ಕನ್ನಡ ಉಳಿದರಷ್ಟೇ ನಾವೂ ಉಳಿಯುತ್ತೇವೆ-ಶಾಸಕ ಮಾನೆ

KannadaprabhaNewsNetwork |  
Published : Nov 02, 2025, 03:15 AM IST
ಫೋಟೊ: 1ಎಚ್‌ಎನ್‌ಎಲ್1 | Kannada Prabha

ಸಾರಾಂಶ

ತನ್ನದೇ ಆದ ಇತಿಹಾಸ, ವೈಶಿಷ್ಟ್ಯ ಹೊಂದಿರುವ ಈ ನಾಡಿನಲ್ಲಿ ಕನ್ನಡಿಗರಾಗಿ ಜನ್ಮ ತಳೆದಿದ್ದು ನಮ್ಮೆಲ್ಲರ ಸೌಭಾಗ್ಯ. ನಮ್ಮ ಭಾಷೆಯೇ ನಮ್ಮ ಆತ್ಮ. ಕನ್ನಡ ಉಳಿದರಷ್ಟೇ ನಾವೂ ಉಳಿಯುತ್ತೇವೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ತನ್ನದೇ ಆದ ಇತಿಹಾಸ, ವೈಶಿಷ್ಟ್ಯ ಹೊಂದಿರುವ ಈ ನಾಡಿನಲ್ಲಿ ಕನ್ನಡಿಗರಾಗಿ ಜನ್ಮ ತಳೆದಿದ್ದು ನಮ್ಮೆಲ್ಲರ ಸೌಭಾಗ್ಯ. ನಮ್ಮ ಭಾಷೆಯೇ ನಮ್ಮ ಆತ್ಮ. ಕನ್ನಡ ಉಳಿದರಷ್ಟೇ ನಾವೂ ಉಳಿಯುತ್ತೇವೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ಶನಿವಾರ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಜಿಲ್ಲೆಯ ಹೋರಾಟಗಾರರ ಕೊಡುಗೆ ಮಹತ್ವದ್ದಾಗಿದೆ. ಮೊಬೈಲ್ ಮತ್ತು ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಕನ್ನಡದ ಬಳಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಿದ್ದು, ಕನ್ನಡ ನಮ್ಮ ಭಕ್ತಿ ಎಂಬ ಭಾವನೆ ಬೆಳೆಸಿಕೊಳ್ಳೋಣ ಎಂದರು. ಪಂಚ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಜೊತೆಗೆ ತಾಲೂಕಿನ ಅಭಿವೃದ್ಧಿಗೂ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಮಹತ್ವಾಕಾಂಕ್ಷೆಯ ನರೇಗಲ್, ಕೂಸನೂರು ಏತ ನೀರಾವರಿ ಯೋಜನೆಗೆ 220 ಕೋಟಿ ರು., ಧರ್ಮಾ ಜಲಾಶಯದ ಕಾಲುವೆ ಜಾಲಕ್ಕೆ 50 ಕೋಟಿ ರು., ನಗರ ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳಿಗೆ 50 ಕೋಟಿ ರು. ಬಿಡುಗಡೆ ಮಾಡಿದೆ. ಪಡಿತರ ವಿತರಣೆ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಿಸಲು ತಾಲೂಕಿನಲ್ಲಿ ಹೊಸದಾಗಿ 23 ವಿತರಣಾ ಕೇಂದ್ರ ಆರಂಭಿಸಲಾಗುತ್ತಿದೆ. ಇಂಧನ, ಶಿಕ್ಷಣ, ಆರೋಗ್ಯ ಹೀಗೆ ಬೇರೆ ಬೇರೆ ಕ್ಷೇತ್ರಗಳನ್ನೂ ಸಹ ಸುಧಾರಿಸುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಲಾಗಿದೆ. ತಾಲೂಕಿನ ಯುವ ಹಾಗೂ ವಿದ್ಯಾರ್ಥಿ ಸಮೂಹಕ್ಕೆ ಸ್ಪರ್ಧಾತ್ಮಕ ಜಗತ್ತಿಗೆ ಸನ್ನದ್ಧಗೊಳಿಸಲು ಪರಿಣಿತರಿಂದ ತರಬೇತಿ ದೊರಕಿಸಲಾಗುತ್ತಿದೆ. ಉದ್ಯೋಗ ಸಮೃದ್ಧಿ ಕೇಂದ್ರದ ಮೂಲಕ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ. ಉದ್ಯೋಗಾವಕಾಶಗಳ ಬಗ್ಗೆ ನಿರಂತರ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು. ತಹಸೀಲ್ದಾರ್ ರೇಣುಕಾ ಎಸ್. ಮಾತನಾಡಿ, ಸ್ವಾತಂತ್ರ‍್ಯ ಪೂರ್ವ ಮತ್ತು ನಂತರದ ದಿನಗಳಲ್ಲಿ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಏಕೀಕರಣ ಹೋರಾಟದ ಫಲದಿಂದ ಕರ್ನಾಟಕ ರಾಜ್ಯವಾಗಿ ಉದಯವಾಗಿದೆ. ಆಯಾ ಕಾಲಘಟ್ಟದಲ್ಲಿ ರಾಜ್ಯದ ಏಳಿಗೆಗೆ ಶ್ರಮಿಸಿದ ಎಲ್ಲ ಮಹನೀಯರು ಸ್ಮರಣೀಯರಾಗಿದ್ದಾರೆ. ನಮ್ಮ ನಾಡಿನ ಇತಿಹಾಸ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸುವ ಪ್ರತಿಜ್ಞೆಯನ್ನು ನಾವಿಂದು ಮಾಡಬೇಕಿದೆ ಎಂದರು. ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷರಾದ ಖುರ್ಷಿದ್ ಹುಲ್ಲತ್ತಿ, ರೇಣುಕಾ ಆರೆಗೊಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಶಿವು ತಳವಾರ, ಮೇಕಾಜಿ ಕಲಾಲ, ಸುರೇಶ ನಾಗಣ್ಣನವರ, ವಿರೂಪಾಕ್ಷಪ್ಪ ಕಡಬಗೇರಿ, ಶಂಶಿಯಾ ಬಾಳೂರ, ಷಣ್ಮುಖಪ್ಪ, ವಿನಾಯಕ ಬಂಕನಾಳ, ಮಾರ್ತಾಂಡಪ್ಪ ಮಣ್ಣಮ್ಮನವರ, ಉಮೇಶ ಮಾಳಗಿ, ಮಧು ಪಾಣಿಗಟ್ಟಿ, ಶಿವು ಭದ್ರಾವತಿ, ಸೋಮಶೇಖರ ಕೋತಂಬರಿ, ತಾಪಂ ಇಒ ಪರಶುರಾಮ ಪೂಜಾರ, ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ. ಜಗದೀಶ ಸೇರಿದಂತೆ ಇನ್ನೂ ಹಲವರು ಇದ್ದರು. ಶ್ವಾನ ತರಬೇತಿದಾರ ಬಮ್ಮನಹಳ್ಳಿಯ ರಂಜಿತ್ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಶ್ವಾನ ಪ್ರದರ್ಶನ ಗಮನ ಸೆಳೆಯಿತು. ನಗರದ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ನಾಡು, ನುಡಿಯ ಇತಿಹಾಸ ಸಾರುವ ಗೀತೆಗಳಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ