ಬೆಂಗಳೂರು : ದೇಶದ ಸಿಲಿಕಾನ್ ವ್ಯಾಲಿಯಾಗಿರುವ ಬೆಂಗಳೂರು ನಗರದ ಕೇಂದ್ರ ಲೋಕಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮತದಾರರಿಗೆ ಭರವಸೆ ನೀಡಿದರು.
ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭಾನುವಾರ ಭರ್ಜರಿ ರೋಡ್ ಶೋ ನಡೆಸಿದ ಮನ್ಸೂರ್ ಅಲಿ ಖಾನ್, ವಿವಿಧ ಅಪಾರ್ಟ್‌ಮೆಂಟ್ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಹಾಲಿ ಸಂಸದರಿಗೆ ಕಳೆದ 15 ವರ್ಷಗಳಿಂದ ಅವಕಾಶ ನೀಡಲಾಗಿದೆ. ಆದರೆ, ಬೆಂಗಳೂರಿನಂತಹ ನಗರದಲ್ಲಿ ನಿರೀಕ್ಷಿತ ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ವಿಫಲರಾಗಿದ್ದಾರೆ. ದೊಡ್ಡ ಪ್ರಮಾಣದಲ್ಲಿ ತೆರಿಗೆ ನೀಡುವ ನಗರಕ್ಕೆ ಕೇಂದ್ರ ಪ್ರೋತ್ಸಾಹದ ಅನುದಾನದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಬಹುದಾಗಿತ್ತು. ಸಮೂಹ ಸಾರಿಗೆ ವ್ಯವಸ್ಥೆ ನಿರ್ಮಾಣಕ್ಕೆ ವೇಗ ನೀಡಬಹುದಿತ್ತು. ಆದರೆ, ಸಂಸದರು ಬೆಂಗಳೂರು ನಗರದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಮನ್ಸೂರ್ ಖಾನ್ ಆರೋಪಿಸಿದರು.
ಕೇಂದ್ರ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ವಸ್ತುಗಳ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಅವಧಿಯಲ್ಲಿ ಬಡವರ ಜೀವನ ಸಂಕಷ್ಟಕ್ಕೀಡಾಗಿದೆ ಎಂದು ಮನ್ಸೂರ್ ಖಾನ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ಯುವ ಜನತೆ, ವಿದ್ಯಾವಂತ ಯುವ ಸಮುದಾಯಕ್ಕೆ ಕೇಂದ್ರ ಸರ್ಕಾರ ನಿರಾಶೆ ಉಂಟು ಮಾಡಿದೆ. ಉದ್ಯೋಗ ನೀಡಲು ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಯುವ ಸಮುದಾಯಕ್ಕೆ ತೀವ್ರ ಅಸಮಾಧಾನ ಇದೆ. ಹೀಗಾಗಿ, ಯುವ ಸಮುದಾಯ, ಬಡವರು, ಮಧ್ಯಮ ವರ್ಗಕ್ಕೆ ಆಶಾಕಿರಣ ಆಗಿರುವ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ಜನ ನಿರ್ಧರಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತು ಇಂಡಿಯಾ ಕೂಟ ಗೆಲುವು ಸಾಧಿಸಲಿದೆ ಎಂದು ಮನ್ಸೂರ್ ಅಲಿ ಖಾನ್ ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಹ್ಯಾರಿಸ್ ನೇತೃತ್ವದಲ್ಲಿ ರೋಡ್ ಶೋ
ದೊಮ್ಮಲೂರು ಶಂಕರನಾಗ್ ರಸ್ತೆಯಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಅವರ ನೇತೃತ್ವದಲ್ಲಿ ಬೃಹತ್ ರೋಡ್ ಶೋ ನಡೆಸಲಾಯಿತು. ವೈಟ್‌ಫೀಲ್ಡ್‌ನ ಆದರ್ಶ್ ಪಾಮ್ ಮೆಡೋಸ್ ಅಪಾರ್ಟ್‌ಮೆಂಟ್, ಸರ್ಜಾಪುರದ ಸ್ಪ್ರಿಂಗ್ ಫೀಲ್ಡ್ ಅಪಾರ್ಟ್‌ಮೆಂಟ್ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದ ಮನ್ಸೂರ್, ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ಮುಖಂಡರಾದ ನಂದಕುಮಾರ್, ಬ್ಲಾಕ್ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು, ಮಾಜಿ ನಗರ ಪಾಲಿಕೆ ಸದಸ್ಯರು, ಸೇರಿದಂತೆ ಕಾಂಗ್ರೆಸ್ ಪಕ್ಷ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.
ಎಲ್ಲೆಲ್ಲಿ ಪ್ರಚಾರ?: ದೊಮ್ಮಲೂರು, ಸಿದ್ದಾರ್ಥ ಕಾಲೋನಿ, ಬಿಡಿಎ ಕಾಂಪ್ಲೆಕ್ಸ್, ಮೋಟಪ್ಪನಪಾಳ್ಯ, ಕ್ಯಾಂಬ್ರಿಡ್ಜ್ ರಸ್ತೆ, ಜೋಗುಪಾಳ್ಯ, ಪೀಲೆ ಪ್ರತಿಮೆ ಜಂಕ್ಷನ್, ರಾಚಪ್ಪ ಗಾರ್ಡನ್, ಜಾನ್ಸನ್ ಮಾರ್ಕೇಟ್, ಆನೆಪಾಳ್ಯ, ನೀಲಸಂದ್ರ, ಕ್ಯಾಸಲ್ ಸ್ಟ್ರೀಟ್, ಮದರ್ ತೆರೆಸಾ ರಸ್ತೆ ಮುಂತಾದೆಡೆ ಪ್ರಚಾರ ನಡೆಸಿದರು.