ಶಿವಮೊಗ್ಗ: ವಾಣಿಜ್ಯ, ಕೈಗಾರಿಕೆ ಮತ್ತು ಆಸ್ಪತ್ರೆಗೆ ಸಂಬಂಧಿಸಿದ ಎಲ್ಲಾ ಪ್ರಯೋಗಾಲಯಗಳು ಎನ್‌ಎಬಿಎಲ್ ಮಾನ್ಯತೆ ಪಡೆಯುವುದು ಅತ್ಯಂತ ಮುಖ್ಯ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಎನ್‌ಎಬಿಎಲ್ ಹಾಗೂ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಎನ್‌ಎಬಿಎಲ್ ಮಾನ್ಯತಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎನ್‌ಎಬಿಎಲ್ ಸ್ವಾಯತ್ತ ಮಂಡಳಿ ಆಗಿದ್ದು, ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿ ಬರುತ್ತದೆ. ಮಣ್ಣು, ಮೆಟಲ್, ಮೆಡಿಕಲ್, ವಾಣಿಜ್ಯ, ಕೈಗಾರಿಕೆ, ಆಸ್ಪತ್ರೆಗೆ ಸಂಬಂಧಿಸಿದ ಎಲ್ಲ ಪ್ರಯೋಗಾಲಯಗಳು ಎನ್‌ಎಬಿಎಲ್ ಮಾನ್ಯತೆ ಪಡೆಯುವುದರಿಂದ ವಿಶ್ವಾಸಾರ್ಹತೆ ಹೆಚ್ಚುತ್ತದೆ ಎಂದು ತಿಳಿಸಿದರು.
ಎನ್‌ಎಬಿಎಲ್ ಮಾನ್ಯತೆಯಿಂದ ವ್ಯವಹಾರ ವೃದ್ಧಿಯಾಗಿ ಯುವಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ಮತ್ತು ಸೇವೆ ದೊರೆಯುತ್ತದೆ. ಜಿಲ್ಲೆಯ ಪ್ರಯೋಗಾಲಯಗಳು ಎನ್‌ಎಬಿಎಲ್ ಮಾನ್ಯತೆ ಪಡೆಯುವುದಕ್ಕೆ ಸಹಕರಿಸಲು ಶಿವಮೊಗ್ಗ ಜಿಲ್ಲಾ ಮತ್ತು ವಾಣಿಜ್ಯ ಕೈಗಾರಿಕಾ ಸಂಘ ಬದ್ಧವಾಗಿದೆ ಎಂದರು.ಎನ್‌ಎಬಿಎಲ್ ಪ್ರಾಂತೀಯ ನಿರ್ದೇಶಕ ಆರ್.ಶ್ರೀಕಾಂತ್ ಮಾತನಾಡಿ, ರಾಷ್ಟ್ರೀಯ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯ ಮಂಡಳಿಯಲ್ಲಿ ಮಾನ್ಯತೆ ಪಡೆದ ಪ್ರಯೋಗಾಲಯಗಳು ಅಂತಾರಾಷ್ಟ್ರೀಯ ಮಾನದಂಡ ಮತ್ತು ಗುಣಮಟ್ಟದ ನಿರ್ವಹಣಾ ವ್ಯವಸ್ಥೆಯ ಅನುಸರಣೆ ಹೊಂದಿರುತ್ತದೆ. ಆದ್ದರಿಂದ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು.
ಭಾರತದಲ್ಲಿ 9,400ಕ್ಕೂ ಹೆಚ್ಚು ಪ್ರಯೋಗಾಲಯಗಳು ಎನ್‌ಎಬಿಎಲ್ ಮಾನ್ಯತೆ ಪಡೆದ ಪರಿಣಾಮವಾಗಿ ಸ್ವದೇಶ ಮತ್ತು ವಿದೇಶದಲ್ಲಿ ವ್ಯವಹಾರ ಮಾಡುತ್ತ ಉದ್ಯೋಗವನ್ನು ಸೃಷ್ಟಿಸಿ ಸಂಪತ್ತು ವೃದ್ಧಿಸಿಕೊಂಡಿವೆ. ಮಾನ್ಯತಾ ಪರವಾನಗಿ ನಾಲ್ಕು ವರ್ಷ ಇರಲಿದ್ದು, ಪ್ರತಿ ವರ್ಷ ರಿನಿವಲ್ ಮಾಡಬೇಕಾಗುತ್ತದೆ ಎಂದು ತಿಳಿಸಿದರು.ಎನ್‌ಎಬಿಎಲ್ ಬೆಂಗಳೂರಿನಲ್ಲಿ ಪ್ರಾದೇಶಿಕ ಕೇಂದ್ರವನ್ನು ಹೊಂದಿದ್ದು, ದಕ್ಷಿಣ ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಸರ್ಕಾರಿ ಸ್ವಾಮ್ಯದ ಪ್ರಯೋಗಾಲಯಗಳು ಮಾನ್ಯತೆ ಪಡೆಯುವಲ್ಲಿ ಮುಂಚೂಣಿಯಲ್ಲಿವೆ. ಖಾಸಗಿ ಪ್ರಯೋಗಾಲಯಗಳೂ ಈ ದಿಸೆಯಲ್ಲಿ ಮುಂದೆ ಬರಬೇಕು ಎಂದರು.
ಎನ್‌ಎಬಿಎಲ್ ಸಹಾಯಕ ಡೈರೆಕ್ಟರ್ ಶ್ರೀರಾಮ್, ಕೋಆರ್ಡಿನೇಟರ್ ಚೈತ್ರ.ಎಂ, ಶಂಕರ್ ಪೂಜಾರಿ ಅವರು ಎನ್‌ಎಬಿಎಲ್ ಮಾನ್ಯತೆ ಬಗ್ಗೆ, ಆನ್‌ಲೈನ್ ನೋಂದಣಿ ಪ್ರಕ್ರಿಯೆ ಬಗ್ಗೆ, ಮಾನ್ಯತೆ ತೆಗೆದುಕೊಂಡ ನಂತರ ಪ್ರಯೋಗಾಲಯಗಳು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಎನ್‌ಎಬಿಎಲ್ ಪ್ರಕ್ರಿಯೆಗಳನ್ನು ಪಾಲಿಸುವ ಬಗ್ಗೆ ರೂಪುರೇಷೆ ವಿವರಿಸಿದರು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ಕಾರ್ಯಕ್ರಮ ಸಮಿತಿ ಚೇರ್ಮನ್ ಶರತ್ ನಿರ್ದೇಶಕ ಪಿ.ರುದ್ರೇಶ್, ಎಸ್.ಎಸ್.ಉದಯಕುಮಾರ್, ಬಿ.ಸುರೇಶ್‌ಕುಮಾರ್, ಪ್ರದೀಪ್.ವಿ.ಎಲಿ, ವಿನೋದ್ ಕುಮಾರ್ ಜೈನ್, ಮಾಜಿ ಅಧ್ಯಕ್ಷ ವಾಸುದೇವ್, ಕಮಲಾಕ್ಷರಪ್ಪ, ಡಾ.ವಿನಯಾ ಶ್ರೀನಿವಾಸ್, ಕೈಗಾರಿಕೆ, ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳ ಸಿಬ್ಬಂದಿ ಉಪಸ್ಥಿತರಿದ್ದರು.