ಬಿಜೆಪಿಯಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕಿಲ್ಲ: ಶಾಸಕ ಲಕ್ಷ್ಮಣ ಸವದಿ

KannadaprabhaNewsNetwork |  
Published : Apr 21, 2024, 02:23 AM IST
ರಾಮದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಶಾಸಕ ಲಕ್ಷ್ಮಣ ಸವದಿ ಪ್ರಚಾರ ಮಾಡಿದರು | Kannada Prabha

ಸಾರಾಂಶ

ದೇಶಭಕ್ತಿಯನ್ನು ಬಿಜೆಪಿಯವರು ಗುತ್ತಿಗೆಗೆ ತೆಗೆದುಕೊಂಡಂತೆ ಆಡುತ್ತಿದ್ದಾರೆ. ಅವರಿಂದ ನಾವು ದೇಶ ಭಕ್ತಿಯ ಪಾಠ ಕಲಿಯಬೇಕಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ದೇಶಭಕ್ತಿಯನ್ನು ಬಿಜೆಪಿಯವರು ಗುತ್ತಿಗೆಗೆ ತೆಗೆದುಕೊಂಡಂತೆ ಆಡುತ್ತಿದ್ದಾರೆ. ಅವರಿಂದ ನಾವು ದೇಶ ಭಕ್ತಿಯ ಪಾಠ ಕಲಿಯಬೇಕಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ರಾಮದುರ್ಗ ಪಟ್ಟಣದಲ್ಲಿ ಶುಕ್ರವಾರ ಸಂಜೆ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಪರ ನಡೆದ ಬೃಹತ್ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗರು ಮಾತು‌ ಆಡಿದರೆ ಸಾಕು ಬರೀ ಸುಳ್ಳೇ ಆಡುತ್ತಾರೆ. ಸುಳ್ಳಿನಿಂದಲೇ ಅರಮನೆ ಕಟ್ಟಿ, 2014ರಿಂದ ಅಧಿಕಾರ ನಡೆಸುತ್ತಿದ್ದಾರೆ ಎಂದು‌ ಆರೋಪಿಸಿದರು.

2014ರ ಚುನಾವಣೆ ವೇಳೆ ಮಾಜಿ ಪ್ರಧಾನಿ ವಾಜಪೇಯಿ ಕನಸು ನನಸಾಗಬೇಕು, ಗಂಗಾನದಿಯ ನೀರನ್ನು ಕಾವೇರಿಗೆ ತರಬೇಕು. ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತರ್ತಿವಿ. ಆ ಹಣ ತಂದರೆ ಎಲ್ಲರ ಅಕೌಂಟಿಗೆ ₹15 ಲಕ್ಷ ಹಾಕಬಹುದು. ನಮ್ಮೂರ ರಸ್ತೆಗಳು ಚಿನ್ನದ ರಸ್ತೆಗಳನ್ನಾಗಿ ಮಾಡಬಹುದು ಎಂದೆಲ್ಲಾ ಸುಳ್ಳು ಹೇಳಿಕೊಂಡು ಅಧಿಕಾರಕ್ಕೇರಿದರು ಎಂದು ಟೀಕಾಪ್ರಹಾರ ನಡೆಸಿದರು.

ಬಿಜೆಪಿಯವರು ಹೇಳಿದ್ದನ್ನು ಯಾವುದನ್ನೂ ಮಾಡುವುದಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಎಂದು ಹೇಳಿದ್ದರು‌.ಆದಾಯ ಡಬಲ್‌ ಆಗಲಿಲ್ಲ. ಬದಲಿಗೆ ಅವರು ಬಳಸುವ ರಾಸಾಯನಿಕ ಗೊಬ್ಬರದ ಮೊತ್ತ ಡಬಲ್ ಆಗಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್, ಸಿಲಿಂಡರ್ ಬೆಲೆ ಡಬಲ್ ಆಗಿದೆ. 2014ರಲ್ಲಿ ಅಮೆರಿಕ ಡಾಲರ್ ಗೆ ₹ 49 ಆಗಿತ್ತು. ಇವತ್ತು ₹ 86 ಆಗಿದೆ ಎಂದು ಕುಟುಕಿದರು. ರಾಮದುರ್ಗ ಶಾಸಕ ಅಶೋಕ್ ಪಟ್ಟಣ, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ್‌ ಮಾತನಾಡಿದರು.

ಈ ವೇಳೆ ಶಾಸಕರಾದ ಅಶೋಕ್ ಪಟ್ಟಣ, ಲಕ್ಷ್ಮಣ ಸವದಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುಳಾ ದೇವರೆಡ್ಡಿ, ಪುರಸಭಾ ಸದಸ್ಯರಾದ ಸಲ್ಮಾ ಚೂರಿಖಾನ್, ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಪಟ್ಟಣ ಸೇರಿದಂತೆ ಸಾವಿರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರನ್ನು ಸೋಲಿಸುವ ಸಲುವಾಗಿಯೇ ಬೆಳಗಾವಿಗೆ ತಂದು ನಿಲ್ಲಿಸಲಾಗಿದೆ. ಜಗದೀಶ ಶೆಟ್ಟರ್ ಬಲಿಕಾ ಬಕ್ರಾ ಆಗಲಿದ್ದಾರೆ. ಇದೇ ರೀತಿ ಬಿಜೆಪಿ 4-5 ಕ್ಷೇತ್ರಗಳಲ್ಲಿ ಬಕ್ರಾಗಳನ್ನು ತಂದು ನಿಲ್ಲಿಸಿದೆ.‌ ನಮ್ಮ ಮಣ್ಣು ನಮ್ಮ ಹಕ್ಕು ಎಂದು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ್ದರು‌. ನಮ್ಮ ಜಿಲ್ಲೆಗೆ ಹೊರ ಜಿಲ್ಲೆಯ ಅಭ್ಯರ್ಥಿ ಬೇಡ. ಮೋದಿ, ಬಿಎಸ್ ವೈ ಪ್ರಚಾರ ಮಾಡಿದ ಜಾಗಗಳಲ್ಲಿ ಬಿಜೆಪಿ ಸೋತಿದೆ. ಬೆಳಗಾವಿಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ.

-ಲಕ್ಷ್ಮಣ ಸವದಿ ಶಾಸಕ ಅಥಣಿ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ