ರಾಷ್ಟ್ರೀಯ ವನ್ಯಜೀವಿ ಇಲಾಖೆ ಅನುಮತಿ ಕೊಡಿಸಲು ಬಿಜೆಪಿಗೆ ಏನು ತೊಂದರೆ?: ಶಾಸಕ ಎನ್‌.ಎಚ್‌. ಕೋನರಡ್ಡಿ

KannadaprabhaNewsNetwork |  
Published : Jul 22, 2024, 01:17 AM IST
21ಡಿಡಬ್ಲೂಡಿ15ನವಲಗುಂದದಲ್ಲಿ ಭಾನುವಾರ ನಡೆದ ರೈತ ಹುತಾತ್ಮ ದಿನಾಚರಣೆಯಲ್ಲಿ ರೈತರ ಸ್ಮಾರಕಕ್ಕೆ ಶಾಸಕ ಎನ್‌.ಎಚ್‌. ಕೋನರಡ್ಡಿ ಸೇರಿದಂತೆ ರೈತ ಮುಖಂಡರು ಗೌರವ ಸಲ್ಲಿಸಿದರು.  | Kannada Prabha

ಸಾರಾಂಶ

ಮಹದಾಯಿ ವಿಷಯದಲ್ಲಿ ಗೋವಾ ಸರ್ಕಾರದ ಮಾತು ಕೇಂದ್ರ ಸರ್ಕಾರ ಕೇಳುತ್ತಿದೆ ಶಾಸಕ ಎನ್‌.ಎಚ್‌. ಕೋನರಡ್ಡಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ನವಲಗುಂದ

ಉತ್ತರ ಕರ್ನಾಟಕದ ಕುಡಿಯುವ ನೀರಿನ ಜೀವನಾಡಿ ಮಹದಾಯಿ ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲು ಕೇಂದ್ರ ಅರಣ್ಯ, ಪರಿಸರ ಹಾಗೂ ರಾಷ್ಟ್ರೀಯ ವನ್ಯಜೀವಿ ಇಲಾಖೆಯಿಂದ ಅನುಮತಿ ಕೊಡಿಸಲು ಕೇಂದ್ರದ ಬಿಜೆಪಿ ಮುಖಂಡರಿಗೆ ಏನು ತೊಂದರೆ ಎಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಪ್ರಶ್ನಿಸಿದರು.

ಪಟ್ಟಣದ ಹುತಾತ್ಮ ರೈತರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದ ಅವರು, ಮಹದಾಯಿ ವಿಷಯದಲ್ಲಿ ಗೋವಾ ಸರ್ಕಾರದ ಮಾತು ಕೇಂದ್ರ ಸರ್ಕಾರ ಕೇಳುತ್ತಿದೆ. ಕೇಂದ್ರ ಮಹದಾಯಿ ಪ್ರವಾಹ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುವ ಸಮಯದಲ್ಲಿಯೇ ಮಹದಾಯಿ ಪ್ರದೇಶಕ್ಕೆ ಭೇಟಿ ನೀಡಿದ್ದು ಏಕೆ? ಎಂದ ಅವರು, ಜುಲೈ 23ರಂದು ವಿಧಾನಸಭೆಯಲ್ಲಿ ಈ ವಿಷಯವಾಗಿ ಚರ್ಚಿಸಲು ವಿಧಾನಸಭೆಯ ಅಧ್ಯಕ್ಷರು ಅನುಮತಿ ನೀಡಿದ್ದಾರೆ. ಅಲ್ಲಿ ಮಹದಾಯಿ ವಿಷಯ ಪ್ರಸ್ತಾಪ ಮಾಡುತ್ತೇನೆ ಎಂದರು.

ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರದ ಬೆಂಬಲದಿಂದ ಮಹಾರಾಷ್ಟ್ರ ಸರ್ಕಾರ ಮಹದಾಯಿ ನದಿಯ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ "ವಿರ್ಡಿ " ಆಣೆಕಟ್ಟು ಎತ್ತರ ಹೆಚ್ಚಿಸಲು ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯದೆ ಆಣೆಕಟ್ಟು ಎತ್ತರಿಸಲು ಡಿ.ಪಿ.ಆರ್‌. ತಯಾರಿಸಿದೆ. ಜೊತೆಗೆ ಕಾಮಗಾರಿ ಪ್ರಾರಂಭಿಸುವ ಹುನ್ನಾರ ನಡೆದಿದ್ದು, ರೈತರು ಹಾಗೂ ಹೋರಾಟಗಾರರು ವಿರೋಧಿಸಬೇಕಿದೆ ಎಂದರು.

ಕೇಂದ್ರ ಸರ್ಕಾರ ಅರಣ್ಯ ಇಲಾಖೆಯ ಪರಿಸರ ಹಾಗೂ ರಾಷ್ಟ್ರೀಯ ವನ್ಯಜೀವಿ ಇಲಾಖೆಯಿಂದ ಮಹದಾಯಿ ಯೋಜನೆಗೆ ಅನುಮತಿ ಕೊಡಿಸಲು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ರಾಜ್ಯದ ಸಂಸದರು ಪ್ರಯತ್ನಿಸಬೇಕು. ಸರ್ಕಾರದ ಅನುಮತಿ ನೀಡಿದ ತಕ್ಷಣವೇ ರಾಜ್ಯ ಸರ್ಕಾರ ಕಾಮಗಾರಿ ಪ್ರಾರಂಭಿಸಲಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕೇಂದ್ರ ಸರ್ಕಾರ ಅನುಮತಿ ನೀಡುವ ನಿರೀಕ್ಷೆಯ ಮೇಲೆ ಕಳಸಾ-ಬಂಡೂರಿ ನಾಲಾ ತಿರುವ ಯೋಜನೆಗಳಿಗೆ (ಲಿಫ್ಟ್ ಯೋಜನೆಗಳು) ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ ಕಾಮಗಾರಿ ಪ್ರಾರಂಭಿಸಲು ಸಿದ್ಧರಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು, ಪ್ರೊ. ಹುದ್ದಾರ, ಸುರೇಶ ಕುಲಕರ್ಣಿ, ಡಿ.ಕೆ. ಹಳ್ಳದ, ಯಲ್ಲಪ್ಪ ದಾಡಿಬಾಯಿ, ಮುರಗಯ್ಯಜ್ಜ ವೀರಕ್ತಮಠ, ಸುದಗೌಡ ಪಾಟೀಲ, ಮಾಂತೇಶ ಹಂಚಿನಾಳ, ಮಲ್ಲಪ್ಪ ಕುರಹಟ್ಟಿ, ಗಿರೀಶ ಮಾಸ್ತಿ, ಸೋಮಣ್ಣ ಬಳಿಗೇರ, ಬಿ.ಎಲ್. ಜೈನರ, ವೀರಣ್ಣ ಹಡಪದ, ಯಲ್ಲಪ್ಪ ಗಾಣಿಗೇರ, ಸಿದ್ದಲಿಂಗಪ್ಪ ಅಂಗಡಿ, ಅರುಣಕುಮಾರ ಮಜ್ಜಗಿ, ನಿಂಗಪ್ಪ ಶಿವಣ್ಣ ಹುಬ್ಬಳ್ಳಿ, ದೇವಪ್ಪ ವಗ್ಗರ, ದಾವಲಸಾಬ ದರವಾನಿ, ಪ್ರಕಾಶ ಕೊಣ್ಣೂರ, ಭೀಮಪ್ಪ ಮುಳ್ಳೂರ, ಬಾಬಾಜಾನ ಮುಲ್ಲಾನವರ, ಶಾಂತಾ ಚಿಕ್ಕನರಗುಂದ ನಂದಿನಿ ಹಾದಿಮನಿ, ಜೀವನ ಪವಾರ, ಮಂಜು ಜಾಧವ, ಮಹಾಂತೇಶ ಭೋವಿ, ಶಿವಾನಂದ ತಡಸಿ, ಮೊದೀನಸಾಬ ಶಿರೂರ, ಸುರೇಶ ಮೇಟಿ, ಹನಮಂತ ವಾಲಿಕಾರ ಮತ್ತಿತರರು ಇದ್ದರು.

ಕೋಟ್..

ರೈತರ ಬೇಡಿಕೆ ಈಡೇರಿಸಿ

ಮಹಾದಾಯಿ ಯೋಜನೆ ಜಾರಿ ಜೊತೆಗೆ ಬೆಳೆಹಾನಿ, ಬೆಳೆ ವಿಮೆ ಪರಿಹಾರ ಬಿಡುಗಡೆಗೊಳಿಸಬೇಕು. ರೈತ ಮತ್ತು ಮಹಿಳೆಯರ ಸ್ವ-ಸಹಾಯ ಸಂಘಗಳ ಸಾಲಮನ್ನಾ ಮಾಡಬೇಕು. ಈ ಭಾಗದ ರೈತರ ಮೇಲಿನ ಪ್ರಕರಣ ಹಿಂಪಡೆಯಬೇಕು. ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಬೆಣ್ಣೆ ಹಳ್ಳಕ್ಕೆ ತಡೆಗೋಡಿಯನ್ನು ಕಟ್ಟಿ ನೀರು ಸಂಗ್ರಹಣೆಗೆ ವ್ಯವಸ್ಥೆ ಮಾಡಿಕೊಡಬೇಕು.

ಲೋಕನಾಥ ಹೆಬಸೂರ, ರೈತ ಮುಖಂಡರುಹಕ್ಕುಪತ್ರ ವಿತರಣೆ

ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡಲಿ. ವಿದ್ಯುತ್ ಅಕ್ರಮ-ಸಕ್ರಮ ಯೋಜನೆಯನ್ನು ಯಥಾಸ್ಥಿತಿ ಮುಂದುವರಿಸಲಿ. ಕೃಷಿ ಪಂಪಸೆಟ್‌ಗಳಿಗೆ ಉಚಿತ ಟಿ.ಸಿ, ಲೈನ್‌ ಹಾಕಬೇಕು. ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಸುಮಾರು 900 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಯಾಗಬೇಕು. ಮೈಕ್ರೋ ಫೈನಾನ್ಸ್ ಹಾಗೂ ಲೇವಾದೇವಿಗಾರರು, ಬ್ಯಾಂಕುಗಳು, ರೈತರಿಗೆ ಸಾಲದ ಕಿರುಕುಳ ತಪ್ಪಿಸಬೇಕು. ರೈತ ಆತ್ಮಹತ್ಯೆ ತಡೆಗಟ್ಟಲು ಸೂಕ್ತ ಕಾನೂನು ಜಾರಿ ಮಾಡಬೇಕು.

ಶಂಕರಪ್ಪ ಅಂಬಲಿ ರೈತ ಮುಖಂಡರು

PREV