ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗಅಡಕೆ ಎಂಬುದಕ್ಕೆ ಸಮಾಜದಲ್ಲಿ ಮತ್ತು ಅಡಕೆ ಬೆಳೆಗಾರರಲ್ಲಿ ಒಂದು ಕಾಲದಲ್ಲಿ ಅತ್ಯಂತ ಪೂಜ್ಯನೀಯ ಭಾವವಿತ್ತು. ಅಡಕೆಯನ್ನು ದೇವರೆಂದು ಪೂಜಿಸುವ ವ್ಯವಸ್ಥೆಯೂ ಇತ್ತು. ಧಾರ್ಮಿಕ ಕಾರ್ಯಕ್ಕೆ ಇದರದ್ದೇ ಮಹತ್ವದ ಅಲ್ಲಿತ್ತು. ಆದರೆ ಪರಿಸ್ಥಿತಿ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಇದರ ಬಗ್ಗೆ ಗೌರವ ಇಲ್ಲದೇ ಕೇವಲ ಹಣವೊಂದನೇ ಇದನ್ನು ಅಳೆಯುವ ಮೌಲ್ಯ ಎಂಬಲ್ಲಿಗೆ ಬಂದ ಬಳಿಕ ಅಡಕೆಗೆ ಮಾನವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗುತ್ತಿದೆ.
ಹೀಗಾದರೆ ಅಡಕೆಯ ಭವಿಷ್ಯ ಹೇಗಿರುತ್ತದೆ ಎಂಬ ಚಿಂತೆ ಅಡಕೆ ಬೆಳೆಗಾರರಲ್ಲಿ ಮೂಡಿದೆ. ಇದನ್ನು ಹೇಗಾದರೂ ಮಾಡಿ ಹಿಂದಿನ ಗೌರವ ಉಳಿಸಿಕೊಳ್ಳಬೇಕೆಂಬ ಆಸೆಯನ್ನು ಹೊರ ಹಾಕುತ್ತಿದ್ದಾರೆ. ಗುಣಮಟ್ಟ ಎಂಬುದನ್ನು ಮತ್ತೆ ಹಿಂದಿನಂತೆ ಕಾಪಾಡಬೇಕೆಂಬ ಕೂಗನ್ನು ಮುಂದೊಡ್ಡುತ್ತಿದ್ದಾರೆ. ಗುಣಮಟ್ಟದ ಅಡಕೆ ತಯಾರಿಯ ಆಂದೋಲನವೊಂದನ್ನು ಹುಟ್ಟು ಹಾಕುವ ಚಿಂತನೆಯನ್ನು ಕೆಲ ಪ್ರಗತಿಪರ ರೈತರು ಆರಂಭಿಸುವ ಆಸ್ಥೆ ತೋರಿದ್ದಾರೆ.ಎರಡು ದಶಕದ ಹಿಂದೆ ಗುಣಮಟ್ಟದ ಅಡಕೆಗೆ ಮಾತ್ರ ಉತ್ತಮ ಧಾರಣೆ ಎಂಬ ಪರಿಸ್ಥಿತಿ ಇತ್ತು. ಆದರೆ ಅಡಕೆ ವಲಯ ಮತ್ತು ಗುಟ್ಕಾ ಕಂಪನಿಗಳ ಅಬ್ಬರ ಮೇರೆ ಮೀರಿದಂತೆ ಯಾವ ಅಡಕೆಯಾದರೂ ಉತ್ತಮ ಧಾರಣೆಯೊಂದಿಗೆ ಮಾರಾಟ ಖಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗತೊಡಗಿತ್ತು. ಉತ್ತಮ ಅಡಕೆ ತಯಾರಿ ಸುವ ಪ್ರಾಮಾಣಿಕ ರೈತರ ಅಡಕೆಗೂ, ಕಳಪೆ ಅಡಕೆಗೂ ಒಂದೇ ಧಾರಣೆ ಬರಲಾರಂಭಿಸಿದಾಗ ಉತ್ತಮ ಗುಣಮಟ್ಟದ ಅಡಕೆ ಬಗ್ಗೆ ಗಮನ ಹರಿಸಿದ್ದ ರೈತರಲ್ಲಿ ಸಹಜವಾಗಿಯೇ ನಿರಾಶೆ ಮೂಡಿಸಿತ್ತು.
ಬರು ಬರುತ್ತಾ ಅರೆಬರೆ ಒಣಗಿದ, ಬಣ್ಣವೇ ಇಲ್ಲದ, ನಾಲ್ಕು, ಐದನೇ ದರ್ಜೆಯ ಅಡಕೆಯನ್ನು ಮರು ಬಣ್ಣ ಹಾಕಿ, ಸಿಪ್ಪೆಗೋಟನ್ನು ಮೆಷಿನ್ ಮೂಲಕ ನಯಗೊಳಿಸಿ, ಮತ್ತೆ ಬಣ್ಣ ಹಾಕಿ ಉತ್ತಮ ಗುಣಮಟ್ಟದ ಅಡಕೆಯೊಡನೆ ಬೆರೆಸಿ ಮೇಲ್ನೋಟಕ್ಕೆ ಅತ್ಯುತ್ತಮ ಎನ್ನುವ ಭಾವ ಮೂಡಿಸಿ ಮಾರಾಟ ಮಾಡುವ ದಂಧೆ ವ್ಯವಸ್ಥಿತವಾಗಿ ಹೆಚ್ಚಿತು. ಇದೀಗ ಈ ದಂಧೆ ಇಡೀ ಅಡಕೆ ಉದ್ಯಮವನ್ನೇ ಸಂಶಯದಿಂದ ನೋಡುವ ಪರಿಸ್ಥಿತಿಗೆ ತಂದಿಟ್ಟಿದೆ.ಅಡಕೆ ದುಸ್ಥಿತಿಗೆ ಪಾಲೀಶ್ ಮೆಷಿನ್ ಕಾರಣ?:
ಇತ್ತೀಚಿನ ವರ್ಷಗಳಲ್ಲಿ ಅಡಕೆ ಪಾಲೀಶ್ ಮೆಷಿನ್ ಅವಿಷ್ಕಾರಗೊಂಡಿತು. ಇದಾದ ಬಳಿಕ ಸಿಪ್ಪೆಗೋಟು ಅಡಕೆಯನ್ನು ಈ ಮೆಷಿನ್ ನಲ್ಲಿ ಪಾಲೀಶ್ ಮಾಡಿ, ಬಣ್ಣ ಹಾಕಿ ಉತ್ತಮ ಗುಣಮಟ್ಟದ ರಾಶಿಇಡಿ ಎಂಬಂತೆ ಬಿಂಬಿಸಲಾಯಿತು. ಇದನ್ನು ಉತ್ತಮ ಗುಣಮಟ್ಟದ ರಾಶಿ ಇಡಿ ಅಡಕೆ ಮೂಟೆಗೆ ಮಿಕ್ಸ್ ಮಾಡಿ ಭಾರೀ ಲಾಭ ಮಾಡುವ ದಂಧೆಯೇ ಬೆಳೆದು ನಿಂತಿದೆ.