೩೧೩ ನೌಕರರಿಂದ ತಲಾ 5 ಲಕ್ಷ ಲಂಚ ಪಡೆದ ಸಚಿವ ತಂಗಡಗಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಹೇಳಿಕೆ ನೀಡುವ ಬಿಜೆಪಿ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಚಿವ ಶಿವರಾಜ ತಂಗಡಗಿ, ಮೋದಿ ಮೋದಿ ಎಂದು ಕೂಗುವವರ ಕಪಾಳಕ್ಕೆ ಹೊಡೆಯಬೇಕು ಎಂದು ಮಾತನಾಡಿದರೆ, ಇದಕ್ಕೆ ನಾವು ಹೇಗೆ ಕೈಕಟ್ಟಿಕೊಂಡು-ಬಾಯಿ ಮುಚ್ಚಿಕೊಂಡಿರಲು ಸಾಧ್ಯ ಎಂದು ಮಾಜಿ ಶಾಸಕ ಬಸವರಾಜ ದಢೇಸ್ಗೂರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಮ್ಮ ಗೃಹಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಮೋದಿ ಎಂದು ಘೋಷಣೆ ಕೂಗುವ ಯುವಕರ, ವಿದ್ಯಾರ್ಥಿಗಳ ಕಪಾಳಕ್ಕೆ ಹೊಡೆಯಬೇಕು ಎನ್ನುವ ಸಚಿವರದ್ದು ಎಂಥಾ ಸಂಸ್ಕೃತಿ ಎಂದು ಪ್ರಶ್ನಿಸಿದರು.ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿ ದೊಡ್ಡ ಮಟ್ಟದ ಪ್ರಚಾರ ಸಿಗುತ್ತದೆ ಎನ್ನುವ ಭ್ರಮೆಯಲ್ಲಿ ಸಚಿವ ಶಿವರಾಜ ತಂಗಡಗಿ ಇದ್ದಾರೆ. ದೇಶದ ಪ್ರಧಾನಿಗಳ ಸಾಧನೆ ಕಂಡು ಯುವಕರು, ವಿದ್ಯಾರ್ಥಿಗಳು ಕೊಡುವ ಗೌರವವನ್ನು ಕಂಡು ಅಸೂಯೆ ಪಡುತ್ತಿದ್ದಾರೆ. ಅದಕ್ಕೆ ಈ ಮಾತುಗಳೇ ಸಾಕ್ಷಿ. ಪ್ರಧಾನಿಗಳ ಬಗ್ಗೆ ಇಂಥ ಇನ್ನೊಂದು ಹೇಳಿಕೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಮಾಜಿ ಶಾಸಕರು, ಇಂಥ ಸಂಸ್ಕೃತಿ ಉಳ್ಳ ವ್ಯಕ್ತಿಯನ್ನು ಕೂಡಲೇ ಮುಖ್ಯಮಂತ್ರಿಗಳು ತಮ್ಮ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ತಂಗಡಗಿ ಸಚಿವರಾಗಿ ಒಂಬತ್ತು ತಿಂಗಳುಗಳು ಕಳೆದಿವೆ. ಆಗಲೇ ಹಿಂದುಳಿದ ವರ್ಗದ ಖಾತೆ ವ್ಯಾಪ್ತಿಯಲ್ಲಿ ೩೧೩ ನೌಕರರಿಗೆ ಪದೋನ್ನತಿ ನೀಡುವುದಾಗಿ ಪ್ರತಿಯೊಬ್ಬರಿಂದಲೂ 5 ಲಕ್ಷ ಲಂಚ ಸ್ವೀಕರಿಸಿದ್ದಾರೆ ಎಂದು ಬಸವರಾಜ ದಢೇಸೂಗೂರು ಗಂಭೀರವಾಗಿ ಆರೋಪಿಸಿದರು.
ಸಚಿವ ಶಿವರಾಜ ತಂಗಡಗಿ ಚಿಲ್ಲರೆ ಹೇಳಿಕೆ ನೀಡುವುದನ್ನು ಬಿಟ್ಟು ಘನತೆಗೆ ತಕ್ಕಂತೆ ಮಾತನಾಡಬೇಕು ಎಂದು ಮಾಜಿ ಶಾಸಕ ಬಸವರಾಜ ದಢೇಸ್ಗೂರು ತಿರುಗೇಟು ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಮತದಾರರು ಸರಿಯಾದ ಪಾಠ ಕಲಿಸುತ್ತಾರೆ. ಕನಕಗಿರಿ ಕ್ಷೇತ್ರದಲ್ಲಿ ತಂಗಡಗಿಯವರಿಂದ ಎಫ್‌ಐಆರ್ ಗ್ಯಾರಂಟಿ ಶುರುವಾಗಿದೆ. ಮಟ್ಕಾ, ಇಸ್ಪೀಟ್ ಕ್ಲಬ್, ಜೂಜಾಟ, ಮರುಳು ದಂಧೆ ಎಗ್ಗಿಲ್ಲದೆ ನಡೆಯುತ್ತಿರುವ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡಿದ್ದೇವೆ ಎಂದರು.