ಕುಟುಂಬ ಸುರಕ್ಷತೆಗಾಗಿ ಹೆಲ್ಮೆಟ್‌ ಧರಿಸಿ

KannadaprabhaNewsNetwork |  
Published : May 22, 2026, 02:30 AM IST
ಕಂಪ್ಲಿಯಲ್ಲಿ ಹೆಲ್ಮೆಟ್ ಜಾಗೃತಿ ಜಾಥಾ ನಡೆಯಿತು. | Kannada Prabha

ಸಾರಾಂಶ

ಠಾಣಾ ವ್ಯಾಪ್ತಿಯಲ್ಲಿ ಪ್ರತಿವರ್ಷ ಸರಾಸರಿ 13ರಿಂದ 15 ಮಂದಿ ಹೆಲ್ಮೆಟ್ ಧರಿಸದ ಕಾರಣ ರಸ್ತೆ ಅಪಘಾತಗಳಲ್ಲಿ ಮರಣ ಹೊಂದುತ್ತಾರೆ.

ಕಂಪ್ಲಿ: ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗುರುವಾರ ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ನಡೆಸಿ, ವಾಹನ ಸವಾರರಿಗೆ ಸುರಕ್ಷಿತ ಸಂಚಾರದ ಕುರಿತು ಅರಿವು ಮೂಡಿಸಲಾಯಿತು.

ಕಾರ್ಯಕ್ರಮಕ್ಕೆ ತಹಸೀಲ್ದಾರ್ ಜೂಗಲ ಮಂಜುನಾಯಕ ಚಾಲನೆ ನೀಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ನಿರ್ಲಕ್ಷ್ಯ ತೋರಿಸುವ ಪರಿಣಾಮ ಅಪಘಾತಗಳಲ್ಲಿ ಜೀವಹಾನಿ ಸಂಭವಿಸುತ್ತಿದೆ. ಹೆಲ್ಮೆಟ್ ಧರಿಸುವುದು ಕೇವಲ ನಿಯಮ ಪಾಲನೆ ಮಾತ್ರವಲ್ಲ, ಅದು ಜೀವ ರಕ್ಷಕ ಕವಚವಾಗಿದ್ದು, ಪ್ರತಿಯೊಬ್ಬ ವಾಹನ ಸವಾರರೂ ತಮ್ಮ ಹಾಗೂ ತಮ್ಮ ಕುಟುಂಬದ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಹೇಳಿದರು.

ಪಿಐ ಕೆ.ಬಿ. ವಾಸುಕುಮಾರ್ ಮಾತನಾಡಿ, ಠಾಣಾ ವ್ಯಾಪ್ತಿಯಲ್ಲಿ ಪ್ರತಿವರ್ಷ ಸರಾಸರಿ 13ರಿಂದ 15 ಮಂದಿ ಹೆಲ್ಮೆಟ್ ಧರಿಸದ ಕಾರಣ ರಸ್ತೆ ಅಪಘಾತಗಳಲ್ಲಿ ಮರಣ ಹೊಂದುತ್ತಾರೆ. ಪ್ರಸಕ್ತ ವರ್ಷದಲ್ಲಿಯೇ ನಡೆದ ಅಪಘಾತಗಳಲ್ಲಿ ಐವರು ಹೆಲ್ಮೆಟ್ ಧರಿಸದ ಕಾರಣ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೂ. 1ರಿಂದ ಹೆಲ್ಮೆಟ್ ಧಾರಣೆ ಕಡ್ಡಾಯಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ₹500 ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಸಾರ್ವಜನಿಕರ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಜಾರಿಗೆ ತಂದಿರುವ “ಲಾಕ್ಡ್ ಹೌಸ್ ಬೀಟ್ ಸಿಸ್ಟಮ್” ಕುರಿತು ಮಾಹಿತಿ ನೀಡಿದರು. ಮನೆಗಳಿಗೆ ಬೀಗ ಹಾಕಿ ಊರಿಗೆ ತೆರಳುವ ನಾಗರಿಕರು ಪೊಲೀಸ್ ಇಲಾಖೆಯ ವಾಟ್ಸ್‌ಆ್ಯಪ್‌ ಸಂಖ್ಯೆ 9480803083ಕ್ಕೆ ಮನೆಯ ಮುಂಭಾಗದ ಸೆಲ್ಫಿ ಚಿತ್ರ, ಪೂರ್ಣ ವಿಳಾಸ, ಏರಿಯಾ ಹಾಗೂ ಲೊಕೇಷನ್ ಮಾಹಿತಿ ಕಳುಹಿಸಿದಲ್ಲಿ ರಾತ್ರಿ ವೇಳೆ ಪೊಲೀಸರು ಎರಡು ಬಾರಿ ಮನೆಗಳ ಪರಿಶೀಲನೆ ನಡೆಸಿ ರಕ್ಷಣೆ ಒದಗಿಸಲಿದ್ದಾರೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ “ಸೋಶಿಯಲ್ ಮಾನಿಟರಿಂಗ್ ಸೆಲ್” ಅನ್ನು ಜಾರಿಗೊಳಿಸಲಾಗಿದೆ. ಸಂಶಯಾಸ್ಪದ ವ್ಯಕ್ತಿಗಳು ಹಾಗೂ ಗುಂಪುಗಳ ಸಾಮಾಜಿಕ ಜಾಲತಾಣ ಚಟುವಟಿಕೆ ಮೇಲೆ ನಿಗಾ ವಹಿಸಲಾಗುವುದು. ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜ ವಿರೋಧಿ ಚಟುವಟಿಕೆ, ಪ್ರಚೋದನಕಾರಿ ಅಥವಾ ಕಾನೂನುಬಾಹಿರ ಸಂದೇಶಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಎಎಸ್‌ಐ ಬಸವರಾಜ, ಗೃಹ ರಕ್ಷಕ ದಳದ ಘಟಕಾಧಿಕಾರಿ ಹೊನ್ನೂರ್‌ವಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಜೀತ್ ನಾಯ್ಕರ ವಿನೂತನ ಕಲ್ಪನೆ ಮಾದರಿ: ಸುರೇಶ ನಾಯ್ಕ
ಅಕ್ರಮ ಗೋಸಾಗಾಟ, ಗೋಹತ್ಯೆ ನಿಯಂತ್ರಣಕ್ಕೆ ಆಗ್ರಹ