ಇಂದಿರಾ ಕ್ಯಾಂಟೀನ್‌ ಲೋಕಾರ್ಪಣೆಗೆ ಮುಹೂರ್ತ ಎಂದು?

KannadaprabhaNewsNetwork |  
Published : Feb 27, 2026, 03:30 AM IST
ಲೋಕಾಪುರ | Kannada Prabha

ಸಾರಾಂಶ

ಕಳೆದ 7 ತಿಂಗಳ ಹಿಂದೆ ಇಂದಿರಾ ಕ್ಯಾಂಟೀನ್‌ಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಆದಷ್ಟೇ ಬೇಗನೆ ಕಾರ್ಯರೂಪಕ್ಕೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಈಗಲೂ ಅದು ಕಾರ್ಯಾರಂಭ ಮಾಡದಿರುವುದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಸರ್ಕಾರದ ಯೋಜನೆ ಎಂದರೆ ಅಧಿಕಾರಿಗಳಿಗೆ ನಿರ್ಲಕ್ಷ್ಯವೋ ಅಥವಾ ಬೇಜವಾಬ್ದಾರಿಯೋ ತಿಳಿಯದು. ಯೋಜನೆ ದೊಡ್ಡದಿರಲಿ, ಸಣ್ಣದಿರಲಿ ಸಂಬಂಧಪಟ್ಟ ಅಧಿಕಾರಿಗಳು ಸ್ವಲ್ಪ ಆಸ್ಥೆ ವಹಿಸಿದರೆ ಸಾಕು. ಅದು ಸಾಕಾರ ರೂಪಕ್ಕೆ ಬಂದು ಸಾರ್ವಜನಿಕರ ಅನುಕೂಲಕ್ಕೆ ಹೆಚ್ಚು ಪ್ರಯೋಜನವಾಗುವುದರಲ್ಲಿ ಅನುಮಾನ ಇಲ್ಲ. ಇದಕ್ಕೆ ಪಟ್ಟಣದಲ್ಲಿನ ಇಂದಿರಾ ಕ್ಯಾಂಟೀನ್‌ ಈಗ ಸಾಕ್ಷಿಯಾಗಿ ನಿಂತಿದೆ. ಕಳೆದ 7 ತಿಂಗಳ ಹಿಂದೆ ಇಂದಿರಾ ಕ್ಯಾಂಟೀನ್‌ಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಆದಷ್ಟೇ ಬೇಗನೆ ಕಾರ್ಯರೂಪಕ್ಕೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಈಗಲೂ ಅದು ಕಾರ್ಯಾರಂಭ ಮಾಡದಿರುವುದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಬಹುತೇಕ ಬಾಗಲಕೋಟೆ ಜಿಲ್ಲೆಯ ಎಲ್ಲ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಈಗಾಗಲೇ ಇಂದಿರಾ ಕ್ಯಾಂಟೀನ್‌ಗಳು ಬಳಕೆಯಲ್ಲಿವೆ. ಬಡವರ, ಕಾರ್ಮಿಕರ, ಕೂಲಿಕಾರರ ಹೊಟ್ಟೆಯನ್ನು ತುಂಬಿಸುತ್ತಿದೆ. ಆದರೆ, ಲೋಕಾಪುರವು ಜಂಕ್ಷನ್‌ ಕೇಂದ್ರ. ಮುಧೋಳ, ಜಮಖಂಡಿ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ಬೇರೆ ಬೇರೆ ಊರುಗಳಿಗೆ ಈ ಮಾರ್ಗದಿಂದಲೇ ಬಸ್ಸುಗಳು ಸಂಚಾರ ಮಾಡುತ್ತವೆ. ಮಾತ್ರವಲ್ಲ, ಲೋಕಾಪುರಕ್ಕೆ ಹತ್ತಿರದ ಹತ್ತಾರು ಹಳ್ಳಿಗಳ ಜನರು ಮಾರುಕಟ್ಟೆಗಾಗಿ ಆಗಮಿಸುತ್ತಾರೆ. ಕೂಲಿಗಾಗಿ ಬರುತ್ತಾರೆ. ಇದೆಲ್ಲವನ್ನು ನೋಡಿಕೊಂಡೇ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಅವರು ಕಳೆದ ಏಳು ತಿಂಗಳ ಹಿಂದೆಯೇ ಇದಕ್ಕೆ ಭೂಮಿಪೂಜೆಯನ್ನು ನೆರವೇರಿಸಿದ್ದರು.

ಇಂದಿರಾ ಕ್ಯಾಂಟಿನ್ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಿದ ಭರಾಟೆ ನೋಡಿದರೆ ಇನ್ನೇನು ಕೆಲವೇ ದಿನಗಳಲ್ಲಿ ಬಡವರು, ವಿದ್ಯಾರ್ಥಿಗಳು ಮತ್ತು ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಊಟ, ಉಪಹಾರ ಸಿಗಬಹುದು ಎಂಬ ಆಸೆ ಇತ್ತು. ಆದರೆ, ಆಮೆ ವೇಗದಲ್ಲಿ ನಡೆದು ಪೂರ್ಣವಾಗಿ ನಿಂತಿದೆ. ಹಾಗಾದರೆ ಇನ್ನೂ ಎಷ್ಟು ದಿನಗಳವರೆಗೆ ಇದು ಕಾರ್ಯಾರಂಭ ಮಾಡಲು ಸಮಯಾವಕಾಶ ಬೇಕಾಗಬಹುದು ಎಂಬ ಅಂದಾಜು ಕೂಡ ಸಿಗದಂತಾಗಿದೆ. ಇದು ಜನರ ಆಕ್ರೋಶಕ್ಕೂ ಕಾರಣವಾಗಿದೆ.

ಸಿಎಂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗೆ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಭೂಮಿ ಪೂಜೆ ನೇರವೇರಿಸಲಾಗಿತ್ತು. ಇಷ್ಟು ಸಣ್ಣದೊಂದು ಕಟ್ಟಡ ನಿರ್ಮಾಣಕ್ಕೆ ಎಷ್ಟು ದಿನ ಬೇಕಾಗುತ್ತೆ ಎಂದು ಜನರೇ ಪ್ರಶ್ನಿಸುವಂತಾಗಿದೆ. ನಮಗೂ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ತಿಂಡಿ, ಊಟ ದೊರೆಯುತ್ತದೆ ಎಂದುಕೊಂಡಿದ್ದ ಜನತೆಗೆ ಕ್ಯಾಂಟೀನ್‌ ಕೈಗೆ ಬೇಗನೆ ಕೈಗೆ ಸಿಗುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಭೂಮಿಪೂಜೆ ನಡೆದ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಯಾವಾಗ ಪೂರ್ಣವಾಗಲಿದೆ ಎಂದು ಎದುರು ನೋಡುವಂತಾಗಿದೆ.

ಭೂಮಿಪೂಜೆ ನೇರವೇರಿದ ಬಳಿಕ ಕಟ್ಟಡ ನಿರ್ಮಾಣ ಕಾಮಗಾರಿ ಭರದಿಂದ ಆರಂಭವಾಗಿತ್ತು. ಆದರೆ ಈವರೆಗೆ ಪೂರ್ಣಗೊಂಡಿಲ್ಲ. ಇದಕ್ಕೆ ಅನುದಾನ ಕೊರತೆಯೋ ಅಥವಾ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯೋ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಈಗ ಕಟ್ಟಡ ನಿರ್ಮಾಣ ಮುಗಿದಿದ್ದು, ಆರಂಭ ಯಾವಾಗ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಈ ಕುರಿತು ಸ್ಥಳೀಯ ಮುಖಂಡರು ಇದರ ಬಗ್ಗೆ ಕಾಳಜಿ ವಹಿಸಿ ಬೇಗನೆ ಪ್ರಾರಂಭಮಾಡಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಲೋಕಾಪುರ ಪಟ್ಟಣವು ಗ್ರಾಮಗಳ ಕೇಂದ್ರವಾಗಿದೆ. ಇಲ್ಲಿಗೆ ಕಾರ್ಯ ನಿಮಿತ್ತ ನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಕ್ಯಾಂಟೀನ್ ತೆರೆಯಲಾಗಿದೆ. ಲೋಕಾಪುರ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ ಬೇಗನೆ ಉದ್ಘಾಟಿಸಿದರೆ, ಬಡ ಜನರು ತಿಂಡಿ, ಊಟಕ್ಕಾಗಿ ಅನುಕೂಲವಾಗಲಿದೆ. ಆದಷ್ಟು ಬೇಗ ತೆರೆಯಬೇಕು.

- ಅಶೋಕ ಕುಳ್ಳೊಳ್ಳಿ ಸ್ಥಳೀಯರು

ಇಂದಿರಾ ಕ್ಯಾಂಟೀನ್‌ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ. ಅತೀ ಶೀಘ್ರದಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟಿಸಲಾಗುವುದು.

- ಸಾಬಣ್ಣಾ ಪೂಜೇರ, ಪಪಂ ಮುಖ್ಯಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ನಗರದಲ್ಲಿ ಜೆಡಿಎಸ್‌ ಬೃಹತ್ ಸಮಾವೇಶ
ಮಳೆರಾಜೇಂದ್ರಸ್ವಾಮಿ ವೈಭವದ ಮಹಾರಥೋತ್ಸವ