ಹಳಿಯಾಳ: ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು ಬಿಜೆಪಿ ಸೇರ್ಪಡೆಗೆ ಎದುರಾದ ಅಡ್ಡಿ, ಆತಂಕ ನಿವಾರಣೆಯಾಗಿದ್ದು, ಘೋಟ್ನೇಕರ ಸೇರ್ಪಡೆಗೆ ಅಪಸ್ವರ ಎತ್ತಿದ್ದ ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಹಳಿಯಾಳ ವಿಧಾನಸಭಾ ಕ್ಷೇತ್ರದ ಮಂಡಲ ಪದಾಧಿಕಾರಿಗಳು ಒಂದೇ ದಿನದಲ್ಲಿ ಯೂ ಟರ್ನ್ ಹೊಡೆದಿದ್ದು, ಘೋಟ್ನೇಕರ ಅವರ ಸೇರ್ಪಡೆಯನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ.
ಶುಕ್ರವಾರ ಮಾಜಿ ಶಾಸಕ ಸುನೀಲ ಹೆಗಡೆಯರಿಗೆ ಕರೆ ಮಾಡಿ ಘೋಟ್ನೇಕರ ಮಾತನಾಡಿದಲ್ಲದೇ ದಾಂಡೇಲಿ ಮತ್ತು ಜೋಯಿಡಾ ಬಿಜೆಪಿ ಮಂಡಳ ಪ್ರಮುಖರನ್ನು ಭೇಟಿಯಾಗಿ ಬಿಜೆಪಿ ಸೇರ್ಪಡೆಯಾಗುವ ಇರಾದೆ ತಿಳಿಸಿ ಸಹಕಾರ ಕೋರಿದರು.
ಘೋಟ್ನೇಕರ ಸೇರ್ಪಡೆಗೆ ಸ್ವಾಗತ: ಘೋಟ್ನೇಕರ ಅವರ ಬಿಜೆಪಿ ಸೇರ್ಪಡೆ ಸ್ವಾಗತಿಸಿ ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ಮಂಡಲ ಪ್ರಮುಖರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.ಬಿಜೆಪಿ ರಾಜ್ಯ ಸಮಿತಿ ನಿರ್ದೇಶನದಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮ್ಮುಖದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಅವರನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ. ಹೊನ್ನಾವರದಲ್ಲಿ ಚಿರತೆ ಪ್ರತ್ಯಕ್ಷ
ಹೊನ್ನಾವರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಚಿರತೆ ಆತಂಕ ಮತ್ತೆ ಉಂಟಾಗಿದೆ. ಕಡ್ಲೆ ಗ್ರಾಮದಲ್ಲಿ ಮನೆಯ ಆವರಣದಲ್ಲಿದ್ದ ಸಾಕುನಾಯಿ ಹೊತ್ತೊಯ್ದಿದ್ದು, ಜನತೆ ಭಯದಲ್ಲೇ ಕಾಲ ಕಳೆಯುವಂತಾಗಿದೆ.ತಾಲೂಕಿನ ಗ್ರಾಮೀಣ ಭಾಗದ ಜನತೆಯಲ್ಲಿ ಕಾಡುತ್ತಿರುವ ಚಿರತೆ ಕಾಟ ಮತ್ತೆ ಉಲ್ಬಣಿಸಿದ್ದು, ಕಡ್ಲೆ ಗ್ರಾಮದ ಬಾಲಚಂದ್ರ ಪರಮೇಶ್ವರ ಹೆಗಡೆ ಎಂಬವರ ಮನೆಯಲ್ಲಿ ಸಾಕಿದ್ದ ನಾಯಿಮರಿಯನ್ನು ರಾತ್ರಿ ಚಿರತೆ ಹೊತ್ತೊಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೇ ಗ್ರಾಮದ ಕೂಸಗೆರೆ ರಾಮ ಗೌಡ ಮನೆಯ ಆಕಳು ಸಹ ಇತ್ತೀಚೆಗೆ ಚಿರತೆ ದಾಳಿಯಿಂದ ಮೃತಪಟ್ಟಿತ್ತು.ಕೂಡಲೇ ಸಂಬಂಧಪಟ್ಟವರು ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.