ಮೂರುಸಾವಿರ ಮಠದ ಆಸ್ತಿ ಏನಾಗಿದೆ?

KannadaprabhaNewsNetwork |  
Published : Mar 22, 2024, 01:00 AM IST
ಮೂರುಸಾವಿರ ಮಠ | Kannada Prabha

ಸಾರಾಂಶ

ಅತ್ತ ಹಾವೇರಿ ಜಿಲ್ಲೆಯ ಹಾನಗಲ್‌ ಕುಮಾರೇಶ್ವರ ಮಠದ ಆಸ್ತಿಯನ್ನು ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಅಡವಿಟ್ಟು ಸಾಲ ಪಡೆದ ಬೆನ್ನಲ್ಲೇ ಇದೀಗ ಹುಬ್ಬಳ್ಳಿ ಮೂರುಸಾವಿರ ಮಠದ ಆಸ್ತಿಯ ಕಥೆ ಏನಾಗಿದೆ? ಎನ್ನುವ ಚರ್ಚೆ ಭಕ್ತವಲಯದಲ್ಲಿ ಜೋರಾಗಿದೆ.

ಹುಬ್ಬಳ್ಳಿ:

ಅತ್ತ ಹಾವೇರಿ ಜಿಲ್ಲೆಯ ಹಾನಗಲ್‌ ಕುಮಾರೇಶ್ವರ ಮಠದ ಆಸ್ತಿಯನ್ನು ಗುರುಸಿದ್ಧರಾಜಯೋಗೀಂದ್ರ ಶ್ರೀಗಳು ಅಡವಿಟ್ಟು ಸಾಲ ಪಡೆದ ಬೆನ್ನಲ್ಲೇ ಇದೀಗ ಹುಬ್ಬಳ್ಳಿ ಮೂರುಸಾವಿರ ಮಠದ ಆಸ್ತಿಯ ಕಥೆ ಏನಾಗಿದೆ? ಎನ್ನುವ ಚರ್ಚೆ ಭಕ್ತವಲಯದಲ್ಲಿ ಜೋರಾಗಿದೆ.

ಹಾನಗಲ್‌ ಕುಮಾರೇಶ್ವರ ಮಠದ ಆಸ್ತಿ ಅಡವಿಟ್ಟು ಕೋಟಿಗಟ್ಟಲೇ ಸಾಲ ಮಾಡಿದ್ದಾರೆ ಎನ್ನಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಹಾನಗಲ್‌ ಮಠದ ಹಾನಗಲ್‌, ಅಕ್ಕಿಆಲೂರ, ಹುಬ್ಬಳ್ಳಿ, ಶಿಕಾರಿಪುರ, ಹಾವೇರಿಯಲ್ಲಿನ ಆಸ್ತಿಗಳೆಲ್ಲ ಪರಭಾರೆಯಾಗಿವೆ ಎಂದು ಹೇಳಲಾಗಿದೆ. ಇದು ಅಲ್ಲಿನ ಭಕ್ತರಲ್ಲಿ ಅಸಮಾಧಾನವನ್ನುಂಟು ಮಾಡಿದೆ. ಮಠಕ್ಕೆ ನಾನೇ ಅಧಿಕಾರಿ, ಅಗತ್ಯಕ್ಕೆ ತಕ್ಕಂತೆ ಸಾಲ ಮಾಡಿದ್ದೇನೆ. ಇದರಲ್ಲಿ ಯಾವುದು ಕಾನೂನು ಬಾಹೀರವಾಗಿ ಮಾಡಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದರಿಂದ ಹುಬ್ಬಳ್ಳಿ ಮಠದ ಭಕ್ತರಲ್ಲಿ ಆತಂಕ ಹೆಚ್ಚಿಸಿದೆ.

ಹುಬ್ಬಳ್ಳಿ ಮೂರುಸಾವಿರ ಮಠಕ್ಕೂ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿಯೇ ಪೀಠಾಧಿಪತಿ. ಇಲ್ಲೂ ಸಾಕಷ್ಟು ಜಮೀನಿದೆ. ಕುಸುಗಲ್‌ ರಸ್ತೆ, ಸ್ಟೇಷನ್‌ ರಸ್ತೆ, ಗಬ್ಬೂರ ಸೇರಿದಂತೆ ಹಲವೆಡೆ ಸಾಕಷ್ಟು ಆಸ್ತಿ ಇದೆ. ಇಲ್ಲಿನ ಆಸ್ತಿ ಏನಾದರೂ ಪರಭಾರೆಯಾಗಿದೆಯಾ? ಇಲ್ಲಿನ ಆಸ್ತಿಯನ್ನೂ ಅಡವಿಡಲಾಗಿದೆಯೇ? ಎಂಬ ಬಗ್ಗೆ ಇದೀಗ ಭಕ್ತರು ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಕೆಲವರು ಮಠದ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಕೇಳುತ್ತಿದ್ದಾರೆನ್ನಲಾಗಿದೆ. ಮಠದ ಪ್ರಾಂಗಣದಲ್ಲಿ ಇದೇ ವಿಷಯವಾಗಿ ಪ್ರತಿನಿತ್ಯ ಚರ್ಚೆಯ ವಿಷಯವಾಗಿದೆ.

ಶ್ರೀಗಳು ಸಾಲಗಾರರೇ?

ಮೂಲಗಳ ಪ್ರಕಾರ ಶ್ರೀಗಳು ಕೋಟಿಗಟ್ಟಲೇ ಸಾಲ ಮಾಡಿದ್ದಾರೆ ಎನ್ನಲಾಗಿದೆ. ಇಷ್ಟೊಂದು ದೊಡ್ಡ ಸಾಲ ಯಾಕೆ ಮಾಡಲಾಗಿದೆ? ಯಾರ್‍ಯಾರ ಬಳಿ ಸಾಲ ಮಾಡಿದ್ದಾರೆ? ಯಾವ ಕಾರಣಕ್ಕಾಗಿ ಸಾಲ ಮಾಡಲಾಗಿದೆ? ಎನ್ನುವ ಪ್ರಶ್ನೆಗಳೂ ಹುಟ್ಟಿಕೊಂಡಿವೆ.

ಜಿಪಂ ಮಾಜಿ ಸದಸ್ಯೆಯೊಬ್ಬರಿಗೆ ಶ್ರೀಗಳು ಸಾಲ ಕೊಟ್ಟಿದ್ದಾರೆ ಎನ್ನಲಾಗಿದೆ. ಆ ಮಾಜಿ ಸದಸ್ಯೆ ಬೇರೆಯವರಿಂದ ದುಡ್ಡು ಇಸಿದುಕೊಂಡು ಶ್ರೀಗಳಿಗೆ ಕೊಟ್ಟಿದ್ದಾರೆನ್ನಲಾಗಿದೆ. ಆ ಮಾಜಿ ಸದಸ್ಯೆ ಯಾರು? ಎಂದು ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಹಿಂದೆ ಉತ್ತರಾಧಿಕಾರಿ ವಿವಾದದ ವೇಳೆಯೂ ಮಠದ ಆಸ್ತಿ ವಿಷಯವಾಗಿ ಚರ್ಚೆಗೆ ಗ್ರಾಸವನ್ನುಂಟು ಮಾಡಿತ್ತು. ಇದೀಗ ಮತ್ತೆ ಹಾನಗಲ್‌ ಮಠದ ಆಸ್ತಿ ಅಡವಿಟ್ಟಿರುವ ವಿಷಯ ಬಯಲಿಗೆ ಬರುತ್ತಿದ್ದಂತೆ ಮತ್ತೆ ಚರ್ಚೆಗೆ ಗ್ರಾಸವನ್ನುಂಟು ಮಾಡಿದೆ. ನಗರದ ಹಿರಿಯರು, ಉನ್ನತಾಧಿಕಾರ ಸಮಿತಿಯಲ್ಲಿರುವವರು ಈ ಬಗ್ಗೆ ಸ್ಪಷ್ಟಪಡಿಸಿ ಭಕ್ತರಲ್ಲಿರುವ ಗೊಂದಲ ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂಬುದು ಒಕ್ಕೊರಲಿನ ಆಗ್ರಹ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ