ಅಭಿವೃದ್ಧಿಯ ವಿಷಯದಲ್ಲ ಮುಲಾಜು ಇಟ್ಟುಕೊಳ್ಳಲ್ಲ: ಸಿ.ಎಸ್. ನಾಡಗೌಡ

KannadaprabhaNewsNetwork |  
Published : Jun 16, 2026, 03:00 AM IST
ಸಿ.ಎಸ್. ನಾಡಗೌಡ | Kannada Prabha

ಸಾರಾಂಶ

ಮುದ್ದೇಬಿಹಾಳ ಮತಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಯಾರೊಂದಿಗೂ ಮುಲಾಜು ಇಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ. ನಾನು ಯಾರಿಂದಲೂ ಕಮಿಷನ್ ಪಡೆದಿಲ್ಲ. ಕಮಿಷನ್ ಗಿರಾಕಿ ನಾನಲ್ಲ. ಯಾರಾದರೂ ನನಗೆ ಕಮಿಷನ್ ಕೊಟ್ಟಿದ್ದರೆ ನನ್ನ ಎದುರು ಬಂದು ತಮ್ಮ ಮನೆಯ ದೇವರ ಮೇಲೆ ಆಣೆ ಮಾಡಿ ಹೇಳಲಿ ಎಂದು ಶಾಸಕ ಸಿ.ಎಸ್. ನಾಡಗೌಡ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮತಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಯಾರೊಂದಿಗೂ ಮುಲಾಜು ಇಟ್ಟುಕೊಳ್ಳುವ ಪ್ರಶ್ನೆಯೇ ಇಲ್ಲ. ನಾನು ಯಾರಿಂದಲೂ ಕಮಿಷನ್ ಪಡೆದಿಲ್ಲ. ಕಮಿಷನ್ ಗಿರಾಕಿ ನಾನಲ್ಲ. ಯಾರಾದರೂ ನನಗೆ ಕಮಿಷನ್ ಕೊಟ್ಟಿದ್ದರೆ ನನ್ನ ಎದುರು ಬಂದು ತಮ್ಮ ಮನೆಯ ದೇವರ ಮೇಲೆ ಆಣೆ ಮಾಡಿ ಹೇಳಲಿ ಎಂದು ಶಾಸಕ ಸಿ.ಎಸ್. ನಾಡಗೌಡ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಜಿಲ್ಲೆಯಲ್ಲಿಯೇ ಬಬಲೇಶ್ವರ ಕ್ಷೇತ್ರವನ್ನು ಹೊರತುಪಡಿಸಿದರೆ ಮುದ್ದೇಬಿಹಾಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಹೆಚ್ಚಿನ ಅನುದಾನ ನೀಡಿದೆ. ಕೆಲವು ಗುತ್ತಿಗೆದಾರರು ಅಭಿವೃದ್ಧಿಗಿಂತ ರಾಜಕಾರಣವನ್ನೇ ಹೆಚ್ಚಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕ್ರಿಕೆಟ್ ಪಂದ್ಯಾವಳಿ ಹಾಗೂ ಗಣಪತಿ ಉತ್ಸವಗಳಿಗೆ ಹಣ ಖರ್ಚು ಮಾಡುವ ಬದಲು ಅದೇ ಹಣವನ್ನು ರಸ್ತೆ ಕಾಮಗಾರಿಗಳಿಗೆ ಬಳಸಿಕೊಂಡು, ಪಡೆದಿರುವ ಕಾಮಗಾರಿ ಪೂರ್ಣಗೊಳಿಸಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.

ಕೆಲವರಿಗೆ ಒಕ್ಕಲಿಗನಾಗಲು ಏನು ಬೇಕು ಎಂಬುವುದೇ ಗೊತ್ತಿಲ್ಲ. ಕೇವಲ ಹಸಿರು ಟವೆಲ್ ಹಾಕಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ನಾಗರಬೆಟ್ಟ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡ ಸಂದರ್ಭದಲ್ಲಿ ಇಂದು ರೈತರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವವರು ಇನ್ನೂ ರಾಜಕೀಯವಾಗಿ ಕಾಣಿಸಿಕೊಂಡಿರಲಿಲ್ಲ ಎಂದು ವ್ಯಂಗ್ಯವಾಡಿದರು.

ಜನರ ಋಣ ನಮ್ಮ ಮೇಲಿದೆ. ಸ್ಥಳೀಯ ಸಮಸ್ಯೆಗಳು ಮತ್ತು ಕಾಮಗಾರಿಗಳ ವಿಚಾರವನ್ನೇ ಆಧಾರವಾಗಿಟ್ಟುಕೊಂಡು ಇಲ್ಲಿಯವರೆಗೆ ರಾಜಕಾರಣ ಮಾಡಿದ್ದೇನೆ. ಮತಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಸಂಬಂಧಿಸಿದ ಅಧಿಕಾರಿಗಳು ನಿಗಾವಹಿಸಿ ಪರಿಶೀಲನೆ ನಡೆಸಬೇಕು. ಕೆಲವು ಗುತ್ತಿಗೆದಾರರು ಅರ್ಧಮರ್ಧ ಕಾಮಗಾರಿ ನಡೆಸುತ್ತಿದ್ದು, ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಅಗತ್ಯವಿದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯಾವೊಬ್ಬ ಗುತ್ತಿಗೆದಾರನ ಅಗತ್ಯದಿಂದ ನಾನು ಚುನಾವಣೆಯಲ್ಲಿ ಆಯ್ಕೆಯಾಗಿಲ್ಲ. ಗುತ್ತಿಗೆದಾರರ ಅವಶ್ಯಕತೆ ನನಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮಾಧ್ಯಮದವರು ವರದಿ ಮಾಡುವಾಗ ವಿಷಯದ ಸೂಕ್ಷ್ಮತೆ ಅರಿತು ಕಾರ್ಯನಿರ್ವಹಿಸಬೇಕು. ತಪ್ಪು ಮಾಡಿದವರ ವಿರುದ್ಧ ನಿರ್ಭಯವಾಗಿ ವರದಿ ಮಾಡಲಿ. ಆದರೆ ಪ್ರತಿಯೊಂದು ವಿಷಯಕ್ಕೂ ಶಾಸಕರನ್ನು ಎಳೆದು ತರುವುದು ಎಷ್ಟು ನ್ಯಾಯ ಎಂದು ಪ್ರಶ್ನಿಸಿದರು.

ಬಾಕ್ಸ್ವೃತ್ತಿ ಬಿಟ್ಟು ರಾಜಕಾರಣ ಮಾಡುತ್ತಿರುವ ಗುತ್ತಿಗೆದಾರರು:

ಪಟ್ಟಣದ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಎಸ್. ನಾಡಗೌಡ ಅವರು ಮಾತನಾಡಿ, ಕೆಲವು ಗುತ್ತಿಗೆದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಕೆಲವು ಗುತ್ತಿಗೆದಾರರು ತಮ್ಮ ಮೂಲ ವೃತ್ತಿ ಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರಾಗುವ ಕನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗಲಿ ಎಂದು ನಾನು ಹಾರೈಸುತ್ತೇನೆ. ನಾನು ಯಾರ ಶತ್ರುವೂ ಅಲ್ಲ. ಅವರು ನನ್ನೊಂದಿಗೆ ಹೇಗೆ ಸಂಬಂಧ ಇಟ್ಟುಕೊಳ್ಳುತ್ತಾರೋ, ಅದೇ ರೀತಿಯ ಸಂಬಂಧವನ್ನು ನಾನು ಕೂಡ ಅವರೊಂದಿಗೆ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದರು.

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಾನು ಗ್ರಾಮೀಣ ಮಟ್ಟದ ರಾಜಕಾರಣದಿಂದ ರಾಜ್ಯಮಟ್ಟದ ರಾಜಕಾರಣದವರೆಗೆ ಬೆಳೆದಿದ್ದೇನೆ. ಸದ್ಯ ನಾನು ಸಚಿವನಷ್ಟೇ ಪ್ರಭಾವ ಮತ್ತು ಜವಾಬ್ದಾರಿಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಸಚಿವನಾಗುವ ವಿಶ್ವಾಸ ನನಗಿದೆ. ಈ ಹಿಂದೆ ಸಿದ್ದರಾಮಯ್ಯ, ಎಸ್.ಎಂ. ಕೃಷ್ಣ ಹಾಗೂ ಧರ್ಮಸಿಂಗ್ ಅವರು ನನಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು. ಈಗಲೂ ಸಚಿವನಾಗುವ ನಂಬಿಕೆ ನನ್ನಲ್ಲಿದೆ ಎಂದು ತಿಳಿಸಿದರು.

ಇದೇ ವೇಳೆ ಉತ್ತರ ಕರ್ನಾಟಕದ ಕಾಂಗ್ರೆಸ್ ನಾಯಕರ ಕುರಿತು ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರ ಪೈಕಿ ನಾನು ಮೊದಲ ಸಾಲಿನಲ್ಲಿ ಇದ್ದೇನೆ. ಆದರೆ ಕೆಲವರು ನನ್ನನ್ನು ರಾಜಕೀಯವಾಗಿ ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಿಮ ಅಧಿಸೂಚನೆ ಪ್ರತಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ
ಟೌನ್‌ಶಿಪ್‌ ವಿರುದ್ಧ ವಿಧಾನಸೌಧ ದೆಹಲಿ ಚಲೋ