ನೇಕಾರ ಧ್ವನಿ ಶಾಸಕ ಸವದಿ ತೇಜೋವಧೆ ಸಲ್ಲದು

KannadaprabhaNewsNetwork | Published : Dec 10, 2024 12:30 AM

ಸಾರಾಂಶ

ರಾಜ್ಯ ನೇಕಾರ ಸೇವಾ ಸಂಘಟನೆ ಹೆಸರಲ್ಲಿ ಶಾಸಕ ಸಿದ್ದು ಸವದಿ ತೇಜೋವಧೆಗೆ ಮುಂದಾಗಿರುವ ಶಿವಲಿಂಗ ಟಿರಕಿ ಅವರು ಶಾಸಕರ ವಿರುದ್ಧದ ಹೋರಾಟದ ೩ನೇ ಅಂಶ ಕೈಬಿಟ್ಟರೆ ಮಾತ್ರ ಬೆಂಬಲ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನೇಕಾರ ಧ್ವನಿಯಾಗಿ ಸದನದಲ್ಲಿ ನೇಕಾರರ ಭವಣೆ ಬಿಚ್ಚಿಟ್ಟು, ನೇಕಾರರಿಗೆ ಸೌಲಭ್ಯ ಸಿಗಲು ಕಾರಣರಾಗಿರುವ ಶಾಸಕ ಸಿದ್ದು ಸವದಿ ವಿರುದ್ಧ ತೇಜೋವಧೆ ಮಾಡುವುದು ಬಿಟ್ಟು, ನೇಕಾರ ಕಲ್ಯಾಣಕ್ಕೆ ಹೋರಾಟ ನಡೆಸಲು ನಾವೆಲ್ಲರೂ ರಾಷ್ಟ್ರೀಯ ನೇಕಾರ ಸೇವಾ ಸಂಘದೊಡನೆ ಬದ್ಧರಾಗಿದ್ದೇವೆಂದು ಆನಂದ ಜಗದಾಳ ಒತ್ತಿ ಹೇಳಿದರು.

ರಾಜ್ಯ ನೇಕಾರ ಸೇವಾ ಸಂಘಟನೆ ಹೆಸರಲ್ಲಿ ಶಾಸಕ ಸಿದ್ದು ಸವದಿ ತೇಜೋವಧೆಗೆ ಮುಂದಾಗಿರುವ ಶಿವಲಿಂಗ ಟಿರಕಿ ಅವರು ಶಾಸಕರ ವಿರುದ್ಧದ ಹೋರಾಟದ ೩ನೇ ಅಂಶ ಕೈಬಿಟ್ಟರೆ ಮಾತ್ರ ಬೆಂಬಲಿಸುವುದಾಗಿ ಇಲ್ಲವಾದಲ್ಲಿ ನಮ್ಮ ಹೋರಾಟ ಭಿನ್ನವಾಗಿರುತ್ತದೆಂದು ಭಾನುವಾರ ರಾತ್ರಿ ನಡೆದ ನೇಕಾರ ಸಭೆಯಲ್ಲಿ ಬಹುತೇಕ ನಾಯಕರು ಸ್ಪಷ್ಟಪಡಿಸಿದರು.

೫೫ ವಯೋಮಾನದ ನೇಕಾರರಿಗೆ ಮಾಸಿಕ ₹೫ಸಾವಿರ ಮಾಸಾಶನ ನೀಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳು ನೇಕಾರಿಕೆ ಉದ್ಯೋಗ ಉಳಿಯಲು ಮುಖ್ಯವಾಗಿದೆ. ಅಗೌಣ ಸಂಗತಿ ಮುಂದಿಟ್ಟು, ಮುಗ್ಧ ನೇಕಾರರನ್ನು ದಾರಿ ತಪ್ಪಿಸುತ್ತಿರುವುದು ಸರಿ ಮಾರ್ಗವಲ್ಲ. ಬೆಳಗಾವಿ ಚಲೋ ಕಾರ್ಯಕ್ರಮದಲ್ಲಿ ಐದು ನೂರು ನೇಕಾರರು ಪಾದಯಾತ್ರೆ ನಡೆಸುತ್ತಿದ್ದು, ನೇಕಾರರನ್ನು ಬಲಿಪಶು ಮಾಡದೇ ನ್ಯಾಯೋಚಿತ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಲು ನೇಕಾರ ಸಭೆ ಆಗ್ರಹಿಸಿತು.

ಪರಮಾನಂದ ಭಾವಿಕಟ್ಟಿ ಮಾತನಾಡಿ, ರಾಜ್ಯ ಸರ್ಕಾರ ನೇಕಾರರ ಬಾಕಿ ವಿದ್ಯುತ್ ಬಿಲ್ ಪೂರ್ಣ ತುಂಬಬೇಕು. ೨೦ ತಿಂಗಳ ವಿದ್ಯುತ್ ಬಾಕಿ ₹೪ ರಿಂದ ₹೫ ಲಕ್ಷ ಮೊತ್ತವಾಗುತ್ತದೆ. ನಮ್ಮಲ್ಲಿ ಕಡಿಮೆ ಬಳಕೆಯ ಮೋಟಾರ್‌ಗಳಿರುವುದರಿಂದ ಪ್ರತಿ ನೇಕಾರರ ₹೧೬ಸಾವಿರ ಬಿಲ್ ಬಾಕಿಯಾಗಿದೆ. ನೇಕಾರರ ಬಾಕಿ ವಿದ್ಯುತ್ ಬಿಲ್‌ನ್ನು ಸರ್ಕಾರವೇ ಭರಿಸಬೇಕೆಂದರು. ನೇಕಾರಿಕೆ ಉದ್ಯಮಕ್ಕೆ ಕಚ್ಚಾನೂಲು, ಕಚ್ಚಾ ಪದಾರ್ಥಗಳು ನಿಯಮಿತವಾಗಿ ದೊರೆಯುವಂತೆ ಉದ್ಯೋಗ ಭದ್ರತೆ ಒದಗಿಸಲು ಬಜೆಟ್‌ನಲ್ಲಿ ನೇಕಾರ ಪ್ಯಾಕೇಜ್ ಎಂದು ಪ್ರತ್ಯೇಕ ಅನುದಾನ ಮೀಸಲಿಡಬೇಕು. ತಂತ್ರಜ್ಞಾನ ಬಳಕೆ ಕೌಶಲಾಧರಿತ ನೇಯ್ಗೆಯತ್ತ ಯುವ ನೇಕಾರರನ್ನು ತರಬೇತಿ ನೀಡಲು ಸರ್ಕಾರ ಯೋಜನೆ ರೂಪಿಸಬೇಕು ಎಂದರು.

ರಾಜ್ಯದಲ್ಲಿ ೮೦ ಲಕ್ಷ ನೇಕಾರರಿದ್ದು, ಅವರ ಅಭ್ಯುದಯಕ್ಕೆ ಪ್ರತ್ಯೇಕ ಅನುದಾನ ಮೀಸಲಿಡಬೇಕು. ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಕೆಎಚ್‌ಡಿಸಿ ನಿಗಮದ ಅಧ್ಯಕ್ಷರ ಹಗರಣದ ಬಗ್ಗೆ ತಪ್ಪು ಆರೋಪ ಮಾಡುವುದನ್ನು ನಿಲ್ಲಿಸಬೇಕು. ೫೩ ನೇಕಾರರ ಆತ್ಮಹತ್ಯೆಗಳು ನಡೆದಿದ್ದು, ಅವಲಂಬಿತ ಕುಟುಂಬಸ್ಥರಿಗೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ನೇಯ್ಗೆ ಉದ್ಯಮದ ನೈಜ ಸಮಸ್ಯೆಗೆ ಕಾರಣ ತಿಳಿದು ಉದ್ಯಮದ ಉಳಿಕೆಗೆ ಪರಿಹಾರ ಕಾಣಬೇಕು. ಉದ್ಯೋಗ ಉಳಿಸಿ, ನೇಕಾರರ ಸಂರಕ್ಷಿಸಲು ಸರ್ಕಾರ ಮುಂದಾಗಬೇಕು ಎಂದರು. ನೇಕಾರರ ಮನೆಗಳ ಸಿಟಿಎಸ್ ಉತಾರ ನೀಡಲು ಟಿರಕಿ ವಿಫಲವಾದರೆ ನೇಕಾರರು ಸುಮ್ಮನಿರೋಲ್ಲವೆಂದು ಮಹಾದೇವ ನುಚ್ಚಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಬಹುತೇಕ ನೇಕಾರರು ರಾಷ್ಟ್ರೀಯ ನೇಕಾರ ಸೇವಾ ಸಂಘದ ನೇತೃತ್ವದಲ್ಲಿ ಹೋರಾಟ ನಡೆಸಲು ನಿರ್ಧರಿಸಿದರು.

Share this article