ನಮ್ಮೂರಿನ ಸರ್ಕಾರಿ ಶಾಲೆ ಮುಚ್ಚಲು ಬಿಡೋದಿಲ್ಲ : ಕೂಡುಮಂಗಳೂರು ಗ್ರಾಮದ ಪೋಷಕರ ಆಗ್ರಹ

KannadaprabhaNewsNetwork |  
Published : Mar 26, 2026, 02:45 AM IST
ಚಿತ್ರ : 23ಎಂಡಿಕೆ5 : ಐಡಿಎಸ್ಓ ನೇತೃತ್ವದಲ್ಲಿ ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಕೆಪಿಎಸ್- ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಕೂಡುಮಂಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ ಕೂಡಿಗೆ ಶಾಲೆಗೆ ವಿಲೀನಗೊಳಿಸಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ ಎಐಡಿಎಸ್ಓ ನೇತೃತ್ವದಲ್ಲಿ ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೆಪಿಎಸ್- ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಕೂಡುಮಂಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ ಕೂಡಿಗೆ ಶಾಲೆಗೆ ವಿಲೀನಗೊಳಿಸಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ ಎಐಡಿಎಸ್ಓ ನೇತೃತ್ವದಲ್ಲಿ ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ರಾಜ್ಯ ಖಜಾಂಚಿಗಳಾದ ಸುಭಾಷ್ ಬೆಟ್ಟದ ಕೊಪ್ಪ ಅವರು ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ 40,000 ಸರ್ಕಾರಿ ಶಾಲೆಗಳನ್ನು ರಾಜ್ಯಾದ್ಯಂತ ಮುಚ್ಚಲಾಗುತ್ತಿದೆ. ಅಕ್ಟೋಬರ್ 15 ಹಾಗೂ ಡಿಸೆಂಬರ್ 30 2025 ರಂದು ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಆದೇಶಗಳ ಪ್ರಕಾರ, ರಾಜ್ಯಾದಾದ್ಯಂತ 5900 ಗ್ರಾಮ ಪಂಚಾಯಿತಿಗಳ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಾಗಿ ಪರಿವರ್ತಿಸಲು ಸರ್ಕಾರವು ನಿರ್ಧರಿಸಿದೆ. ಆದರೆ ಅತ್ಯಂತ ಕರಾಳ ವಿಷಯವೆಂದರೆ ಈ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಐದು ಕಿಲೋಮೀಟರ್ ವ್ಯಾಪ್ತಿಯ ಉಳಿದ ಎಲ್ಲಾ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಹುನ್ನಾರ ಇದಾಗಿದೆ. ಈಗಾಗಲೇ ಕಳೆದ 15 ವರ್ಷಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ 17 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಯೋಜನೆ ಪ್ರಕಾರ ನಮ್ಮ ರಾಜ್ಯದ ಲಕ್ಷಾಂತರ ರೈತ- ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಇನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಹೋಗುವ ಮಕ್ಕಳಿಗೆ 6ನೇ ತರಗತಿಯಿಂದಲೇ ಮಣ್ಣಿನ ಹಣತೆ ಮಾಡುವ, ಅಡಿಕೆ ಸುಲಿಯುವ ಕೌಶಲ್ಯಗಳನ್ನು ಕಲಿಸುವುದಾಗಿ ಶಿಕ್ಷಣ ಮಂತ್ರಿಗಳು ಬಹಿರಂಗಪಡಿಸಿದ್ದಾರೆ. ಕಾರ್ಮಿಕರ ಮಕ್ಕಳನ್ನು ಕಾರ್ಮಿಕರನ್ನಾಗಿಯೇ ಉಳಿಸುವುದು ಸರ್ಕಾರದ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಡಿಬಿ ಬ್ಯಾಂಕಿನಿಂದ 2,500 ಕೋಟಿ ಸಾಲ ಪಡೆದು ಕೆಪಿಎಸ್ ಶಾಲೆ ತೆರೆಯಲಾಗುತ್ತಿದೆ. ಈ ಶಾಲೆಗಳನ್ನು ಖಾಸಗಿ ಕಂಪನಿ ಗಳಿಗೆ ಹೊರಗುತ್ತಿಗೆ ಕೊಡಲಾಗುತ್ತದೆ. ಪ್ರತಿಶಾಲೆ ಸ್ವಂತ ಮೂಲದಿಂದ ಆದಾಯ ಸಂಗ್ರಹಿಸಬೇಕು ಎಂದು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೇಳುತ್ತದೆ. ಸರ್ಕಾರ ಶಿಕ್ಷಣದ ಜವಾಬ್ದಾರಿಯಿಂದ ನುಣುಚಿಕೊಂಡು ಸಾರ್ವಜನಿಕ ಶಿಕ್ಷಣವನ್ನು ಕಾರ್ಪೊರೇಟ್ ಕಂಪನಿಗಳಿಗೆ ದಾನ ಮಾಡುವ ಹುನ್ನಾರ ರಚಿಸಿದೆ. ಇದರ ವಿರುದ್ಧ ಒಗ್ಗಟ್ಟಾಗಿ ಹೋರಾಡುವುದೇ ಜನರ ಮುಂದಿನ ಪರಿಹಾರ. ಏನೇ ಬಂದರೂ ಹೋರಾಟದಿಂದ ಹಿಂದೆ ಸರಿಯ ಬಾರದು ಎಂದು ಕರೆ ನೀಡಿದರು.

ಗ್ರಾಮದ ಪಾಲಕರು, ಹಿರಿಯರು, ಯುವಕರು ಹಾಗೂ ಗ್ರಾಮಸ್ಥರು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದರು. ಈ ಯೋಜನೆ ರದ್ದುಗೊಳಿಸುವವರೆಗೂ ಶಾಲೆ ಉಳಿಸಲು ಹೋರಾಡುವ ಸಂಕಲ್ಪ ತೆಗೆದುಕೊಂಡರು. ಶಾಲೆ ಉಳಿಸುವ ಹೋರಾಟಕ್ಕಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು.

ಪ್ರತಿಭಟನೆಯಲ್ಲಿ ಎಐಡಿಎಸ್ಒ ಜಿಲ್ಲಾ ಸಂಚಾಲಕರಾದ ಸ್ವಾತಿ, ಪದಾಧಿಕಾರಿಯಾದ ಪೂರ್ಣಿಮಾ ಪೋಷಕರಾದ ಜ್ಯೋತಿ, ನೇತ್ರಾವತಿ, ಕಾವ್ಯ , ಗೀತಾ ,ಶ್ರುತಿ, ಅಂಕಿತ ಹಾಗೂ ಸಂತೋಷ್ ಮುಂತಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಕಳ–ಹೆಬ್ರಿಯಲ್ಲಿ ಭಾರಿ ಮಳೆ: ಮನೆಗಳಿಗೆ ಹಾನಿ, ಲಕ್ಷಾಂತರ ನಷ್ಟ
ಮಹಿಳೆಯರ ಸ್ವಾವಲಂಬಿ ಜೀವನ ಗ್ರಾಮೀಣ ಅಭಿವೃದ್ಧಿಗೆ ಪೂರಕ