ವಸಂತಕುಮಾರ್ ಕತಗಾಲ ಕಾರವಾರ
ಬೇಡ್ತಿ-ವರದಾ ಯೋಜನೆ ವ್ಯಾಪ್ತಿ ಇರುವುದೇ ಬೇಡ್ತಿ ಮತ್ತು ಶಾಲ್ಮಲಾ ಕಣಿವೆ ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಎಂಬುದು ವಿಶೇಷ ಸಂಗತಿ. ಇದು ವನ್ಯಜೀವಿ ಕಾಯಿದೆ ಅಡಿಯಲ್ಲಿ ಘೋಷಣೆ ಆಗಿದೆ. ಈ ಹಿಂದೆ 2013ರಲ್ಲಿ ಗಣೇಶಪಾಲ್ ಜಲವಿದ್ಯುತ್ ಯೋಜನೆ ರದ್ದಾಗಲು ಈ ಕಾಯಿದೆ ಅಂಶ ಪ್ರಮುಖ ಪಾತ್ರ ವಹಿಸಿತ್ತು. 2022ರ ಬೇಡ್ತಿ-ವರದಾ ಯೋಜನೆಗೆ ತಡೆ ನೀಡಲು ವನ್ಯಜೀವಿ ಸಂರಕ್ಷಿತ ಪ್ರದೇಶ ಆದೇಶ ಮುಖ್ಯ ಕಾರಣಗಳಲ್ಲಿ ಒಂದಾಗಿತ್ತು.
ಸಾವಿರ ಎಕರೆ ಬೆಟ್ಟ-ಅರಣ್ಯ ನಾಶ: ಬೇಡ್ತಿ-ವರದಾ ಯೋಜನೆ ಜಾರಿಯಿಂದ ನೀರಾವರಿ ಕಾಲುವೆ ಚಾನೆಲ್, ರಸ್ತೆ ಕಾಮಗಾರಿ, ವಿದ್ಯುತ್ ಮಾರ್ಗ ಗಳಿಂದ ಬೆಟ್ಟ-ಅರಣ್ಯ, ಗುಡ್ಡ, ಕಣಿವೆ ತುಂಡು ತುಂಡಾಗುತ್ತವೆ. ನಾಶವಾಗುತ್ತವೆ. ಭೂಕುಸಿತ ವ್ಯಾಪಕವಾಗುತ್ತದೆ. ಮಲೆನಾಡಿನಲ್ಲಿ ಜನಜೀವನ ಅಸಹಾಯಕ ಪರಿಸ್ಥಿತಿಗೆ ತಲುಪಲಿದೆ. ವನ್ಯಜೀವಿಗಳು ಅತಂತ್ರವಾಗಲಿವೆ. ವನ್ಯಜೀವಿಗಳ ಹಾವಳಿ ಮಲೆನಾಡಿಗರಿಗೆ ಇನ್ನೂ ಗಂಭೀರ ಸ್ಥಿತಿ ತರಲಿದೆ.2021ರಲ್ಲಿ ಸರ್ಕಾರವೇ ರಚಿಸಿದ್ದ ಭೂಕುಸಿತ ಅಧ್ಯಯನ ಸಮಿತಿ ಉ.ಕ. ಜಿಲ್ಲೆಯ ಬೇಡ್ತಿ ಶಾಲ್ಮಲಾ ಕಣಿವೆಗಳನ್ನು ಸೂಕ್ಷ್ಮಭೂಕುಸಿತ ಸಂಭಾವ್ಯಪ್ರದೇಶಗಳು ಎಂದು ಗುರುತಿಸಿದೆ. ಅಲ್ಲದೆ ಈ ನಾಲ್ಕೂ ವರ್ಷಗಳಲ್ಲಿ ಇಲ್ಲಿ ಭಾರೀ ಭೂಕುಸಿತಗಳು ಘಟಿಸಿವೆ ಎಂಬುದನ್ನು ಸರ್ಕಾರ ಪರಿಗಣಿಸಬೇಕು. ಇಡೀ ಉ.ಕ. ಜಿಲ್ಲೆ ಬೃಹತ್ ಯೋಜನೆಗಳ ಭಾರದಿಂದ ನಲುಗಿದೆ. 2023-24ರಲ್ಲೇ ಈ ಬಗ್ಗೆ ಎನ್.ಡಬ್ಲ್ಯೂ.ಡಿ.ಎ. ಜತೆ ಪರಿಸರ ಧಾರಣಾ ಸಾಮರ್ಥ್ಯದ ಅಧ್ಯಯನ ಆಗದೇ ಹೊಸ ಯೋಜನೆ ಪ್ರಸ್ತಾಪ ಬೇಡವೆಂದು ವಾದಿಸಲಾಗಿತ್ತು. ಇದನ್ನು ಒಪ್ಪಿ 2004ರಲ್ಲಿ ಬೇಡ್ತಿ-ವರದಾ ಯೋಜನೆ ನಿಂತಿತ್ತು.
ಹೊಸ ಬೃಹತ್ ಅರಣ್ಯ ನಾಶ ಯೋಜನೆಗಳು ಬೇಡವೇ ಬೇಡ ಎಂದು ಐಐಎಸ್‌ಸಿ ವರದಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಬೇಡ್ತಿ-ವರದಾ ನದಿ ಜೋಡಣೆಯ ಬೃಹತ್ ಯೋಜನೆಗೆ ಉಕ ಜಿಲ್ಲೆಯಲ್ಲಿ ಅವಕಾಶ ಬೇಡವೇ ಬೇಡ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಈಗಾಗಲೆ ಸಮಿತಿ ಗೌರವಾಧ್ಯಕ್ಷ ಗಂಗಾಧರೇಂದ್ರ ಸರಸ್ವತಿ ಶ್ರೀಗಳಿಗೆ ಬೇಡ್ತಿ-ವರದಾ ಯೋಜನೆಯ ಸ್ವತಂತ್ರ ಪರಿಸರ ಪರಿಣಾಮ ವರದಿಯನ್ನು ವೃಕ್ಷಲಕ್ಷ ಆಂದೋಲನ ನೀಡಿದೆ.