ಗೋಣಿ ಚೀಲ ಇಲ್ಲವೆಂದು ಖರೀದಿಯನ್ನೇ ನಿಲ್ಲಿಸಿದರೆ ಹೇಗೆ?: ರಾಗಿ ಬೆಳೆಗಾರರ ಪ್ರಶ್ನೆ

KannadaprabhaNewsNetwork |  
Published : Jun 09, 2025, 02:47 AM IST
 6 ಟಿವಿಕೆ 1 – ತುರುವೇಕೆರೆಯ ಎಪಿಎಂಸಿ ಆವರಣದಲ್ಲಿ ಸಾಲುಗಟ್ಟಿ ನಿಂತಿರುವ ರಾಗಿ ತುಂಬಿರುವ ಟ್ರ್ಯಾಕ್ಟರ್ ಗಳು | Kannada Prabha

ಸಾರಾಂಶ

ತಾಲೂಕಿನಲ್ಲಿ ಸುಮಾರು 9 ಸಾವಿರಕ್ಕೂ ಹೆಚ್ಚು ರೈತರು ರಾಗಿಯನ್ನು ಈ ಖರೀದಿ ಕೇಂದ್ರದಲ್ಲಿ ಮಾರಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರಿಂದ ಸುಮಾರು 1.33 ಲಕ್ಷಕ್ಕೂ ಹೆಚ್ಚು ಕ್ವಿಂಟಾಲ್ ರಾಗಿ ಖರೀದಿ ನಿರೀಕ್ಷಿಸಲಾಗಿದೆ. ಇದುವರೆಗೂ ಐದು ಸಾವಿರ ರೈತರಿಂದ 55 ಸಾವಿರ ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗಿದೆ.

ಎಸ್.ನಾಗಭೂಷಣ

ಕನ್ನಡಪ್ರಭ ವಾರ್ತೆ ತುರುವೇಕೆರೆನಿಕೃಷ್ಟ ಬೆಳೆ ಎಂದು ಬಿಂಬಿಸಲಾಗಿದ್ದ ರಾಗಿಗೆ ಇಂದು ಚಿನ್ನದ ಬೆಲೆ ಬಂದಿದೆ. ಈ ಹಿಂದೆ ಕ್ವಿಂಟಾಲ್ ರಾಗಿಗೆ ಒಂದರಿಂದ ಎರಡು ಸಾವಿರ ರು. ಸಿಕ್ಕರೆ ಅದೇ ಹೆಚ್ಚು ಎನ್ನುವಂತಾಗಿತ್ತು. ಆದರೆ ಇಂದು ಪ್ರತಿ ಕ್ವಿಂಟಾಲ್ ರಾಗಿಗೆ ಕನಿಷ್ಠ 4 ಸಾವಿರಕ್ಕಿಂತಲೂ ಅಧಿಕ ಬೆಲೆ ಬಂದಿದೆ.

ರಾಗಿ ಬೆಳೆಗಾರರ ಸಂಕಷ್ಟವನ್ನು ಅರಿತ ಕೇಂದ್ರ ಸರ್ಕಾರ ನ್ಯಾಫೆಡ್ ಮೂಲಕ ರಾಗಿಯನ್ನು ಬೆಂಬಲ ಬೆಲೆ ನೀಡಿ ಖರೀದಿ ಮಾಡುವುದಾಗಿ ಘೋಷಿಸಿತು. ಇದರ ಪರಿಣಾಮ ರಾಗಿ ಬೆಳೆದು ಕಂಗಾಲಾಗಿದ್ದ ರೈತರಿಗೆ ವರದಾನವಾಯಿತು. ಅಂತೆಯೇ ಎಲ್ಲಾ ಎಪಿಎಂಸಿಗಳಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆದು ರಾಗಿ ಕೊಳ್ಳಲು ತಯಾರಿ ನಡೆಯಿತು.

ಗೋಣಿಚೀಲವೇ ಇಲ್ಲ:

ಕಳೆದ ಜೂ. 1ರ ತನಕ ರಾಗಿ ಖರೀದಿ ಮಾಡುತ್ತಿದ್ದ ವ್ಯವಸ್ಥಾಪನಾ ಮಂಡಳಿ ಜೂ. 2 ರಿಂದ ಗೋಣಿ ಚೀಲದ ಕೊರತೆ ಇರುವ ಕಾರಣಕ್ಕೆ ರಾಗಿ ಖರೀದಿ ಮಾಡಲು ಸಾಧ್ಯವಿಲ್ಲ. ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಸೂಚನಾ ಫಲಕದಲ್ಲಿ ಹಾಕಿದೆ. ಈಗಾಗಲೇ ನಾಲ್ಕೈದು ದಿನ ಕಳೆದಿವೆ. ಕೇವಲ ಚೀಲ ಇಲ್ಲ ಅನ್ನೋ ಕಾರಣಕ್ಕೆ ಖರೀದಿ ನಿಲ್ಲಿಸಿದರೆ ರೈತರ ಗತಿ ಏನು? ಖರೀದಿ ಸ್ಥಳದಲ್ಲಿ ರಾಗಿ ತುಂಬಿದ ಸುಮಾರು ನೂರಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳು ನಿಂತಿವೆ. ಐದಾರು ದಿನಗಳಿಂದ ನಿಂತಿರುವ ಟ್ರ್ಯಾಕ್ಟರ್ ಗೆ ಬಾಡಿಗೆ ಕೊಡುವವರು ಯಾರು?. ಯಾವ ಕ್ಷಣದಲ್ಲಿ ಪ್ರಾರಂಭವಾಗುವುದೋ ಎಂಬ ಕಾರಣಕ್ಕೆ ಬೆಳೆಗಾರರು ತಮ್ಮ ರಾಗಿಯ ಬಳಿ ಕಾಯುತ್ತಾ ಕುಳಿತಿದ್ದಾರೆ. ಅವರ ಜೀವನ ಹೇಗೆ ? ಕೇವಲ ಇಪ್ಪತ್ತೈದು ರು. ಬೆಲೆಯ ರಾಗಿ ಚೀಲಕ್ಕಾಗಿ ಪ್ರತಿ ದಿನ ಸಾವಿರಾರು ರುಪಾಯಿ ಬಾಡಿಗೆಗೆ ಹಣ ತೆರಬೇಕಲ್ಲಾ ಎಂಬ ಚಿಂತೆ ರೈತರಲ್ಲಿ ಕಾಡುತ್ತಿದೆ. ಜೊತೆಗೆ ಖರೀದಿಯ ಸಮಯ ಮುಗಿದರೆ ನಮ್ಮ ಗತಿ ಏನು ಎಂಬ ಚಿಂತೆಯೂ ಸಹ ರೈತರಲ್ಲಿ ಮನೆ ಮಾಡಿದೆ.

ತಾಲೂಕಿನಲ್ಲಿ ಸುಮಾರು 9 ಸಾವಿರಕ್ಕೂ ಹೆಚ್ಚು ರೈತರು ರಾಗಿಯನ್ನು ಈ ಖರೀದಿ ಕೇಂದ್ರದಲ್ಲಿ ಮಾರಲು ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರಿಂದ ಸುಮಾರು 1.33 ಲಕ್ಷಕ್ಕೂ ಹೆಚ್ಚು ಕ್ವಿಂಟಾಲ್ ರಾಗಿ ಖರೀದಿ ನಿರೀಕ್ಷಿಸಲಾಗಿದೆ. ಇದುವರೆಗೂ ಐದು ಸಾವಿರ ರೈತರಿಂದ 55 ಸಾವಿರ ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗಿದೆ. ಮಾರ್ಚ್ 4 ರಿಂದ ರಾಗಿ ಖರೀದಿ ಪ್ರಾರಂಭಗೊಂಡಿತ್ತು. ಮೇ 19 ರ ತನಕ ರಾಗಿ ಮಾರಿದ್ದ ರೈತರ ಖಾತೆಗೆ ಹಣ ಜಮಾ ಆಗಿದೆ. ಜೂನ್ 20 ಕ್ಕೆ ರಾಗಿ ಖರೀದಿ ಮುಕ್ತಾಯ ಮಾಡಲಾಗುವುದು ಎಂದು ಹೇಳಲಾಗಿದೆ. ಇದ್ದಬದ್ದ ಗೊಡೌನ್ ಗಳೆಲ್ಲಾ ತುಂಬಿ ಹೋಗಿವೆ. ಮುಂದಿನ ಖರೀದಿಗೆ ಗೋಡೌನ್ ಅಗತ್ಯವಿದೆ ಎಂದು ಸಿಬ್ಬಂದಿ ಹೇಳುತ್ತಾರೆ.

----------

‘ಕೇವಲ ಚೀಲ ಇಲ್ಲ ಅನ್ನೋ ಕಾರಣಕ್ಕೆ ರಾಗಿ ಖರೀದಿ ನಿಲ್ಲಿಸಿರುವುದು ಖಂಡನೀಯ. ರಾಗಿ ಖರೀದಿಯ ದಿನ ಮುಕ್ತಾಯ ಆಗುವ ಮುನ್ನ ಎಚ್ಚೆತ್ತು ಕೂಡಲೇ ಚೀಲವನ್ನು ತಂದು ರೈತರ ರಾಗಿಯನ್ನು ಖರೀದಿ ಮಾಡಬೇಕು. ಅಲ್ಲದೇ ಈಗಾಗಲೇ ನೋಂದಾಯಿಸಿಕೊಂಡಿರುವ ಎಲ್ಲಾ ರೈತರ ರಾಗಿಯನ್ನು ಖರೀದಿಸಬೇಕು.’

- ಎನ್.ಆರ್.ಜಯರಾಮ್

ತಾಲೂಕು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ

----------

‘ರಸ್ತೆ ಮಧ್ಯದಲ್ಲೇ ರಾಗಿಯನ್ನು ಕೊಳ್ಳಲಾಗುತ್ತಿದೆ. ಆ ಸ್ಥಳದಲ್ಲಿ ಶಾಮಿಯಾನ ಮತ್ತು ಕೆಳಗೆ ಟಾರ್ಪಲ್ ಹಾಕಲಾಗಿದೆ. ಶಾಮಿಯಾನದ ಮೇಲ್ಭಾಗ ಹರಿದು ಹೋಗಿದೆ. ಈ ಸ್ಥಳದಲ್ಲೇ ರಾಗಿಯನ್ನು ತೂಕ ಮಾಡಲಾಗುತ್ತದೆ. ಈ ವೇಳೆ ಮಳೆ ಬಂದರೆ ರಾಗಿ ಸಂಪೂರ್ಣವಾಗಿ ನೆನೆದು ಹೋಗುತ್ತದೆ. ನೆಂದಿರುವ ರಾಗಿ ಮೊಳಕೆಯೊಡೆದು ಮೂಟೆಯಲ್ಲಿರುವ ರಾಗಿ ಎಲ್ಲಾ ಸಂಪೂರ್ಣವಾಗಿ ಹಾಳಾಗುತ್ತದೆ. ಇಲ್ಲಿ ರೈತರ ವಾಹನಕ್ಕೂ ಸುರಕ್ಷತೆ ಇಲ್ಲ. ರೈತರ ರಾಗಿ ಕೊಳ್ಳಲು ಸೂಕ್ತ ಸ್ಥಳ ನಿಗದಿಪಡಿಸಬೇಕು ಮತ್ತು ರೈತರ ವಾಹನ ನಿಲುಗಡೆಗೂ ಸೂಕ್ತ ಸ್ಥಳ ನಿಗದಿಪಡಿಸಬೇಕು.’

-ಲೋಕೇಶ್, ಹಳ್ಳದ ಹೊಸಳ್ಳಿಯ ರೈತ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ