ಮಂಗಳೂರು: ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೊಂಡು 25 ಸಂವತ್ಸರಗಳಾದ ಹಿನ್ನೆಲೆಯಲ್ಲಿ ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿ. ವತಿಯಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಭಾನುವಾರ ನಗರದ ಮಂಗಳಾದೇವಿಯ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಮರಣೋತ್ತರ ಶೌರ್ಯಚಕ್ರ ಪುರಸ್ಕೃತ ಹುತಾತ್ಮಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಇವರಿಗೆ ‘ಸ್ಮರಣಾಂಜಲಿ’ ಸಲ್ಲಿಸಲಾಯಿತು. ಪ್ರಾಂಜಲ್ ಅವರ ತಂದೆ ಎಂಆರ್‌ಪಿಎಲ್‌ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಮಾತನಾಡಿ, ನಾವು ಸೈನಿಕರಾಗಿಲ್ಲ. ಆದರೆ ಮಗನ ಮೂಲಕ ಸೈನ್ಯದ ಕಾರ್ಯ ನೆರವೇರಿದೆ. ಬಹುಮುಖ್ಯವಾಗಿ ನಾವು ಸೈನಿಕರಲ್ಲವಾದರೂ ಸಮಾಜಕ್ಕಾಗಿ ದುಡಿಯುವ, ದೇಶಕ್ಕೆ ಸ್ಪಂದಿಸುವ ಮನೋಭಾವ ನಮ್ಮಲ್ಲಿ ಇದ್ದರೆ ಅದುವೇ ಮಹಾನ್ ಕಾರ್ಯವಾಗುತ್ತದೆ. ಸೈನಿಕರು ದೇಶ ಸೇವೆಗೆ ತನ್ನ ಜೀವವನ್ನೇ ಮುಡಿಪಾಗಿಡುತ್ತಾರೆ ಎಂಬ ಅರಿವು ನಮ್ಮಲ್ಲಿ ಇರಬೇಕು ಎಂದರು.ದೇಶ ಮೊದಲು ಎಂಬುದನ್ನು ಸೈನಿಕ ನಿರೀಕ್ಷಿಸುತ್ತಾನೆ. ನನ್ನ ಮಗ ಪ್ರಾಂಜಲ್ ಹುಟ್ಟಿದ್ದು ಬೆಂಗಳೂರು. ಆದರೆ ಬೆಳೆದದ್ದು ಮಂಗಳೂರಿನಲ್ಲಿ. ಚಿಕ್ಕಂದಿನಲ್ಲಿಯೇ ಮಿಲಿಟರಿ ಸೇರಬೇಕು ಆಸೆ ಅವನಿಗೆ ಇತ್ತು. ನಾವು ಸೈನಿಕ ಪರಂಪರೆಯವರು ಅಲ್ಲ. ಆದರೆ ಆತ ನೋಡಿದ ಸಮಾಜ, ಶಿಕ್ಷಕರ ಕಾರಣದಿಂದ ಈ ಸ್ಫೂರ್ತಿ ಬೆಳೆಯಲು ಕಾರಣವಾಯಿತು ಎಂದರು.
ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಮಾತನಾಡಿ, ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿ. ವ್ಯವಹಾರ ಕ್ಷೇತ್ರದ ಜತೆಗೆ ಸಮಾಜಕ್ಕಾಗಿ ಸ್ಪಂದಿಸುವ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ ಎಂದರು.ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ನಂಜನಗೌಡ, ಆರ್‌ಎಸ್‌ಎಸ್ ಮುಖಂಡ ಪಿ.ಎಸ್.ಪ್ರಕಾಶ್, ಶಾರದಾ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಮಂಜುನಾಥ ಎಸ್.ಕೆ., ಭಾರತಿ ಜಿ.ಭಟ್ ಮುಖ್ಯ ಅತಿಥಿಗಳಾಗಿದ್ದರು.ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷ ಎಂ.ಎಸ್.ಗುರುರಾಜ್, ಉಪಾಧ್ಯಕ್ಷ ಉದಯ ವಿ.ಶಾಸ್ತ್ರೀ ಮತ್ತಿತರರಿದ್ದರು.