ನಮ್ಮ ಬೆಳೆಗಳ ಭದ್ರತೆಗೆ ಸೂಕ್ತ ಮಾರುಕಟ್ಟೆ ಬೇಕು: ನಗರದ ಮಹದೇವಪ್ಪ

KannadaprabhaNewsNetwork |  
Published : Mar 24, 2026, 02:00 AM IST
ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಕಲಬುರಗಿ ವಿಭಾಗ ಮಟ್ಟದ ಕೃಷಿ ಸಮಾವೇಶ ಹಾಗೂ ದಾಳಿಂಬೆ ಬೆಳೆಗಾರರ ವಿಚಾರ ಸಂಕಿರಣ ನಡೆಯಿತು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಸೋಮವಾರ ಕಲಬುರಗಿ ವಿಭಾಗ ಮಟ್ಟದ ಕೃಷಿ ಸಮಾವೇಶ ಹಾಗೂ ದಾಳಿಂಬೆ ಬೆಳೆಗಾರರ ವಿಚಾರ ಸಂಕಿರಣ ನಡೆಯಿತು.

ಕೊಪ್ಪಳ: ರೈತರು ಬೆಳೆದ ಬೆಳೆಗಳಿಗೆ ಭದ್ರತೆ ಬೇಕಾದರೆ ಸೂಕ್ತ ಮಾರುಕಟ್ಟೆ ಬೇಕು. ಹಾಗಾಗಿ ಯಾವ ಯಾವ ಬೆಳೆಗಳಿಗೆ ಎಲ್ಲಿ ಸೂಕ್ತ ಮಾರುಕಟ್ಟೆ ಇದೆ ಎನ್ನುವುದನ್ನು ರೈತರು ತಿಳಿದುಕೊಳ್ಳಬೇಕು ಎಂದು ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ನಗರದ ಮಹದೇವಪ್ಪ ಹೇಳಿದರು.

ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಜಿಲ್ಲಾ ಕೃಷಿಕ ಸಮಾಜ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಲಬುರಗಿ ವಿಭಾಗ ಮಟ್ಟದ ಕೃಷಿ ಸಮಾವೇಶ ಹಾಗೂ ದಾಳಿಂಬೆ ಬೆಳೆಗಾರರ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ. ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕೇಂದ್ರ ಸರ್ಕಾರ ರೈತರ ₹74 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ ಉಚಿತವಾಗಿ ವಿದ್ಯುತ್ ಕೊಟ್ಟರು. ಈಗ ನಮ್ಮ ರೈತರಿಗೆ ಸೋಲಾರ್ ಪಂಪ್‌ಸೆಟ್ ಅಳವಡಿಸುವ ಕೆಲಸ ಆಗಬೇಕು. ನಮ್ಮದು ಹೆಚ್ಚು ಮಳೆಯಾಶ್ರಿತ ರಾಜ್ಯವಾಗಿದೆ. ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ₹65 ಸಾವಿರ ಕೋಟಿಯನ್ನು ಕೃಷಿಗೆ ನೀಡಿದೆ ಎಂದರು.

ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿ, 1950-60ರ ದಶಕದಿಂದ ಕೃಷಿಕ ಸಮಾಜ ಸರ್ಕಾರ ಮತ್ತು ರೈತರ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರು, ಕುಷ್ಟಗಿ ಇತರ ಕಡೆ ಒಣಭೂಮಿ ಇದೆ. 1 ಲಕ್ಷ ಎಕರೆ ಟ್ರೀ ಕವರ್ ಮಾಡಲು ಈ ಹಿಂದೆಯೇ ಐದು ವರ್ಷಗಳ ಯೋಜನೆ ಹಾಕಲಾಗಿದೆ. ಪ್ರಧಾನ ಮಂತ್ರಿ ಧನ-ಧಾನ್ಯ ಯೋಜನೆ ಅಡಿ ಬರುವ ಜಿಲ್ಲೆಗಳಲ್ಲಿ ನಮ್ಮದೂ ಒಂದು ಎಂದು ಹೇಳಿದರು.

ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರಿನ ಮಾಜಿ ಆಡಳಿತ ಅಧ್ಯಕ್ಷ ಹಾಗೂ ಜಿಲ್ಲಾ ಕೃಷಿಕ ಸಮಾಜ ಕಲಬುರಗಿ ಅಧ್ಯಕ್ಷ ಡಾ. ಸಿದ್ರಾಮಪ್ಪ ಬಿ. ಪಾಟೀಲ ದಂಗಾಪುರ ಮಾತನಾಡಿ, ಕೃಷಿ ನಮ್ಮ ದೇಶದ ಸಂಸ್ಕೃತಿ. ನಾವು ಕೃಷಿ ಜತೆಗೆ ಇತರ ಉಪ ಕಸುಬುಗಳನ್ನು ಮಾಡಬೇಕು. ನಮ್ಮಲ್ಲಿ ಹಲವಾರು ರೈತರು ಕರಿಬೇವು, ನುಗ್ಗೆ ಕಾಯಿ ಬೆಳೆದು ಕೋಟ್ಯಧೀಶರಾಗಿದ್ದಾರೆ ಎಂದು ಹೇಳಿದರು.

ಕೊಪ್ಪಳ ಕೃಷಿಕ ಸಮಾಜದ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳ ಅಳವಡಿಕೆ, ನೀರಿನ ಸಮರ್ಪಕ ಬಳಕೆ ಹಾಗೂ ಮಾರುಕಟ್ಟೆ ಅರಿವು ಇಂದಿನ ಕಾಲಘಟ್ಟದಲ್ಲಿ ಬಹಳ ಮುಖ್ಯವಾಗಿದೆ. ವಿಶೇಷವಾಗಿ ದಾಳಿಂಬೆ ಬೆಳೆಗಾರರು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದರಿಂದ ಉತ್ತಮ ಉತ್ಪಾದನೆ ಮತ್ತು ಹೆಚ್ಚಿನ ಆದಾಯ ಗಳಿಸಬಹುದು ಎಂದು ಹೇಳಿದರು.

ಸೊಲ್ಲಾಪುರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರದ ತಜ್ಞರಾದ ಡಾ.ಮಂಜುನಾಥ ಎನ್., ರೋಗಗಳ ನಿಯಂತ್ರಣ ಕ್ರಮಗಳ ಕುರಿತು ಪ್ರಾಯೋಗಿಕ ಸಲಹೆಗಳನ್ನು ನೀಡಿದರು. ಅಪೆಡಾ ಮಾರುಕಟ್ಟೆ ತಜ್ಞೆ ಡಾ. ಪೂಜಾ ಡಿ.ಕೆ. ಅವರು ರಫ್ತು ನೋಂದಣಿ ಪ್ರಕ್ರಿಯೆ ಕುರಿತು ರೈತರಿಗೆ ತಿಳಿಸಿದರು. ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ವಡಗೂರು ಡಿ.ಎಲ್. ನಾಗರಾಜ, ಬಾಳಪ್ಪ ಬೆಳಕೋಡ, ತಿಮ್ಮಣ್ಣ ಚೌಡಿ, ಮಂಜುನಾಥಗೌಡ ಎಸ್.ಆರ್ ಮಾತನಾಡಿದರು.

ಕೊಪ್ಪಳ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿ.ಡಿ. ಕೃಷ್ಣಮೂರ್ತಿ ಹಾಗೂ ಕೊಪ್ಪಳ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬೀದರ್‌ನ ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ವಿಶ್ವನಾಥ ಪಾಟೀಲ್, ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಬಳ್ಳಾರಿಯ ಕೃಷಿಕ ಸಮಾಜದ ಅಧ್ಯಕ್ಷ ಪಿ. ಗಾದೆಪ್ಪ ಓಬಣ್ಣ, ರಾಯಚೂರು ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ವಿಜಯಕುಮಾರ ಎಸ್. ಪಾಟೀಲ್, ವಿಜಯನಗರ ಕೃಷಿಕ ಸಮಾಜದ ಅಧ್ಯಕ್ಷ ಕೆ. ರೇವಣಸಿದ್ದಪ್ಪ ಹನುಮಂತಪ್ಪ, ವಿಜಯನಗರ ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ಎಂ. ಬಸವರಾಜ ಬಸಪ್ಪ, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಸಿ, ಅಳವಂಡಿಯ ಕಾಯಕ ಫಾರ್ಮ್ ಮುಖ್ಯಸ್ಥ ವಿಶ್ವನಾಥ ಗದ್ದಿಕೇರಿ, ದಾಳಿಂಬೆ ಬೆಳೆ ಪರಿಣತರಾದ ರಾಮು ಚುಕ್ಕನಕಲ್ಲ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥಗೌಡ, ಸಿ. ಪಾಪಣ್ಣ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸತ್ಯದ ಜೊತೆ ದೈವ ಶಕ್ತಿ ಸದಾ ಇರುತ್ತದೆ: ರಂಭಾಪುರಿ ಸ್ವಾಮೀಜಿ
ಮೊಟ್ಟೆ ಬೇಯಿಸಲು ಶಾಲೆಗಳಿಗೆ ಬಂತು ಪರಿಕರ!