ಆಲೂರು: ಕರ್ನಾಟಕ ಸುವರ್ಣ ಸಂಭ್ರಮ ರಥ ಮಂಗಳವಾರ ಆಲೂರು ಪಟ್ಟಣಕ್ಕೆ ಆಗಮಿಸಿತು. ಕನ್ನಡ ರಥವನ್ನು ತಾಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್, ಶಿಕ್ಷಣ ಇಲಾಖೆ, ಕನ್ನಡಪರ ಸಂಘಟನೆಗಳ ಮುಖಂಡರು ಸ್ವಾಗತಿಸಿ, ಪುಷ್ಪನಮನ ಸಲ್ಲಿಸಿದರು.
ತಹಸೀಲ್ದಾರ್ ನಂದಕುಮಾರ್ ಮಾತನಾಡಿ, ನಾಡಿನಾದ್ಯಂತ ಸಂಚರಿಸುತ್ತಿರುವ ಕರ್ನಾಟಕ ಸಂಭ್ರಮ-50 ರಥವು ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ವೈವಿಧ್ಯತೆಯನ್ನು ಕುರಿತು ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕನ್ನಡಿಗರಾದ ನಾವೆಲ್ಲರೂ ಒಂದೇ ಎಂಬ ಸೌಹಾರ್ದ ಸಂದೇಶವನ್ನು ಸಾರುವ ಈ ರಥವು ಕನ್ನಡ ತಾಯಿ ಭುವನೇಶ್ವರಿ ಮತ್ತು ನಾಡಿನ ಪ್ರಸಿದ್ಧ ಕವಿಪುಂಗರ ಭಾವಚಿತ್ರದೊಂದಿಗೆ ಕರ್ನಾಟಕದ ಎಲ್ಲರ ಮನೆ ಮನ ಬೆಳಗಲಿದೆ ಎಂದರು.
ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ, ಸುಮಾರು 2000 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕವು ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಅಂತಹ ಭವ್ಯ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವುದೇ ಈ ಕರ್ನಾಟಕ ಸಂಭ್ರಮ-50ರ ಆಶಯವಾಗಿದೆ ಎಂದರು.ಈ ಸಂದರ್ಭದಲ್ಲಿ ಉಪತಹಶಿಲ್ದಾರ್ ಪೂರ್ಣಿಮಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಸಿಡಿಪಿಒ ಮಲ್ಲೇಶ್, ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್, ವೀರಶೈವ ಸಂಘದ ಅಧ್ಯಕ್ಷ ರೇಣುಕ ಪ್ರಸಾದ್, ಉಪಾಧ್ಯಕ್ಷ ಜಯಣ್ಣ, ಜಯಕರ್ನಾಟಕ ಸಂಘದ ಅಧ್ಯಕ್ಷ ಹನುಮಂತೇಗೌಡ, ಸಂದೇಶ ಹಳೆ ಆಲೂರು, ದಲಿತ ಮುಖಂಡ ಬಸವರಾಜ್ ಸೇರಿ ಮುಂತಾದವರು ಹಾಜರಿದ್ದರು.