ಕನಿಷ್ಠ 35 ಅಂಕ ತೆಗೆಸಲು ಸಾಧ್ಯವಾಗದಿದ್ದರೆ ಹೇಗೆ?

KannadaprabhaNewsNetwork |  
Published : Sep 11, 2025, 12:03 AM IST
10 ಟಿವಿಕೆ 1 – ತುರುವೇಕೆರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಕೆ ಡಿ ಪಿ ಸಭೆ ನಡೆಸಿದರು. | Kannada Prabha

ಸಾರಾಂಶ

ಮಕ್ಕಳು 8, 9, ಮತ್ತು 10 ನೇ ಕ್ಲಾಸ್ ನಲ್ಲಿ ನಿಮ್ಮ ಮಾಸ್ಟರ್ ಹತ್ರಾನೇ ವಿದ್ಯೆ ಕಲಿತಿರ್ತಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆಲೀ ಕನಿಷ್ಠ ಮೂವತ್ತೈದು ಮಾರ್ಕ್ಸ್ ತೆಗೆಯೋ ಹಾಗೆ ಮಾಡಕ್ಕೆ ಆಗಲ್ವಾ?. ಫೇಲ್ ಆದ ಆ ವಿದ್ಯಾರ್ಥಿಯ ಭವಿಷ್ಯದ ಬಗ್ಗೆ ಯೋಚನೆ ಮಾಡಿದ್ದೀರಾ?. ಹೀಗೆ ತಮ್ಮ ಅಂತರಾಳದ ಮಾತುಗಳನ್ನು ಆಡಿದವರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್.

ಕನ್ನಡಪ್ರಭವಾರ್ತೆ, ತುರುವೇಕೆರೆ

ಮಕ್ಕಳು 8, 9, ಮತ್ತು 10 ನೇ ಕ್ಲಾಸ್ ನಲ್ಲಿ ನಿಮ್ಮ ಮಾಸ್ಟರ್ ಹತ್ರಾನೇ ವಿದ್ಯೆ ಕಲಿತಿರ್ತಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆಲೀ ಕನಿಷ್ಠ ಮೂವತ್ತೈದು ಮಾರ್ಕ್ಸ್ ತೆಗೆಯೋ ಹಾಗೆ ಮಾಡಕ್ಕೆ ಆಗಲ್ವಾ?. ಫೇಲ್ ಆದ ಆ ವಿದ್ಯಾರ್ಥಿಯ ಭವಿಷ್ಯದ ಬಗ್ಗೆ ಯೋಚನೆ ಮಾಡಿದ್ದೀರಾ?. ಹೀಗೆ ತಮ್ಮ ಅಂತರಾಳದ ಮಾತುಗಳನ್ನು ಆಡಿದವರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್.

ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಿಕ್ಷಣ ಇಲಾಖೆಯ ಮಾಹಿತಿ ಕೇಳಿ ಮಾತನಾಡುತ್ತಿದ್ದರು. ನಾನೂ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೇನೆ. ನನಗೂ ಅದರ ಅರಿವಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ 95, 100 ರಷ್ಟು ಫಲಿತಾಂಶ ಬರುತ್ತೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಯಾಕ್ರೀ ಫಲಿತಾಂಶ ಕಡಿಮೆ ಬರುತ್ತೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳು ಮತ್ತು ತಾಲೂಕು ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಸರ್ಕಾರ ಈಗ ಶಿಕ್ಷಕರಿಗೆ ಉತ್ತಮ ಸಂಬಳ ನೀಡುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನೂ ನೀಡುತ್ತಿದೆ. ಆದರೂ ಸಹ ಯಾವುದೇ ಪ್ರಯೋಜನವಾಗ್ತಾ ಇಲ್ಲ. ಈ ಬಾರಿ ಜಿಲ್ಲೆಯಲ್ಲಿ ಶೇಕಡಾ 73 ಫಲಿತಾಂಶ ಬಂದಿದೆ. ಇದು ನನಗೆ ಸಮಾಧಾನ ತಂದಿಲ್ಲ. ಫೇಲಾದ ಮಕ್ಕಳ ಭವಿಷ್ಯದ ಬಗ್ಗೆ ಒಮ್ಮೆ ಚಿಂತನೆ ಮಾಡ್ರೀ. ಫೇಲಾದ ವಿದ್ಯಾರ್ಥಿ ಕುರಿಯೋ, ದನವೋ ಕಾಯ್ಕೋತಾನೆ. ಪಾಪ ಅವನ ಅಪ್ಪ, ಅಮ್ಮನ ಸಂಕಟ ಆ ದೇವರಿಗೇ ಗೊತ್ತು. ನಾನು ನಿಮಗೆ 80, 90 ಮಾರ್ಕ್ಸ್ ತರೋತರ ಮಾಡಿ ಅಂತ ಕೇಳಲ್ಲ. ಇಷ್ಟೆಲ್ಲಾ ಸೌಲಭ್ಯ, ಸಂಬಳ ಕೊಟ್ರೂ ನೀವು ಮಕ್ಕಳಿಗೆ ಕನಿಷ್ಠ 35 ಮಾರ್ಕ್ಸ್ ಕೊಡಿಸಕ್ಕೆ ಆಗಲಿಲ್ಲ ಅದ್ರೆ ನೀವಿದ್ದು ಏನು ಪ್ರಯೋಜನ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಸಭೆಯಲ್ಲಿ ಆರೋಗ್ಯ ಇಲಾಖೆಯ ಬಗ್ಗೆ ಚರ್ಚೆಗೆ ಬಂದಾಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಟಿ.ಕೃಷ್ಣಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಎಷ್ಟು ಲಂಚ ಕೊಡಬೇಕು ಎಂದು ಹೇಳ್ರೀ ಎಂದು ಸಭೆಯಲ್ಲಿ ಕೇಳುವ ಮೂಲಕ ಆರೋಗ್ಯ ಇಲಾಖೆಯ ಅಧಿಕಾರಿಗಳ ಬೆವರಿಳಿಸಿದರು. ವಿಷಯ ತಿಳಿದ ಸಚಿವ ಡಾ.ಜಿ.ಪರಮೇಶ್ವರ್ ರವರು ಜನರ ಜೀವದೊಂದಿಗೆ ಚಲ್ಲಾಟ ಆಡ್ತಾ ಇದ್ದೀರಾ. ಸರ್ಕಾರಿ ಆಸ್ಪತ್ರೆಯಲ್ಲಿ ಎಷ್ಟು ಹೆರಿಗೆ ಆಗಿದೆ ಹೇಳ್ರೀ ಎಂದು ಕೇಳಿದರು. ಆಗ ಮತ್ತೆ ಶಾಸಕ ಎಂ.ಟಿ.ಕೃಷ್ಣಪ್ಪನವರು ಈ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ಮುರುಳಿ ಸ್ವಂತ ಕ್ಲಿನಿಕ್ ಇಟ್ಟುಕೊಂಡಿದ್ದಾರೆ. ಅಲ್ಲದೇ ಸರ್ಕಾರಿ ಆಸ್ಪತ್ರೆಗೆ ಬರುವವರಿಂದಲೂ ಸಾವಿರಾರು ರುಪಾಯಿ ಲಂಚ ತೆಗೆದುಕೊಳ್ತಾರೆ. ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ರವರನ್ನು ಪ್ರಶ್ನಿಸಿದರು. ವೈದ್ಯರು ಲಂಚ ತೆಗೆದುಕೊಳ್ಳುವ ವಿಚಾರ ತಮಗೆ ಗೊತ್ತಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರಂಗನಾಥ್ ಹೇಳಿದ ವೇಳೆ ಸಚಿವ ಡಾ.ಜಿ.ಪರಮೇಶ್ವರ್ ಅಲ್ರೀ ಲಂಚ ತೆಗೆದುಕೊಳ್ಳೋ ವಿಚಾರ ಶಾಸಕರಿಗೆ ಗೊತ್ತಾಗುತ್ತೆ. ನಿಮಗೆ ಗೊತ್ತಾಗಲ್ವಾ? ಎಂದು ಕಿಡಿಕಾರಿದರು. ಕೂಡಲೇ ಆ ವೈದ್ಯರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಅಮಾನತಿನಲ್ಲಿ ಇಡಬೇಕು ಎಂದು ಆದೇಶಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ರವರು ಹೆರಿಗೆ ತಜ್ಞರ ವಿರುದ್ದ ಈಗಾಗಲೇ ಸಾಕಷ್ಟು ದೂರುಗಳು ಬಂದಿದೆ. ಈ ಬಗ್ಗೆ ಸೂಕ್ತ ವರದಿಯನ್ನೂ ಸಹ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಅವರನ್ನು ಅಮಾನತು ಮಾಡಲಾಗುವುದು ಎಂದು ಸಚಿವರಿಗೆ ತಿಳಿಸಿದರು. ಕೇಂದ್ರಸ್ಥಾನದಲ್ಲಿರಲು ಸೂಚನೆ – ಜಿಲ್ಲೆ ಹಾಗೂ ತಾಲೂಕಿನಲ್ಲಿ ಹಲವಾರು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರುತ್ತಿಲ್ಲ ಜನರ ಆಶೋತ್ತರಕ್ಕೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ. ಎಲ್ಲಾ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ಯಾರು ಯಾರು ಕೇಂದ್ರ ಸ್ಥಾನದಲ್ಲಿದ್ದಾರೆ, ಯಾರು ಯಾರು ಇಲ್ಲ ಎಂದು ನನಗೆ ಪಟ್ಟಿ ಕೊಡಬೇಕೆಂದು ತಾಲೂಕು ಇಒ ಗೆ ಸಚಿವ ಡಾ.ಜಿ.ಪರಮೇಶ್ವರ್ ಸೂಚಿಸಿದರು. ಪಟ್ಟಣದಲ್ಲಿ ಹಲವಾರು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಅದನ್ನೂ ಕೂಡಲೇ ಕಾರ್ಯಾರಂಭ ಮಾಡಬೇಕೆಂದು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಶ್ರೀನಾಥ್ ಬಾಬುರವರಿಗೆ ಸೂಚಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಸಿಇಓ ಪ್ರಭು, ಎಸ್ಪಿ ಅಶೋಕ್ ಸೇರಿದಂತೆ ಜಿಲ್ಲೆ ಮತ್ತು ತಾಲೂಕಿನ ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉರ್ದು ಮುಸ್ಲಿಂರಿಗಷ್ಟೇ ಸೀಮಿತವಲ್ಲ ಜನಸಾಮಾನ್ಯರ ಭಾಷೆ
2 ಕೋಟಿ ವಂಚನೆ ಪ್ರಕರಣ: ಶರವಣ ಅಂದರ್