ಗಿಡಗಳನ್ನು ನೆಡುವ ಮೂಲಕ ಹೊಸ ವರ್ಷಕ್ಕೆ ಸ್ವಾಗತ

KannadaprabhaNewsNetwork |  
Published : Jan 04, 2024, 01:45 AM IST
 ಗಿಡಗಳನ್ನು ನೆಡುವ ಮೂಲಕ ಹೊಸ ವರ್ಷಕ್ಕೆ ಸ್ವಾಗತ | Kannada Prabha

ಸಾರಾಂಶ

ಚಾಮರಾಜನಗರ ಈಶ್ವರಿ ಸೋಶಿಯಲ್ ಟ್ರಸ್ಟ್ ವತಿಯಿಂದ ನಗರದ ವಿವೇಕನಗರ ಬಡಾವಣೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಈಶ್ವರಿ ಸೋಶಿಯಲ್ ಟ್ರಸ್ಟ್ ವತಿಯಿಂದ ನಗರದ ವಿವೇಕನಗರ ಬಡಾವಣೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಯಿತು.

ಜಿಲ್ಲಾದ್ಯಂತ ಸುಮಾರು ೧೦ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುತ್ತಿರುವ ಸಾಲು ಮರದ ವೆಂಕಟೇಶ್ ಅವರು ನೂತನ ೨೦೨೪ ವರ್ಷವನ್ನು ಗಿಡಗಳನ್ನು ನೆಡುವ ಮೂಲಕ ಸ್ವಾಗತಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶ ಎಂ. ಶ್ರೀಧರ ಮತ್ತು ನ್ಯಾಯಾಧೀಶೆ ಚಂಪಕಾ, ಪರಿಸರ ಅಧಿಕಾರಿ ಉಮಾಶಂಕರ್ ಅವರು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾಧೀಶ ಎಂ. ಶ್ರೀಧರ ಅವರು, ಹೊಸ ವರ್ಷವನ್ನು ಗಿಡಗಳನ್ನು ನೆಡುವ ಮೂಲಕ ಸ್ವಾಗತಿಸುವ ವೆಂಕಟೇಶ್ ಅವರ ಪರಿಕಲ್ಪನೆ ಸೊಗಸಾಗಿದೆ. ಬಡಾವಣೆಯಲ್ಲಿ ವರ್ಷವಿಡೀ ಹಸಿರು ನಳನಳಿಸಲಿ. ಬದುಕು ಹಸಿರಾಗಿರಲಿ ಎಂಬ ಉದ್ದೇಶದಿಂದ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ವೃತ್ತಿಯಲ್ಲಿ ಆಡಿಟರ್ ಆಗಿರುವ ವೆಂಕಟೇಶ್ ಅವರು ತಮ್ಮ ವೃತ್ತಿಗಿಂತ ಹೆಚ್ಚಾಗಿ, ಗಿಡ ನೆಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ತಮ್ಮ ಸಂಪಾದನೆಯ ಬಹುಪಾಲನ್ನು ಖರ್ಚು ಮಾಡಿ, ಸಾಲ ಮಾಡಿ, ನಗರದಾದ್ಯಂತ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಅವರ ಈ ಸಾಧನೆಯನ್ನು ಎಷ್ಟು ಹೊಗಳಿದರೂ ಸಾಲದು. ಅವರು ಗಿಡ ನೆಡುವ ಕೆಲಸಕ್ಕೆ ಕೈ ಹಾಕದಿದ್ದರೆ, ಚಾಮರಾಜನಗರದಲ್ಲಿ ಇಂದು ಸಾಲು ಮರಗಳೇ ಇರುತ್ತಿರಲಿಲ್ಲ ಎಂದು ಅವರು ಹೇಳಿದರು.

ಪ್ರತಿಯೊಬ್ಬ ನಾಗರಿಕರೂ ಗಿಡಗಳನ್ನು ನೆಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ವೆಂಕಟೇಶ್ ಅವರನ್ನು ಮಾದರಿಯಾಗಿಟ್ಟುಕೊಂಡು ಇನ್ನಷ್ಟು ಜನರು ಗಿಡಗಳನ್ನು ನೆಡಲು ಮುಂದೆ ಬರಬೇಕು. ವೆಂಕಟೇಶ್ ಅವರು ನೆಟ್ಟ ಗಿಡಗಳನ್ನು ನಾಗರಿಕರು ಕಾಪಾಡಿಕೊಳ್ಳಬೇಕು. ನೀರು ಹಾಕಿ ಪೋಷಿಸಬೇಕು ಎಂದು ನ್ಯಾಯಾಧೀಶರು ಸಲಹೆ ನೀಡಿದರು.

ಪರಿಸರ ಅಧಿಕಾರಿ ಉಮಾಶಂಕರ್ ಮಾತನಾಡಿ, ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸಿದರೆ ಪರಿಸರದಲ್ಲಿ ಶುದ್ಧಗಾಳಿ ತಂಪು ದೊರಕುತ್ತದೆ. ಹಾಗಾಗಿ ನಾಗರೀಕರು ಗಿಡ ನೆಟ್ಟು ಬೆಳೆಸಬೇಕು ಎಂದು ಹೇಳಿದರು.

ವೆಂಕಟೇಶ್ ಮಾತನಾಡಿ, ವಿವೇಕ ನಗರ ಬಡಾವಣೆಯಲ್ಲಿ ಗಿಡ ಮರಗಳೇ ಇರಲಿಲ್ಲ. ಹೀಗಾಗಿ ಇಲ್ಲಿನ ನಾಗರೀಕರು ತಮ್ಮ ಬಡಾವಣೆಗೆ ಸಾಲು ಗಿಡಗಳನ್ನು ನೆಟ್ಟುಕೊಡಬೇಕೆಂದು ಮನವಿ ಮಾಡಿದ್ದರು. ಹಾಗಾಗಿ ಹೊಸ ವರ್ಷದ ಮೊದಲ ದಿನ ಗಿಡಗಳನ್ನು ನೆಟ್ಟು ನೂತನ ವರ್ಷವನ್ನು ಸ್ವಾಗತಿಸಲಾಗುತ್ತಿದೆ ಎಂದರು.

ನಗರದ ನಾಗರೀಕರು ನಾವು ನೆಟ್ಟ ಗಿಡಗಳನ್ನು ನೀರು ಹಾಕಿ ಕಾಪಾಡಿಕೊಳ್ಳಬೇಕು. ಗಿಡಗಳನ್ನು ಕಿತ್ತು ಹಾಕುವ ಮರಗಳನ್ನು ಕಡಿಯುವ ಪ್ರಯತ್ನ ಮಾಡಬಾರದು. ಮರಗಳು ನಮಗೆ ಉಸಿರಾಡಲು ಆಮ್ಲಜನಕ ನೀಡುತ್ತವೆ. ಒಂದು ಬಡಾವಣೆ ಅಥವಾ ರಸ್ತೆಯಲ್ಲಿ ಮರಗಳಿದ್ದರೆ ಅದು ಸುಂದರವಾಗಿ ಕಾಣುತ್ತದೆ ಎಂದು ಹೇಳಿದರು.

ಬಡಾವಣೆ ನಿವಾಸಿಗಳಾದ ಜಿ. ಪ್ರಶಾಂತ್, ನಿವೃತ್ತ ಪ್ರಾಂಶುಪಾಲ ರಾಚಯ್ಯ, ನ್ಯಾಯಬೆಲೆ ಅಂಗಡಿ ದುಂಡಯ್ಯ, ಪೊಲೀಸ್ ಇಲಾಖೆಯ ವಸಂತ್‌ಕುಮಾರ್, ಸರ್ಪಭೂಷಣ, ಅಕುಲ್, ಪುನರ್ವಿ, ಮೂರ್ತಿ, ಪ್ರಸಾದ್ ಮತ್ತಿತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ