ದಾಬಸ್‍ಪೇಟೆ: ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರದ ಬಗ್ಗೆ ಈಗಾಗಲೇ ರಾಜ್ಯದ ಜನತೆಗೆ ಮನವರಿಕೆಯಾಗಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಜೊತೆ ನಾವಿದ್ದೇವೆಂದು ನೆಲಮಂಗಲ ತಾಲೂಕಿನಿಂದ 550 ಕಾರುಗಳಲ್ಲಿ 2500 ಜನ ಆಗಮಿಸಿ ಶಕ್ತಿ ತುಂಬುವ ಸಂದೇಶ ನೀಡಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ನೆಲಮಂಗಲ ತಾಲೂಕಿನಿಂದ ಹೊರಟಿದ್ದ ಧರ್ಮಸ್ಥಳ ಚಲೋ ಕಾರು ರ್ಯಾಲಿಯನ್ನು ಯಶಸ್ವಿಯಾಗಿ ಮುಗಿಸಿ ತಾಲೂಕಿಗೆ ವಾಪಸ್ ಬಂದ ನಂತರ ಮಾತನಾಡಿದ ಅವರು, ಧರ್ಮ ರಕ್ಷಣೆಗೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ, ನೆಲಮಂಗಲ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಧರ್ಮಸ್ಥಳಕ್ಕೆ ಆಗುತ್ತಿರುವ ಅಪಪ್ರಚಾರವನ್ನು ಖಂಡಿಸಿ ಕಾರು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ದರ್ಶನ ಪಡೆದು ವೀರೇಂದ್ರ ಹೆಗ್ಗಡೆಯವರ ಜತೆ ನೆಲಮಂಗಲ ಜನತೆ, ಕಾಂಗ್ರೆಸ್ ಪಕ್ಷ ಹಾಗೂ ನಮ್ಮ ಸರ್ಕಾರ ಸದಾಕಾಲ ಧರ್ಮ ರಕ್ಷಣೆಗೆ ನಿಲ್ಲಲಿದೆ ಎಂಬ ಸಂದೇಶ ನೀಡಿ ಬಂದಿದ್ದೇವೆ ಎಂದರು.ಕೇಸರಿ ಬಿಜೆಪಿಯವರ ಸ್ವತ್ತಲ್ಲ:
ಕೇಸರಿ ಹಿಂದೂ ಧರ್ಮದ ಸಂಕೇತ, ನಾವೆಲ್ಲರೂ ಹಿಂದೂಗಳಾಗಿ ಕೇಸರಿ ಶಾಲು ಹಾಕಿಕೊಂಡು ಧರ್ಮಸ್ಥಳ ಚಲೋ ಮಾಡಿದ್ದೇವೆ. ಕೇಸರಿ ಬಿಜೆಪಿ ಪಕ್ಷದ ಸ್ವತ್ತಲ್ಲ. ಕಾಂಗ್ರೆಸ್ ಬಾವುಟದಲ್ಲಿಯೂ ಕೇಸರಿ ಇದೆ. ನಾವು ಹಿಂದೂಗಳಾಗಿ ಹಿಂದೂ ಧರ್ಮ, ದೇಶದ ರಕ್ಷಣೆಗೆ ನಾವು ಸಿದ್ದರಿದ್ದು, ದೇಶ, ಧರ್ಮ, ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದ್ದೇವೆ. ಇದರಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಜೆಪಿ ವಿರುದ್ಧ ಕಿಡಿಕಾಡಿದರು.ಬಂಡವಾಳ ಬಯಲು:
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದವರ ಬಂಡವಾಳ ಬಯಲಾಗಿದೆ. ತಲೆ ಬುರುಡೆ ಹಿಡಿದುಕೊಂಡು ಹೆಣ ಹೂತು ಹಾಕಿದ್ದೇನೆ ಎನ್ನುತ್ತಿದ್ದವನನ್ನು ಪೊಲೀಸರು ಬಂಧಿಸಿ ತನಿಖೆ ಮಾಡುತ್ತಿದ್ದು, ತನಿಖೆ ನಂತರ ಸತ್ಯಾಸತ್ಯತೆ ನಾಡಿನ ಜನತೆಗೆ ತಿಳಿಯಲಿದೆ ಎಂದರು.ಅನ್ನ ದಾಸೋಹ ಸೇವೆ:
ನೆಲಮಂಗಲದ ಶಾಸಕ ಎನ್.ಶ್ರೀನಿವಾಸ್ ಹಾಗೂ ಮುಖಂಡರ ಸಹಕಾರದೊಂದಿಗೆ ಎರಡು ಲಾರಿಗಳಲ್ಲಿ ಅಕ್ಕಿ, ಬೇಳೆ, ವಿವಿಧ ಬಗೆಯ ತರಕಾರಿಗಳನ್ನು ತೆಗೆದುಕೊಂಡು ಹೋಗಿ ಧರ್ಮಸ್ಥಳದಲ್ಲಿ ಭಕ್ತಾದಿಗಳಿಗೆ ಸದಾಕಾಲ ಅನ್ನಸಂತರ್ಪಣೆ ಮಾಡುವ ಅನ್ನಪೂರ್ಣ ಕೇಂದ್ರಕ್ಕೆ ನೀಡಿದ್ದಾರೆ.ಸ್ವಯಂ ಪ್ರೇರಣೆಯಿಂದ ಆಗಮನ:
ನೆಲಮಂಗಲದಿಂದ ಧರ್ಮಸ್ಥಳದಲ್ಲಿ ಕಾರು ರ್ಯಾಲಿಯಲ್ಲಿ ಭಾಗವಹಿಸಿದ ಮುಖಂಡರು, ಕಾರ್ಯಕರ್ತರಿಗೆ ವಸತಿ, ಊಟ, ತಿಂಡಿ, ಟೋಲ್ ಉಚಿತ ವ್ಯವಸ್ಥೆಯನ್ನು ಬಿಟ್ಟು ಏನು ಸಹ ನೀಡಿಲ್ಲ. ಶಾಸಕರಾದ ಎನ್.ಶ್ರೀನಿವಾಸ್ ಕರೆಗೆ ಸ್ವಯಂ ಪ್ರೇರಣೆಯಿಂದ ಸಾವಿರಾರು ರು. ಹಣ ಖರ್ಚು ಮಾಡಿಕೊಂಡು ರ್ಯಾಲಿಯಲ್ಲಿ ಭಾಗವಹಿಸಿ ಧರ್ಮಸ್ಥಳದ ಪರ ನಿಂತು ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದರು.ಪೋಟೋ 1 : ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಮಂಜುನಾಥಸ್ವಾಮಿ ದರ್ಶನ ಪಡೆದು ವೀರೇಂದ್ರ ಹೆಗ್ಗಡೆ ಭೇಟಿ ಮಾಡಿರುವುದು.
ಪೋಟೋ 2 : ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ 2 ಲಾರಿಯಷ್ಟು ಅಕ್ಕಿ ಹಾಗೂ ತರಕಾರಿ ವಿತರಣೆ ಮಾಡಿದರು.