್ಕೆ ದೇಶದ ಜನರು ಎರಡು ಹೊತ್ತು ಊಟ ಮಾಡುವ ಪರಿಸ್ಥಿತಿ ಇದೆ. ರೈತ ಆಹಾರ ಧಾನ್ಯ ಉತ್ಪಾದಿಸದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.ಭಾರತವನ್ನು ನಾಲ್ಕು ಶತಮಾನ ಆಳಿದ ಬ್ರಿಟಿಷರು ಅನ್ನಕ್ಕಾಗಿ ಪರಿತಪಿಸುವ ದುಸ್ಥಿತಿ ಎದುರಾಗಿದೆ. ಇಂಗ್ಲೆಂಡ್ ದೇಶದಲ್ಲಿ ರೈತರು ಕೃಷಿಯಿಂದ ಸಂಪೂರ್ಣ ವಿಮುಖರಾಗಿದ್ದು, ಅಲ್ಲೀಗ ಶೇ.1-2 ರಷ್ಟು ರೈತರು ಮಾತ್ರ ಒಕ್ಕಲುತನ ಮಾಡುತ್ತಿದ್ದಾರೆ. ಭಾರತದಲ್ಲಿ ಶೇ.65ಕ್ಕಿಂತ ಹೆಚ್ಚಿನ ರೈತರು ಕೃಷಿಯಲ್ಲಿ ತೊಡಗಿರುವುದು ನಮ್ಮ ಸುದೈವ ಎಂದರು.
ಹಾಲು ಉತ್ಪಾದಕರ ಸಂಘ ಸ್ಥಾಪಿಸಿದರೆ ಸಾಲದು ಸಂಘ ಸಶಕ್ತವಾಗಿ ಬೆಳೆಯಲು ಹಾಲು ಉತ್ಪಾದನೆ ಹೆಚ್ಚಬೇಕು. ಇದಕ್ಕಾಗಿ ಪುರುಷರು ಹೈನೋದ್ಯಮದಲ್ಲಿ ತೊಡಗಬೇಕು. ನಿಮ್ಮಿಂದ ಆಗದಿದ್ದರೆ ಮನೆಯಲ್ಲಿ ಮಹಿಳೆಯರಿಗೆ 2 ಎಮ್ಮೆ ಅಥವಾ ಆಕಳು ಕೊಡಿಸಿದರೆ ನಿಮ್ಮ ಕೌಟುಂಬಿಕ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಆಗಲಿದೆ. ಜೊತೆಗೆ ಹಾಲು ಉತ್ಪಾದಕರ ಸಂಘ ಸ್ಥಾಪನೆಯ ಉದ್ದೇಶ ಈಡೇರಲಿದೆ ಎಂದು ಸಲಹೆ ನೀಡಿದರು.ಹಿಂದೆಲ್ಲ ನಮ್ಮ ಭಾಗದಲ್ಲಿರುವ ಬೆಲ್ಲ ಉತ್ಪಾದನೆಗಾಗಿ ಕಬ್ಬು ಬೆಳೆಯಲಾಗುತ್ತಿತ್ತು. ಮಂಡ್ಯ ಜಿಲ್ಲೆ ಸಕ್ಕರೆ ನಾಡು ಎನಿಸಿಕೊಂಡಿತ್ತು. ಆದರೆ ಮಂಡ್ಯ ಜಿಲ್ಲೆಯಲ್ಲಿ ಉತ್ಪಾದಿಸುವಷ್ಟು ಸಕ್ಕರೆಯನ್ನು ಇದೀಗ ನಿರಾಣಿ ಸಕ್ಕರೆ ಕಾರ್ಖಾನೆ ಒಂದರಲ್ಲೇ ಉತ್ಪಾದಿಸಲಾಗುತ್ತದೆ. ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ 24 ಸಕ್ಕರೆ ಕಾರ್ಖಾನೆಗಳಿದ್ದು, ವಿಜಯಪುರ ಜಿಲ್ಲೆಯಲ್ಲಿ ಉತ್ಪಾದಿಸುವ ಸಕ್ಕರೆಯನ್ನು ಇಡೀ ಕರ್ನಾಟಕ ರಾಜ್ಯಕ್ಕೆ ಪೂರೈಸಬಹುದು. ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಉತ್ಪಾದಿಸುವ ಸಕ್ಕರೆಯನ್ನು ಇಡೀ ದೇಶಕ್ಕೆ ಪೂರೈಕೆ ಮಾಡಬಹುದು ಎಂದು ಹೇಳಿದರು.
ಅಮಲಝರಿಯ ಜ್ಞಾನಮಯ ಶ್ರೀಗಳು, ಮಂಜುನಾಥ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ಮುತ್ತಲದಿನ್ನಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎಂ.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರ- ಬಾಗಲಕೋಟೆ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಈರಣಗೌಡ ಕರಿಗೌಡರ, ಮುತ್ತಲದಿನ್ನಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿಂಗನಗೌಡ ಪಾಟೀಲ, ಬಾಬು ಪಾತ್ರೋಟ, ಡಿ.ಟಿ.ಶಿವಶಂಕರಸ್ವಾಮಿ, ಚಂದ್ರಮ್ಮ ಮುಳೇದ, ವಿಸ್ತರಣಾಧಿಕಾರಿ ಪ್ರಸನ್ನ ಬಿರಾದಾರ, ವ್ಯವಸ್ಥಾಪಕ ಡಾ.ಗಜರಾಜ ರಣತೂರ, ಶಿವಕುಮಾರ ಚವ್ಹಾಣ ಸೇರಿದಂತೆ ಇತರರು ಉಪಸ್ಥಿತರಿದ್ದರು.