ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳರಾಜ್ಯದಲ್ಲಿ ಹವಾಮಾನ ವೈಪರೀತ್ಯಗಳಿಂದ ಗೇರು, ಮಾವು ಹಾಗೂ ಹಲಸು ಫಸಲಿನ ಮೇಲೆ ಭಾರಿ ಹೊಡೆತ ಬಿದ್ದಿದೆ. ಈ ಬಾರಿ ಪ್ರತಿಕೂಲ ಹವಾಮಾನ, ನುಸಿ ರೋಗಗಳಿಂದ ಫಸಲು ಕಡಿಮೆಯಾಗಿದೆ. ಕಳೆದ ಎರಡು ವಾರಗಳಲ್ಲಿ ಮತ್ತೆ ಗೇರು, ಮಾವು, ಹಲಸು ಮರಗಳು ಹೂ ಬಿಟ್ಟಿದ್ದು ಮಳೆಬಂದರೆ ಫಸಲು ಕಷ್ಟ ಸಾಧ್ಯ.* ಪ್ರತಿಕೂಲ ಹವಾಮಾನದ ಪ್ರಭಾವ:
ಡಿಸೆಂಬರ್‌ನಿಂದ ಜನವರಿ ತನಕ ಮಳೆ ಸುರಿದ ಪರಿಣಾಮ ಈ ಬಾರಿ ಫಸಲು ಕುಂಠಿತವಾಗಿದೆ. ಚಳಿಯ ಜೊತೆ ಶುಷ್ಕ ವಾತಾವರಣ, ಬಿಸಿಲು ಇದ್ದರೆ ಮಾತ್ರ ಗೇರು, ಮಾವು, ಹಲಸು ಮರಗಳು ಹೂ ಬಿಡಲು ಪೂರಕವಾಗಿದೆ. ಇಬ್ಬನಿ, ಮೋಡ ಮುಸುಕಿದ ವಾತಾವರಣವಿದ್ದರೆ ಹೂ ಬಿಡಲು ಸಾಧ್ಯವಿಲ್ಲ.* ಒಂದು ತಿಂಗಳು ವಿಳಂಬಈ ಬಾರಿ ಫೆಬ್ರವರಿ ಅಂತ್ಯ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಮಾವು, ಹಲಸು ಮರಗಳು ಹೂ ಬಿಟ್ಟಿದ್ದು ಒಂದು ತಿಂಗಳ ಬಳಿಕ ಫಸಲು ಕಟ್ಟಲು ಆರಂಭವಾಗಿದೆ. ಆದರೆ ಮೋಡ ಮುಸುಕಿದ ವಾತಾವರಣವಿದ್ದು ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ಕರಟಿ ಹೋಗುತ್ತಿವೆ. ಹೂ ಒಂದು ತಿಂಗಳು ವಿಳಂಬವಾಗಿದ್ದರೂ ಕೂಡ ಫಸಲು ನಿಲ್ಲಲು ಯೋಗ್ಯವಾದ ವಾತಾವರಣ ನಿರ್ಮಾಣವಾಗಿಲ್ಲ. ಏಪ್ರಿಲ್‌ನಲ್ಲಿ ಮಳೆ ಬಂದರೆ ಫಸಲು ಕ್ಷೀಣಿಸಬಹುದು.* ಒಟ್ಟು ಬೆಳೆ
ಕರ್ನಾಟಕ ರಾಜ್ಯದಲ್ಲಿ ಒಟ್ಟು ಮಾವು, ಗೇರು, ಹಲಸಿನ ಪೈಕಿ ಉಡುಪಿ ಜಿಲ್ಲೆಯ ಪಾಲು ತುಂಬಾ ಕಡಿಮೆ. ಉಡುಪಿ ಜಿಲ್ಲೆಯಲ್ಲಿ ವಾರ್ಷಿಕವಾಗಿ ಸುಮಾರು 440.49 ಹೆಕ್ಟೇರ್ ಪ್ರದೇಶಗಳಲ್ಲಿ ಮಾವು ಬೆಳೆಯುತ್ತಿದ್ದು 4900 ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತದೆ. 17386 ಹೆಕ್ಟೇರ್ ಪ್ರದೇಶಗಳಲ್ಲಿ ಗೇರು ಬೆಳೆಯಿದ್ದು, ಅದರಲ್ಲಿ 34772 ಮೆಟ್ರಿಕ್ ಟನ್ ಗೇರು ಬೀಜ ಉತ್ಪಾದನೆಯಾಗುತ್ತದೆ. ಈ ಬಾರಿಯ ಹವಾಮಾನ ವೈಪರೀತ್ಯಗಳಿಂದ ಬೆಳೆ ಕುಂಠಿತ ಗೊಳ್ಳುವ ಆತಂಕ ಬೆಳೆಗಾರರಲ್ಲಿದೆ.ಸಾಮಾನ್ಯವಾಗಿ ಗೇರು ಹೂವಿನಿಂದ ಬೀಜವಾಗಲು 60 ದಿನಗಳು ಬೇಕಾಗುತ್ತದೆ. ಬಿಸಿ ಹೆಚ್ಚಾದಂತೆ 40-50 ದಿನಗಳಲ್ಲಿ ಬೀಜವಾಗಲು ಸಹಕಾರಿಯಾಗುತ್ತದೆ. ಮಾವು, ಹೂವಿನಿಂದ ಕಾಯಿಯಾಗಲು ಸಾಮಾನ್ಯವಾಗಿ 50 -55 ದಿನಗಳು ಹಿಡಿಯುತ್ತವೆ.* ನುಸಿ ಪೀಡೆ ಕಾಟಮಾವು ಹಾಗೂ ಗೇರು ಮರಗಳು ತಡವಾಗಿ ಹೂ ಬಿಟ್ಟಿದ್ದರೂ ನುಸಿ ಪೀಡೆ ಬೆಳೆಗಾರರನ್ನು ಹೈರಾಣವಾಗಿಸಿದೆ. ಬಿಸಿಲಿನ ಜೊತೆ ಮೋಡ ಮುಸುಕಿದ ವೇಳೆಯಲ್ಲಿ ಸೂರ್ಯಾಸ್ತ ಮಾನ ಹಾಗೂ ಸೂರ್ಯೋದಯದ ಸಂದರ್ಭ ಟಿ ಆಕಾರದ ಸೊಳ್ಳೆಯು ಸಂತಾನೋತ್ಪತ್ತಿ ನಡೆಸುತ್ತದೆ. ಈ ವೇಳೆ ಹೂವಿನ ಕಾಂಡದ ರಸವನ್ನು ಹೀರಿ ಹೂವನ್ನು ಬಾಡುವಂತೆ ಮಾಡುತ್ತದೆ.* ನುಸಿ ಪೀಡೆಗೆ ಔಷಧವೇನು?ಮೊನೋಪೊಟಸ್‌ಗಿಂತಲೂ ಕರಾಟೆ ಎಂಬ ಔಷಧ ಬಳಕೆಗೆ ಗೇರು ಕೃಷಿಕರು ಆಸಕ್ತಿ ತೋರುತ್ತಿದ್ದಾರೆ. 100 ಲೀ. ನೀರಿಗೆ 125 ಮಿಲಿ ಕರಾಟೆ ಔಷಧದ ಬಳಕೆ ಹಾಗೂ ಇದರ ಜತೆಗೆ 15:15:15 ಎನ್ನುವ ಔಷಧಿಯನ್ನು 100 ಲೀ.ಗೆ ಅರ್ಧ ಕೆ.ಜಿ.ಯಂತೆ ಬಳಕೆ ಮಾಡಿದರೆ ಟಿ-ಸೊಳ್ಳೆ ಕಾಟವನ್ನು ಸ್ವಲ್ಪಮಟ್ಟಿಗೆ ತಪ್ಪಿಸಬಹುದು.ಈ ಬಾರಿ ಶೇ.30ರಷ್ಟು ಹಣ್ಣಿನ ಕೊರತೆ ಉಡುಪಿ ಜಿಲ್ಲೆಯಲ್ಲಿ ಆಗಬಹುದು. ಜನವರಿಯಲ್ಲಿ ಸುರಿದ ಮಳೆ, ಪ್ರತಿಕೂಲ ಹವಾಮಾನವೇ ತಡವಾಗಿ ಹೂ ಬಿಡಲು ಕಾರಣವಾಗಿದೆ. ಜೂನ್‌ನಲ್ಲಿ ಹಣ್ಣುಗಳ ಕೊಯ್ಲು ಮಾಡಿದರೂ ಗುಣಮಟ್ಟದ ಹಣ್ಣುಗಳ ಕೊರತೆಯಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಬಿಸಿ ಹೆಚ್ಚಾದಂತೆ ಮಳೆ ಬರುವಿಕೆಯ ಸಾಧ್ಯತೆ ಹೆಚ್ಚು.
। ಡಾ.ಚೈತನ್ಯ ಎಚ್.ಎಸ್., ವಿಜ್ಞಾನಿ, ಕೃಷಿ ಹಾಗೂ ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ-----
ಹವಾಮಾನ ಬದಲಾವಣೆಯೇ ಬಿಸಿ ಹೆಚ್ಚಲು ಕಾರಣ. ಗೇರು, ಮಾವುಗಳ ಫಸಲು ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಅತಿ ವಿಳಂಬವಾಗಿ ಮರಗಳು ಹೂ ಬಿಟ್ಟಿವೆ.। ರಾಜೇಶ್ ಶೆಟ್ಟಿ, ಎಣ್ಣೆ ಹೊಳೆ ಬೆಳೆಗಾರರು