ರೇವಾ ವಿಶ್ವವಿದ್ಯಾಲಯದಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ತಾಂತ್ರಿಕೇತರ ಶಿಕ್ಷಣ ಕೋರ್ಸುಗಳಿಗೆ ಪ್ರವೇಶ

KannadaprabhaNewsNetwork |  
Published : Jul 27, 2024, 01:46 AM ISTUpdated : Jul 27, 2024, 10:01 AM IST
Reva | Kannada Prabha

ಸಾರಾಂಶ

ರೇವಾ ವಿಶ್ವವಿದ್ಯಾಲಯದಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ತಾಂತ್ರಿಕೇತರ ಶಿಕ್ಷಣ ಕೋರ್ಸುಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ವರ್ಣರಂಜಿತ ಕಾರ್ಯಕ್ರಮದ ಮೂಲಕ ಸ್ವಾಗತ ನೀಡಲಾಯಿತು.

ಬೆಂಗಳೂರು :  ಪ್ರತಿಷ್ಠಿತ ರೇವಾ ವಿಶ್ವವಿದ್ಯಾಲಯದಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ ತಾಂತ್ರಿಕೇತರ ಶಿಕ್ಷಣ ಕೋರ್ಸುಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ವರ್ಣರಂಜಿತ ಕಾರ್ಯಕ್ರಮದ ಮೂಲಕ ಸ್ವಾಗತ ನೀಡಲಾಯಿತು.

ವಿವಿಯ ಸೌಗಂಧಿಕಾ ಸಮಾರಂಭಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರು ಹಾಗೂ ವಿವಿಯ ಅಧಿಕಾರಿಗಳು ವಿದ್ಯಾರ್ಥಿಗಳ ಸ್ವ ಪರಿಚಯ, ಅವರ ಗುರಿ, ಉದ್ದೇಶಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಿದರಲ್ಲದೆ ಅದಕ್ಕೆ ತಕ್ಕನಾದ ಶಿಕ್ಷಣ, ಸೌಲಭ್ಯಗಳನ್ನು ತಮ್ಮ ವಿವಿಯಲ್ಲಿ ಒದಗಿಸಿಕೊಡುವ ಸಂಪೂರ್ಣ ಭರವಸೆ ನೀಡಿ ಅಭಿನಂದಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೋಟ್‌ ಲೈಫ್‌ ಸ್ಟೈಲ್‌ ಸಹ-ಸಂಸ್ಥಾಪಕ ಅಮನ್‌ ಗುಪ್ತಾ, ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಶಿಕ್ಷಣ, ಕೌಶಲ್ಯ ತರಬೇತಿ ನೀಡುವ ಜೊತೆಗೆ ಅವರಲ್ಲಿ ಉದ್ಯಮಶೀಲತೆ ಮತ್ತು ನಾವೀನ್ಯತೆಗೆ ಉತ್ತೇಜಿಸಬೇಕು. ವಿದ್ಯಾರ್ಥಿಗಳು ಸದಾ ಚೈತನ್ಯಯುತವಾಗಿರಬೇಕು. ತಮ್ಮ ಸಂಶೋಧನಾ ಚಟುವಟಿಕೆ, ಉದ್ಯಮಶೀಲತೆಯ ಪ್ರಯತ್ನ ನಡೆಸುವುದು ಸೇರಿದಂತೆ ಯಾವುದೇ ಪ್ರಯತ್ನದಲ್ಲಿ ವೈಫಲ್ಯಗಳಾದರೆ ಅವುಗಳನ್ನು ಮುಂದಿನ ಪ್ರಯೋಗಗಳಿಗೆ ಅನುಭವಗಳಾಗಿ ಪರಿಗಣಿಸಬೇಕು ಎಂದರು.ನಿರಂತರ ಪ್ರಯತ್ನ ಮತ್ತು ಮರಳಿ ಯತ್ನದಿಂದ ಮಾತ್ರ ಸಾಧನೆ ಅಥವಾ ಯಶಸ್ಸಿನ ಗುರಿ ತಲುಪಲು ಸಾಧ್ಯ. ಇದಕ್ಕೆ ನಾನೇ ಉದಾಹರಣೆ. ನನ್ನ ವೃತ್ತಿಜೀವನದ ಹಾದಿಯಲ್ಲಿ 35 ವಯಸ್ಸಿನವರೆಗೂ ಅನಿಶ್ಚಿತತೆ ಇತ್ತು. ಪದವಿ ಪೂರ್ಣಗೊಳಿಸಿ, ಸಿಎ ಮಾಡಿದ ನಂತರ ಮುಂದೆ ಏನು ಮಾಡಬೇಕೆಂಬ ಯೋಚನೆಯೂ ನನಗಿರಲಿಲ್ಲ. ಐದು ಸ್ಟಾರ್ಟ್‌ ಅಪ್‌ಗಳನ್ನು ಶುರುಮಾಡಿದೆ, ಒಂದೂ ಯಶಸ್ವಿಯಾಗಲಿಲ್ಲ. ನಂತರ ಬೋಟ್‌ಲೈಫ್‌ ಸ್ಟೈಲ್‌ ಸಂಸ್ಥೆ ಕಟ್ಟಿದೆ. ಅದು ಕೈಹಿಡಿಯಿತು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ। ಪಿ.ಶ್ಯಾಮರಾಜು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡಲು ರೇವಾ ವಿಶ್ವವಿದ್ಯಾಲಯ ಬದ್ಧವಾಗಿದೆ. ಕೇವಲ ಸಾಂಪ್ರದಾಯಿಕ ಶಿಕ್ಷಣಕ್ಕಷ್ಟೇ ಸೀಮಿತವಾಗದೆ ಮೌಲ್ಯಾಧಾರಿತ ಶಿಕ್ಷಣ, ಉದ್ಯೋಗ ಭರವಸೆ, ಸಾಧನೆಗಳನ್ನು ಮಾಡಲು ಪ್ರಯತ್ನಿಸುವ ಪ್ರತಿ ವಿದ್ಯಾರ್ಥಿಗೂ ಅಗತ್ಯ ಸೌಲಭ್ಯ ಹಾಗೂ ಸ್ಫೂರ್ತಿ ನೀಡಲಾಗುವುದು. ಎಲ್ಲ ವಿದ್ಯಾರ್ಥಿಗಳು ಸುಶಿಕ್ಷಿತರಾಗುವ ಜೊತೆಗೆ ಉದ್ಯೋಗಸ್ಥರಾಗಿ, ನಾಯಕರಾಗಿ, ಆದರ್ಶ ವ್ಯಕ್ತಿಗಳಾಗಿ ರೂಪುಗೊಳ್ಳಬೇಕೆಂದು ಬಯಸುತ್ತೇವೆ ಎಂದು ಹೇಳಿದರು.

ಈ ವೇಳೆ, ಸಹ ಕುಲಾಧಿಪತಿ ಉಮೇಶ್ಎಸ್.ರಾಜು, ಕುಲಪತಿ ಡಾ। ಎನ್.ರಮೇಶ್, ಸಹ ಕುಲಪತಿಗಳಾದ ಡಾ। ಆರ್.ಸಿ.ಬಿರಾದಾರ್, ಡಾ। ಎ.ಶುಭಾ, ಡಾ। ಸಂಜಯ್‌ ಆರ್‌.ಚಿಟ್ನಿಸ್‌ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ