ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ವೀಕೆಂಡ್ ಹಿನ್ನೆಲೆಯಲ್ಲಿ ಎರಡು ದಿನ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದು, ಅಂದಾಜು ಒಂದೂವರೆ ಲಕ್ಷಕ್ಕೂ ಅಧಿಕ ದೇಶ, ವಿದೇಶಿ ಪ್ರವಾಸಿಗರು ಹಂಪಿ ಸ್ಮಾರಕಗಳನ್ನು ವೀಕ್ಷಿಸಿದ್ದಾರೆ.
ಹಂಪಿಯಲ್ಲಿ ವಿರೂಪಾಕ್ಷೇಶ್ವರ ದೇವಾಲಯ, ಎದುರು ಬಸವಣ್ಣ ಮಂಟಪ, ಕಡಲೆ ಕಾಳು, ಸಾಸಿವೆ ಕಾಳು ಗಣಪತಿ ಮಂಟಪ, ಶ್ರೀಕೃಷ್ಣ ದೇವಾಲಯ, ಹಜಾರ ರಾಮ ದೇವಾಲಯ, ಮಹಾನವಮಿ ದಿಬ್ಬ, ಅರಮನೆ ಅಧಿಷ್ಠಾನ, ಪಾನ್ ಸುಪಾರಿ ಬಜಾರ್, ಗೆಜ್ಜಲ ಮಂಟಪ, ಕುದುರೆ ಗೊಂಬೆ ಮಂಟಪ, ಕೋದಂಡ ರಾಮ ದೇವಾಲಯ, ಕಮಲ ಮಹಲ್, ಆನೆಲಾಯ, ರಾಜರ ರಹಸ್ಯ ಸಭಾಗೃಹ, ಪುಷ್ಕರಣಿಗಳು, ಪುರಂದರ ದಾಸರ ಮಂಟಪ, ರಾಜರ ತುಲಾಭಾರ, ಮಾಲ್ಯವಂತ ರಘುನಾಥ ದೇವಾಲಯ, ವಿಜಯ ವಿಠಲ ದೇವಾಲಯ, ಸಪ್ತಸ್ವರ ಮಂಟಪ, ಕಲ್ಲಿನತೇರು, ಅಲೆಕ್ಸಾಂಡರ್ ಗ್ರೀನ್ ಲಾ ತನ್ನ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿರುವ ಮರುಭೂಮಿಯಲ್ಲಿ ದೊರೆಯುವ ಗಿಡವೊಂದನ್ನು ವೀಕ್ಷಿಸಿ ಪ್ರವಾಸಿಗರು ಖುಷಿಯಾದರು.
ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್, ದರೋಜಿ ಕರಡಿಧಾಮ ಮತ್ತು ತುಂಗಭದ್ರಾ ಜಲಾಶಯವನ್ನೂ ಪ್ರವಾಸಿಗರು ವೀಕ್ಷಿಸಿದರು. ತುಂಗಭದ್ರಾ ಜಲಾಶಯಕ್ಕೆ ಪ್ರವಾಸಿಗರು ಬೆಳಗ್ಗೆ 7:30ರಿಂದಲೇ ಆಗಮಿಸಿದ್ದು, ವಿಶೇಷವಾಗಿತ್ತು.ಈ ವೇಳೆ ಕನ್ನಡಪ್ರಭದೊಂದಿಗೆ ಮಾತನಾಡಿದ ಪ್ರವಾಸಿಗರು, ಬಿಸಿಲು ಏರುವ ಮುನ್ನವೇ ತುಂಗಭದ್ರಾ ಜಲಾಶಯ ವೀಕ್ಷಿಸಿ, ಹಂಪಿ ಸ್ಮಾರಕಗಳನ್ನು ವೀಕ್ಷಿಸುತ್ತೇವೆ. ಹಂಪಿ ಪ್ರದೇಶವನ್ನು ಮೂರು ದಿನಗಳವರೆಗೆ ನೋಡಿದರೂ ಸಾಕಾಗುವುದಿಲ್ಲ, ನಿಜಕ್ಕೂ ಹಂಪಿ ಪ್ರವಾಸೋದ್ಯಮಕ್ಕೆ ಬಂದರೆ, ಬೋರ್ ಆಗುವುದಿಲ್ಲ ಎಂದು ಅಭಿಪ್ರಾಯಿಸಿದರು.