ಧಾರವಾಡ:
ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಇಲ್ಲಿಯ ವಿದ್ಯಾ ಪಿ. ಹಂಚಿನಮನಿ ಕಾಲೇಜಿನಲ್ಲಿ ನಡೆದ ಆಂತರಿಕ ನಡಿಗೆಯ ಸಮಾರೋಪದಲ್ಲಿ ಅವರು ಮಾತನಾಡಿ, ಐದು ದಿನಗಳ ಈ ವಿಶಿಷ್ಟ ನಡುಗೆ ಗ್ರಾಮೀಣ ಭಾರತದ ಪರಿಚಯ ಮಾಡಿದ್ದಲ್ಲದೇ ಸಮುದಾಯದಿಂದ ನಾವು ಕಲಿಯ ಬೇಕಾದದ್ದು ಬಹಳಷ್ಟಿದೆ ಎಂಬ ಅರಿವು ಮೂಡಿಸಲು ಕಾರಣವಾಯಿತು. ಭಾರತದ ಪಾರಂಪರಿಕ ಜ್ಞಾನ ಅದ್ಭುತ. ಹಳ್ಳಿ ಜನರ ಆತಿಥ್ಯ ಉತ್ತಮ. ಬಾಹ್ಯ ನಡಿಗೆ ತೋರಿಕೆಗೆಯಾದರೆ, ಆಂತರಿಕ ನಡಿಗೆ ನೈಜತೆಯಾಗಿದೆ. ನಾನು ಎಂಬ ಅಹಂಕಾರವನ್ನು ಬಿಟ್ಟು ಮೌನದಲ್ಲಿ ನಡೆದಾಗ ನಮ್ಮನ್ನು ನಾವು ಅರಿತುಕೊಳ್ಳಲು ಸಾಧ್ಯ. ಈ ಐದು ದಿನಗಳ ನಡಿಗೆಯಲ್ಲಿ ಧ್ಯಾನ, ಪ್ರಾಣಾಯಾಮ, ಯೋಗ ಇವೆಲ್ಲವೂ ಇದ್ದಿದ್ದರಿಂದ ಯಾರಿಗೂ70 ಕಿಮೀ ನಡಿಗೆ ಕಷ್ಟ ಎನಿಸಲಿಲ್ಲ ಎಂದರು.
ಯಾವುದೋ ಊರಿನಿಂದ ಬಂದ ಪ್ರತಿನಿಧಿಗಳನ್ನು ಸಮುದಾಯ ಸ್ವಾಗತಿಸಿದ ರೀತಿ ನೋಡಿದಾಗ ಅಲ್ಲಿನ ಸಾಂಸ್ಕೃತಿಕ ಶ್ರೀಮಂತಕೆ ನಮ್ಮ ಅರಿವಿಗೆ ಬಂತು. ಐದು ದಿನಗಳ ನಡಿಗೆಯಲ್ಲಿ ನೂರಾರು ಜನರ ಜೊತೆ ಸಂವಾದ ನಡೆಸುವ ಮೂಲಕ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಯಿತು ಎಂದ ಅವರು, ಸಾಧನಕೇರಿಯ ದ.ರಾ. ಬೇಂದ್ರೆ ಅವರ ಮನೆಗೆ ಭೇಟಿ ನೀಡಿ ಬೇಂದ್ರೆ ಅವರ ಜೀವನ ಮೌಲ್ಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಸರ್.ಎಂ. ವಿಶ್ವೇಶ್ವರಯ್ಯನವರ ಕನಸಿನ ಕೂಸಾದ ಶತಮಾನ ಕಂಡ ಕೆಲಗೇರಿ ಕೆರೆಯ ಬಗ್ಗೆ ಅಲ್ಲಿನ ಸಮುದಾಯದವರಿಂದ ತಿಳಿದುಕೊಂಡು, ಮುಗದ ಗ್ರಾಮದಲ್ಲಿ ಕುಂಬಾರಿಕೆ, ಬಿದಿರಿನ ಬುಟ್ಟಿ ಎಣೆಯುವುದು, ಮುತ್ತಗದ ಎಲೆಯಿಂದ ಊಟದ ಎಲೆ ತಯಾರಿಸುವ ಸಮುದಾಯದೊಂದಿಗೆ ಸಂವಾದ ನಡೆಸುವ ಮೂಲಕ ತಮ್ಮ ಮೂಲ ಕಸುಬಿನ ಬವಣೆಯನ್ನು ಅರಿತುಕೊಳ್ಳಲಾಯಿತು. ಕಲಕೇರಿ ಸಂಗೀತ ವಿದ್ಯಾಲಯದ ಮಕ್ಕಳ ಸಂಗೀತ ಪಾಲ್ಗೊಂಡ ಎಲ್ಲರನ್ನೂ ಬೇರೆಯದೇ ಲೋಕಕ್ಕೆ ಕೊಂಡೊಯ್ಯಿತು. ಈ ಸಮಯದಲ್ಲಿ ಸಂಪಾದಿಸಿದ ಜ್ಞಾನ ಅಭೂತಪೂರ್ವ ಎಂದು ಹೇಳಿದರು.ನಡಿಗೆಯಲ್ಲಿ ಪಾಲ್ಗೊಂಡ ಮೈಸೂರಿನ 84 ವರ್ಷದ ಡಾ. ವೀಣಾ ಅನುಭವ ಹಂಚಿಕೊಂಡು, ದೊಡ್ಡ ನಗರದಲ್ಲಿ ಬೆಳೆದ ನಾವು ಅದೇ ಪ್ರಪಂಚ ಎಂದು ಕೊಂಡಿದ್ದೆವು, ಈ ಆಂತರಿಕ ನಡಿಗೆ ಭಾರತದ ಗ್ರಾಮೀಣ ಪ್ರದೇಶಗಳ ಬಗ್ಗೆ ಕಣ್ಣು ತೆರಸಿತು ಎಂದರು.
ದೆಹಲಿಯಿಂದ ಆಗಮಿಸಿದ್ದ ಸಾಕ್ಷಿ, ಯಾವ ವಿಶ್ವವಿದ್ಯಾಲಯವೂ ನೀಡದ ಶಿಕ್ಷಣವನ್ನು ಐದು ದಿನಗಳ ಈ ಆಂತರಿಕ ನಡಿಗೆ ಕಲಿಸಿತು ಎಂದರು. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಿಇಒ ಸವಿತಾ ಸುಳಗೋಡು, ಹಂಚಿನಮನಿ ಕಾಲೇಜಿನ ಪ್ರೊ. ಪಿ.ಆರ್. ಹಂಚಿನಮನಿ, ಸಹಕಾರ್ಯದರ್ಶಿ ವರ್ಷಾ ಹಂಚಿನಮನಿ ವೇದಿಕೆಯಲ್ಲಿದ್ದರು.ಡಾ. ಮೋಹನ ಥಂಬದ ಸ್ವಾಗತಿಸಿದರು. ಜಯಂತ ಕೆ.ಎಸ್. ವಂದಿಸಿದರು. 17 ವರ್ಷದ ವಿದ್ಯಾರ್ಥಿಯಿಂದ ಹಿಡಿದು 87 ವರ್ಷ ವಯಸ್ಸಿನ ಹಿರಿಯರು, ಬೇರೆ ಬೇರೆ ಕ್ಷೇತ್ರಗಳಲ್ಲಿನ ಪ್ರಮುಖರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಈ ವಾಕ್ ವಿಥಿನ್ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳಿಂದ ಒಟ್ಟು 78 ಜನರು ಪಾಲ್ಗೊಂಡಿದ್ದರು.