ಶಿಗ್ಗಾಂವಿ: ಕ್ಷೇತ್ರದ ಅಭಿವೃದ್ಧಿಗೆ ಬಸವರಾಜ ಬೊಮ್ಮಾಯಿ ಕೊಡುಗೆ ಶೂನ್ಯ ಎಂದು ಸಚಿವ ಜಮೀರ್ ಅಹಮದ್ ಖಾನ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಟಾಣ್ ಪರ ಶಿಗ್ಗಾಂವಿ, ಜಕ್ಕನಗಟ್ಟಿ, ಕಾರಡಗಿ, ಸವಣೂರು, ಬಂಕಾಪುರ ಭಾಗದಲ್ಲಿ ಪ್ರಚಾರ ಸಭೆ, ರೋಡ್ ಶೋ, ಪಾದಯಾತ್ರೆ ನಡೆಸಿ ಮಾತನಾಡಿದರು.ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಪ್ರತಿನಿಧಿಸಿದ ಈ ಕ್ಷೇತ್ರ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲ. ಪಟ್ಟಣದ ರಸ್ತೆ, ಗ್ರಾಮಗಳ ಪರಿಸ್ಥಿತಿ ನೋಡಿದರೆ ಬಸವರಾಜ ಬೊಮ್ಮಾಯಿ ಎಷ್ಟರ ಮಟ್ಟಿಗೆ ಅಭಿವೃದ್ಧಿ ಮಾಡಿದ್ದಾರೆ ಎಂಬುದು ಗೊತ್ತಾಗುತ್ತದೆ. ತಂದೆಯ ಕೈಲಿ ಆಗದ ಅಭಿವೃದ್ಧಿ ಮಗನ ಕೈಲಿ ಸಾಧ್ಯವಾ ಎಂದು ಪ್ರಶ್ನೆ ಮಾಡಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಬಡವರಿಗೆ ಮನೆ ಕೊಡುವ ಕೆಲಸ ಮಾಡಿಲ್ಲ. ಅವರ ಅವಧಿಯಲ್ಲಿ ಬಡವರಿಗೆ ಮನೆ ಕೊಟ್ಟಿದ್ದು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.ಬಿಜೆಪಿಯವರಿಗೆ ಅಭಿವೃದ್ಧಿ ಬೇಕಿಲ್ಲ. ಹಿಂದೂ-ಮುಸ್ಲಿಂ ಹೆಸರಿನಲ್ಲಿ ಮತ ಪಡೆಯುವುದು, ಜನರನ್ನು ಪ್ರಚೋದನೆ ಹಾಗೂ ತಪ್ಪುದಾರಿಗೆ ಎಳೆದು ರಾಜಕೀಯ ಲಾಭ ಪಡೆದುಕೊಳ್ಳುವುದು ಅವರ ಹವ್ಯಾಸ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಆನಂತರ ಕಾಂಗ್ರೆಸ್ ಕೊಟ್ಟಿದ್ದ ಐದು ಗ್ಯಾರಂಟಿ ಭರವಸೆ ಈಡೇರಿಸಿದೆ. ಆರನೇ ಗ್ಯಾರಂಟಿಯಾಗಿ 2.30 ಲಕ್ಷ ಮನೆ ಬಡವರಿಗೆ ಹಂಚುವ ಕ್ರಾಂತಿಕಾರಕ ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು.ಶಿಗ್ಗಾಂವಿಯಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲಲಿದೆ. ಯಾಸೀರ್‌ಖಾನ್ ಪಠಾಣ್ ಪರವಾಗಿ ಅಜ್ಜಂಪೀರ್ ಖಾದ್ರಿ ಜತೆಗೂಡಿ ಕೆಲಸ ಮಾಡಲಿದ್ದಾರೆ. ಇಬ್ಬರೂ ಪಕ್ಷಕ್ಕಾಗಿ ಒಂದಾಗಿ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಾಸಕ ಶ್ರೀನಿವಾಸ್ ಮಾನೆ, ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ, ಇಸ್ಮಾಯಿಲ್ ತಮಟಗಾರ, ಅಲ್ತಾಫ್ ಕಿತ್ತೂರು, ಸಯೀದ್ ಅಹಮದ್ ಉಪಸ್ಥಿತರಿದ್ದರು.ಬೊಮ್ಮಾಯಿ ಸಿಎಂ ಆಗಿದ್ದಾಗಲೇ ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಅನ್ಯಾಯ
ಬಂಕಾಪುರ: ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ನಂತರವೇ ಮುಸ್ಲಿಂ ಸಮುದಾಯಕ್ಕೆ ಹೆಚ್ಚು ಅನ್ಯಾಯ ಆಗಿದ್ದು ಎಂದು ಜಮೀರ್ ಅಹಮದ್ ಖಾನ್ ಆರೋಪಿಸಿದ್ದಾರೆ.ಬಂಕಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ್ ಪರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಹಿಜಾಬ್, ಹಲಾಲ್ ಕಟ್, ಲೌಡ್ ಸ್ಪೀಕರ್ ವಿವಾದ ಆಗಿತ್ತು. ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ. 4 ಮೀಸಲಾತಿ ಸಹ ಅವರೇ ತೆಗೆದರು. ಮುಸ್ಲಿಂ ಸಮುದಾಯದ ಅಭಿವೃದ್ಧಿ ಅನುದಾನಕ್ಕೆ ಕತ್ತರಿ ಹಾಕಿ ಎಲ್ಲ ಯೋಜನೆ ನಿಲ್ಲಿಸಿದ್ದರು ಎಂದು ದೂರಿದರು.
ಇಂತಹ ಬಸವರಾಜ ಬೊಮ್ಮಾಯಿ ಅವರಿಗೆ ಮುಸ್ಲಿಂ ಸಮುದಾಯದ ಮತ ನೀಡಿದರೆ ನಮಗೆ ನಾವೇ ದ್ರೋಹ ಮಾಡಿಕೊಂಡಂತೆ ಎಂದು ಹೇಳಿದರು. ಈ ಚುನಾವಣೆ ಅತ್ಯಂತ ಮಹತ್ವವಾಗಿದ್ದು ಸಮುದಾಯ ಕಾಂಗ್ರೆಸ್ ಪರ ಸಂಪೂರ್ಣ ಬೆಂಬಲ ನೀಡಬೇಕು. ಈ ಚುನಾವಣೆ ನಮ್ಮೆಲ್ಲರ ಚುನಾವಣೆ ಎಂದು ಹೇಳಿದರು. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹಮದ್, ಮಾಜಿ ಶಾಸಕ ಅಜ್ಜಂ ಪೀರ್ ಖಾದ್ರಿ ಉಪಸ್ಥಿತರಿದ್ದರು.