ಅಭಿವೃದ್ಧಿಗೆ ಎಸ್‌ಎಸ್‌, ಎಸ್‌ಎಸ್‌ಎಂ ಸಲಹೆ ಪಡೆದರೆ ತಪ್ಪೇನು?

KannadaprabhaNewsNetwork |  
Published : Jun 29, 2024, 12:33 AM IST
28ಕೆಡಿವಿಜಿ14, 15, 16-ದಾವಣಗೆರೆ ಮಹಾ ನಗರದ ವಿವಿಧೆಡೆ ರಾಜ ಕಾಲುವೆ ವೀಕ್ಷಿಸಿದ ಮೇಯರ್ ವಿನಾಯಕ ಪೈಲ್ವಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ, ಮಂಜುನಾಥ ಗಡಿಗುಡಾಳ, ಆಯುಕ್ತೆ ರೇಣುಕಾ, ಸದಸ್ಯರು, ಅಧಿಕಾರಿಗಳು. | Kannada Prabha

ಸಾರಾಂಶ

ದಾವಣಗೆರೆ ನಗರ, ಜಿಲ್ಲೆಯ ಅಭಿವೃದ್ಧಿಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಕೊಡುಗೆ ಅಪಾರ ಎಂಬ ಸಂಗತಿ ಪ್ರತಿಯೊಬ್ಬರಿಗೂ ಗೊತ್ತಿದೆ. ಇಂಥ ಹಿರಿಯರು, ಅನುಭವಿಗಳ ಸಲಹೆ ಪಡೆಯುವುದರಲ್ಲಿ ತಪ್ಪೇನಿದೆ ಎಂದು ಮೇಯರ್ ಬಿ.ಎಚ್‌. ವಿನಾಯಕ ಪೈಲ್ವಾನ್ ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದ್ದಾರೆ.

- ಸಚಿವರೊಂದಿಗೆ ಜಲಸಿರಿ ಯೋಜನೆ ಕುರಿತು ಚರ್ಚಿಸಿ ಜನರಿಗೆ ತೊಂದರೆ ಆಗದಂತೆ ಕ್ರಮ: ಮೇಯರ್‌ ವಿನಾಯಕ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ನಗರ, ಜಿಲ್ಲೆಯ ಅಭಿವೃದ್ಧಿಗೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಕೊಡುಗೆ ಅಪಾರ ಎಂಬ ಸಂಗತಿ ಪ್ರತಿಯೊಬ್ಬರಿಗೂ ಗೊತ್ತಿದೆ. ಇಂಥ ಹಿರಿಯರು, ಅನುಭವಿಗಳ ಸಲಹೆ ಪಡೆಯುವುದರಲ್ಲಿ ತಪ್ಪೇನಿದೆ ಎಂದು ಮೇಯರ್ ಬಿ.ಎಚ್‌. ವಿನಾಯಕ ಪೈಲ್ವಾನ್ ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು.

ನಗರದ ವಿವಿಧೆಡೆ ರಾಜಕಾಲುವೆ ಹೂಳೆತ್ತುವ ಕಾಮಗಾರಿ ಪರಿಶೀಲನೆ ನಂತರ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ, ಎಸ್ಸೆಸ್ ಮಲ್ಲಿಕಾರ್ಜುನ ಸಲಹೆ, ಮಾರ್ಗದರ್ಶನ, ಸೂಚನೆಯಂತೆಯೇ ನಾವು ಕೆಲಸ ಮಾಡುತ್ತೇವೆ. ಮುಂಚಿನಿಂದಲೂ ಮಾಡುತ್ತಿದ್ದೇವೆ ಎಂದು ವಿಪಕ್ಷ ಬಿಜೆಪಿ ಟೀಕೆಗೆ ತಿರುಗೇಟು ನೀಡಿದರು.

ಬಿಜೆಪಿ ಸದಸ್ಯರು ವಿನಾಕಾರಣ ಆರೋಪ ಮಾಡುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಮ್ಮವರೇ ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಗೆ ಐವರು ಶಾಸಕರಿದ್ದರೂ, ಒಬ್ಬರೂ ಸಚಿವರಾಗಲಿಲ್ಲ ಏಕೆ? ಬೆಂಗಳೂರಿನಿಂದ ಇಲ್ಲಿಗೆ ಬಂದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಕೊಟ್ಟರು. ಹಾಗೆ ಎರವಲು ಪಡೆದಂತೆ ಬಂದ ಹಿಂದಿನ ಬಿಜೆಪಿ ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿ ಬಂದು, ಮಾಡಿದ್ದೇನೆಂಬುದೂ ಎಲ್ಲರಿಗೂ ಗೊತ್ತಿದೆ ಎಂದು ಕುಟುಕಿದರು.

ಎಸ್‌.ಎಸ್‌. ಮಲ್ಲಿಕಾರ್ಜುನ ಇದೇ ಊರಿನವರು. ಊರು, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಬದ್ಧತೆ, ಕಾಳಜಿ ಇರುವ ಸಚಿವರು. ಅಂತಹ ಸಚಿವರ ಸಲಹೆ, ಮಾರ್ಗದರ್ಶನ ಪಡೆಯುವುದರಲ್ಲಿ ತಪ್ಪೇನಿದೆ? ಜಲಸಿರಿ ಯೋಜನೆಯಡಿ ಬಿಲ್ ನೀಡಿರುವ ಬಗ್ಗೆ ಸಚಿವರ ಜೊತೆಗೆ ಚರ್ಚಿಸುತ್ತೇವೆ. ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಬಗ್ಗೆ ಸಚಿವರೊಟ್ಟಿಗೆ ಚರ್ಚೆ ಮಾಡುತ್ತೇವೆ. 2021ರಲ್ಲಿ ಆಸ್ತಿ ತೆರಿಗೆ ಹೆಚ್ಚಿಸಲು ಬಿಜೆಪಿ ಆಡಳಿತವಿದ್ದ ಪಾಲಿಕೆಯಲ್ಲಿ ನಿರ್ಧರಿಸಲಾಗಿತ್ತು. ಆಗ ನಾವೇ ವಿರೋಧ ಮಾಡಿದ್ದೇವೆ. ಅದಕ್ಕೆ ಇದೇ ಬಿಜೆಪಿ ಸದಸ್ಯರು ಕ್ಯಾರೇ ಅನ್ನಲಿಲ್ಲ ಎಂದು ಆರೋಪಿಸಿದರು.

ಪಾಲಿಕೆ ಆಡಳಿತ ಪಕ್ಷದ ಸದಸ್ಯ ಜಿ.ಎಸ್‌. ಮಂಜುನಾಥ ಗಡಿಗುಡಾಳ ಮಾತನಾಡಿ, ಈಗ ಮುದ್ರಾಂಕ ಶುಲ್ಕ, ಸಬ್ ರಿಜಿಸ್ಟ್ರಾರ್ ಶುಲ್ಕ ಸೇರಿದಂತೆ ಎಲ್ಲವೂ ಹೆಚ್ಚಾಗಿದೆ. ಕೇವಲ ದಾವಣಗೆರೆ ಪಾಲಿಕೆ ಮಾತ್ರವಲ್ಲ, ರಾಜ್ಯವ್ಯಾಪಿ ಹೆಚ್ಚಾಗಿದೆ. ಇದು ವಿಪಕ್ಷದ ಸದಸ್ಯರ ಅರಿವಿಗೆ ಇಲ್ಲವೇ? ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಹೇಗಿದ್ದು, ಫಲಿತಾಂಶ ಬಂದ ನಂತರ ಏನಾಗಿದೆ, ಮುಂದೆ ಬಿಜೆಪಿ ಏನಾಗುತ್ತದೆಂದು ಜನ ನೋಡುತ್ತಿದ್ದಾರೆ. ನಿತ್ಯ ಪರಸ್ಪರ ಕಚ್ಚಾಡುತ್ತಾ, ಒಬ್ಬರ ಮೇಲೊಬ್ಬರು ಆರೋಪಿಸುತ್ತಿರುವುದು ನಮಗೂ ಗೊತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸದೃಢ ಆಡಳಿತ ನೀಡುತ್ತಿದ್ದೇವೆ. ಪಾಲಿಕೆಯಲ್ಲಿ ಉತ್ತಮ ಕೆಲಸಗಳಾಗುತ್ತಿದ್ದು, ಇದನ್ನು ಸಹಿಸಲಾಗದೇ ವಿಪಕ್ಷ ಸದಸ್ಯರು ಆರೋಪಿಸುತ್ತಿದ್ದಾರೆ ಎಂದು ಹರಿಹಾಯ್ದರು.

- - -

ಬಾಕ್ಸ್‌ * ರಾಜಕಾಲುವೆಗಳ ಉಳಿದ ಭಾಗ ಹೂಳೆತ್ತಲು ಸೂಚನೆ

- ಮಳೆಗಾಲದಲ್ಲಿ ಸಮಸ್ಯೆ ಆಗದಂತೆ ತ್ವರಿತ ಕಾಮಗಾರಿಗೆ ಮೇಯರ್ ಸೂಚನೆ ಕನ್ನಡಪ್ರಭ ವಾರ್ತೆ, ದಾವಣಗೆರೆ

ಮಳೆಗಾಲದ ಹಿನ್ನೆಲೆಯಲ್ಲಿ ಆವರಗೆರೆ, ಭಾರತ ಕಾಲನಿ, ಬಸಾಪುರದ ರಾಜಕಾಲುವೆಗಳಲ್ಲಿ ಹೂಳು ತುಂಬಿದ್ದು, ಅದನ್ನು ತೆರವುಗೊಳಿಸುವ ಮೂಲಕ ತ್ಯಾಜ್ಯ ನೀರು, ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಲು ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.

ನಗರದ ಆವರಗೆರೆ, ಭಾರತ ಕಾಲನಿ, ಬಸಾಪುರ ಗ್ರಾಮಗಳ ರಾಜ ಕಾಲುವೆಗಳಿಗೆ ಪಾಲಿಕೆ ಕಾಂಗ್ರೆಸ್ ಸದಸ್ಯರು, ಆಯುಕ್ತರು, ಅಧಿಕಾರಿಗಳ ಸಮೇತ ಶುಕ್ರವಾರ ಭೇಟಿ ನೀಡಿ, ವೀಕ್ಷಿಸಿದ ನಂತರ ಮಾತನಾಡಿದ ಅವರು, ಆದಷ್ಟು ಬೇಗನೆ ರಾಜಕಾಲುವೆಯಲ್ಲಿ ಉಳಿದಿರುವ ಕಡೆಗಳಲ್ಲೂ ಹೂಳೆತ್ತುವ ಕಾಮಗಾರಿ ಸಮರೋಪಾದಿಯಲ್ಲಿ ಕೈಗೊಂಡು, ಪೂರ್ಣಗೊಳಿಸಿ ಎಂದರು.

ಈಗಾಗಲೇ 2.5 ಕಿಮೀವರೆಗೆ ಹೂಳೆತ್ತುವ ಕಾರ್ಯ ಆಗಿದೆ. ಉಳಿದ 1.5 ಕಿಮೀ ಉದ್ದದ ರಾಜಕಾಲುವೆ ಹೂಳೆತ್ತಬೇಕು. ಮಳೆಗಾಲ ಶುರುವಾಗಿದ್ದು, ಮಳೆನೀರು ನಿಲ್ಲದಂತೆ, ಮೇಲೆ ಹರಿಯದೇ ಸರಾಗವಾಗಿ ಕಾಲುವೆಯಲ್ಲಿ ಹರಿದು ಹೋಗಬೇಕು. ಯಾವುದೇ ಭಾಗದಲ್ಲಿ ರಸ್ತೆ, ಮನೆ, ಕಟ್ಟಡಗಳಿಗೆ ಕಾಲುವೆ ನೀರು ನುಗ್ಗದಂತೆ ತಡೆಯಬೇಕು. ರಸ್ತೆ ಮೇಲೆ ನೀರು ಹರಿಯುವುದಕ್ಕೆ ಅವಕಾಶ ಆಗಬಾರದು ಎಂದು ಸೂಚಿಸಿದರು.

ಹಿರಿಯ ಸದಸ್ಯ ಜಿ.ಎಸ್. ಮಂಜುನಾಥ ಗಡಿಗುಡಾಳ್ ಮಾತನಾಡಿ, ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ. ಅದೇ ರೀತಿ ಉಳಿದ ಕಾಲುವೆ ಹೂಳೆತ್ತುವ ಕೆಲಸವೂ ತ್ವರಿತವಾಗಿ ಆಗಬೇಕು. ಜನರಿಗೆ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು. ಮಳೆನೀರು ಮನೆಗಳಿಗೆ, ಕಟ್ಟಡಗಳಿಗೆ, ತಗ್ಗು ಪ್ರದೇಶಕ್ಕೆ ನುಗ್ಗದಂತೆ, ರಾಜಕಾಲುವೆಯಲ್ಲಿ ಸರಾಗವಾಗಿ ಹರಿದುಹೋಗುವಂತೆ ಆಗಬೇಕು ಎಂದು ಹೇಳಿದರು.

ಪಾಲಿಕೆ ಆಯುಕ್ತೆ ರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ಲತೀಫ್, ಮೀನಾಕ್ಷಿ ಜಗದೀಶ, ಸದಸ್ಯರಾದ ಮಂಜುನಾಥ, ಶಿವಲಿಂಗಮ್ಮ ಕೊಟ್ರಯ್ಯ, ಕಾಂಗ್ರೆಸ್ ಮುಖಂಡ ಕೊಟ್ರಯ್ಯ ಬಸಾಪುರ, ಎಇ ಮನೋಹರ, ಪ್ರೀತಂ ಇತರರು ಇದ್ದರು.

- - - -28ಕೆಡಿವಿಜಿ14, 15, 16:

ದಾವಣಗೆರೆ ಮಹಾನಗರದ ವಿವಿಧೆಡೆ ಮೇಯರ್ ವಿನಾಯಕ ಪೈಲ್ವಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ, ಮಂಜುನಾಥ ಗಡಿಗುಡಾಳ, ಆಯುಕ್ತೆ ರೇಣುಕಾ, ಸದಸ್ಯರು, ಅಧಿಕಾರಿಗಳು ರಾಜಕಾಲುವೆ ಕಾಮಗಾರಿ ಪರಿಶೀಲಿಸಿದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ