ಮರ ಕಂಡರೆ ಅರಣ್ಯ ಎಂಬುದು ಯಾವ ಕಾನೂನಿನಲ್ಲಿದೆ: ಸಚಿವ ಕೆ.ಜೆ.ಜಾರ್ಜ್‌

KannadaprabhaNewsNetwork |  
Published : Oct 04, 2026, 01:15 AM IST
ಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಕಂದಾಯ ಇಲಾಖೆ ವ್ಯಾಪ್ತಿಯ ಜಾಗದಲ್ಲಿ ಹೆಚ್ಚಿನ ಸಂಖ್ಯೆ ಮರ ಕಾಣಿಸುತ್ತಿವೆ ಎಂಬ ಕಾರಣಕ್ಕೆ ಅದನ್ನು ಅರಣ್ಯ ಎಂದು ಪರಿ ಗಣಿಸಬೇಕೆಂದು ಯಾವ ಕಾನೂನಿನಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳಿಗೆ ತೀವ್ರ ತರಾಟೆ । ಮೂಡಿಗೆರೆ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಂದಾಯ ಇಲಾಖೆ ವ್ಯಾಪ್ತಿಯ ಜಾಗದಲ್ಲಿ ಹೆಚ್ಚಿನ ಸಂಖ್ಯೆ ಮರ ಕಾಣಿಸುತ್ತಿವೆ ಎಂಬ ಕಾರಣಕ್ಕೆ ಅದನ್ನು ಅರಣ್ಯ ಎಂದು ಪರಿ ಗಣಿಸಬೇಕೆಂದು ಯಾವ ಕಾನೂನಿನಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಮೂಡಿಗೆರೆಯ ಡಾ.ಅಡ್ಯಂತಾಯ ರಂಗಮಂದಿಯದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿ ದಾಖಲೆಗಳಲ್ಲಿ ಅರಣ್ಯ ಇಲಾಖೆ ಎಂದಿದ್ದರೆ ಆ ಜಾಗವನ್ನು ಪರಿಶೀಲಿಸಿ ವರದಿ ಕೊಡಿ, ಕಂದಾಯ ಇಲಾಖೆಗೆ ಸೇರಿದ ಜಾಗಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹೇಗೆ ಹೋಗಿ ಪರಿಶೀಲಿಸಿ ವರದಿ ನೀಡುತ್ತೀರಾ?, ಒಂದು ಇಂಚು ಡೀಮ್ಡ್‌ ಅರಣ್ಯ ಅಥವಾ ಸಂರಕ್ಷಿತ ಮೀಸಲು ಅರಣ್ಯದ ಜಾಗ ವಿದ್ದರೆ ಪರಿಶೀಲನೆಗೆ ಯಾವುದೇ ಅಭ್ಯಂತರವಿಲ್ಲ. ಆದರೆ, ಸಂಪೂರ್ಣ ಕಂದಾಯ ಇಲಾಖೆಗೆ ಸೇರಿದ ಜಾಗ ಏಕೆ ಪರಿಶೀಲಿಸುತ್ತೀರಾ. ಅರಣ್ಯ ಎಂದು ವರದಿ ಕೊಟ್ಟು ಜನರಿಗೇಕೆ ತೊಂದರೆ ನೀಡುತ್ತೀರಾ ಎಂದು ಕಿಡಿಕಾರಿದರು.

ಮಧುಗುಂಡಿ ಪ್ರವಾಹ ಸಂತ್ರಸ್ತರಿಗೆ ಪರ್ಯಾಯ ನಿವೇಶನ, ಜಮೀನು ಹಂಚಿಕೆ ಸಂಬಂದ ಮಲೆಮನೆ ವೇದಿಕೆ ಸದಸ್ಯರು ತ್ವರಿತ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು.

ಈ ವೇಳೆ ಶಾಸಕ ನಯನಾ ಮೋಟಮ್ಮ, 22 ಎಕರೆ ಜಾಗ ಗುರುತಿಸಲಾಗಿದೆ. ಆ ಜಾಗ ಸಂಪೂರ್ಣ ಕಂದಾಯ ಇಲಾಖೆಗೆ ಸೇರಿದೆ. ಆದರೆ, ಅರಣ್ಯ ಇಲಾಖೆ ವರದಿಯಲ್ಲಿ ಅರಣ್ಯ ಎಂದು ಉಲ್ಲೇಖಿಸಿದೆ. ಹೀಗಾಗಿ, ಸಮಸ್ಯೆ ಆಗಿದೆ ಎಂದರು. 11 ಮಂದಿ 2019ರ ಪ್ರವಾಹ ಸಂತ್ರಸ್ತರಿದ್ದು, ಎಲ್ಲರಿಗೆ ಒಂದೇ ಕಡೆ ಜಮೀನು ಹಾಗೂ ನಿವೇಶನ ನೀಡಬೇಕಿದೆ. ಒಟ್ಟಿಗೆ 24 ಎಕರೆ ಜಾಗ ದೊರೆಯುತ್ತಿಲ್ಲ. ಜಾಗ ಇರುವ ಕಡೆ ಸಂತ್ರಸ್ತರು ಒಪ್ಪುತ್ತಿಲ್ಲ ಎಂದರು.

ಬಹುತೇಕ ಅರ್ಜಿ ಕಂದಾಯ ಇಲಾಖೆ ಪಪಂ ಹಾಗೂ ಡೀಮ್ಡ್ ಅರಣ್ಯ, ಹಕ್ಕು ಪತ್ರ, ಬಡಾವಣೆ ಮೂಲ ಸೌಕರ್ಯ, ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಸಲ್ಲಿಕೆಯಾದವು.

ವಿಪ ಶಾಸಕಿ ಗಾಯಿತ್ರಿ ಶಾಂತೇಗೌಡ, ಮಾಜಿ ಸಚಿವೆ ಮೊಟಮ್ಮ, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಜಿತೇಂದರ್ ಕುಮಾರ್ ದಯಾಮ, ಉಸ್ತುವರಿ ಸಚಿವರ ಆಪ್ತ ಕಾರ್ಯದರ್ಶಿ ಸತೀಶ್ ಕುಮಾರ್, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ, ಅರಣ್ಯಾಧಿಕಾರಿಗಳಾದ ಪುಲ್‌ಕಿತ್ ಮೀನಾ, ಬೋರಯ್ಯ, ಶಿವಶಂಕರ್‌, ತಹಸೀಲ್ದರ್ ಅಶ್ವಿನಿ ಇದ್ದರು.-- ಬಾಕ್ಸ್‌----

ಸಾರ್ವಜನಿಕರ ಸಮಸ್ಯೆಗೆ ಪರಿಹಾರ ನೀಡುವುದು ಜವಾಬ್ದಾರಿ

ಜನಪ್ರತಿನಿಧಿಗಳಾದ ನಾವು ಜನರ ಸೇವೆಗಾಗಿ ಇದ್ದು, ಸಾರ್ವಜನಿಕರ ಸಮಸ್ಯೆಗೆ ಪರಿಹಾರ ದೊರಕಿಸುವುದು ನಮ್ಮ ಜವಾಬ್ದಾರಿ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಪ್ರಜಾಸೇವಾ ಆಂದೋಲನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಕನಸಿನ ಕೂಸು. ಕ್ಷೇತ್ರದ ಸಾರ್ವಜನಿಕರ ಅಹ ವಾಲು ಆಲಿಸಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.2023ರಲ್ಲಿ ಶಾಸಕರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ 49 ಗ್ರಾಪಂಗಳ ಪೈಕಿ 12 ಗ್ರಾಪಂಗಳನ್ನು ಹೊರತುಪಡಿಸಿ ಉಳಿದ ಎಲ್ಲ ಗ್ರಾಪಂಗಳಲ್ಲಿ ಜನಸಂಪರ್ಕ ಸಭೆ ನಡೆಸಲಾಗಿದೆ. ಜನರ ಸಮಸ್ಯೆ ಸ್ಥಳದಲ್ಲೇ ಆಲಿಸಿ, ಸಾಧ್ಯವಾದಷ್ಟು ತಕ್ಷಣ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗಿದೆ ಎಂದರು. ಜನಸಂಪರ್ಕ ಸಭೆಗಳಲ್ಲಿ ಅಧಿಕಾರಿಗಳ ವಿರುದ್ಧ ಉತ್ಪ್ರೇಕ್ಷೆ ಅಥವಾ ಗಲಾಟೆ ಮಾಡು ವುದು ಸರಿಯಲ್ಲ. ನಾಲ್ಕೈದು ಬಾರಿ ಕಚೇರಿಗೆ ಅಲೆದಾಡಿರಬಹುದು. ಆದರೆ ಸರ್ಕಾರದ ನಿಯಮ ಹಾಗೂ ಕಾನೂನು ಮೀರಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.---ಬಾಕ್ಸ್‌---ಪ್ರಜಾ ಸೇವಾದಡಿ 761 ಅರ್ಜಿ ವಿಲೇವಾರಿಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟಗಳಲ್ಲಿ ಈವರೆಗೆ ನಡೆದಪ್ರಜಾಸೇವಾ ಆಂದೋಲನದಲ್ಲಿ ಒಟ್ಟು 1003 ಅರ್ಜಿ ಸ್ವೀಕೃತದ ಪೈಕಿ 761 ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ಡಿಸಿ ಭನ್ವರ್‌ ಸಿಂಗ್ ಮೀನಾ ತಿಳಿಸಿದರು. ಸಭೆ ಉದ್ದೇಶಿಸಿ ಮಾತನಾಡಿ ಸೆ.5 ರಿಂದ ಪ್ರಜಾಸೇವಾ ಆಂದೋಲನದಡಿ ಪ್ರತಿ ಶನಿವಾರ ಸಮಸ್ಯೆ ಅಹವಾಲು ಸ್ವೀಕರಿಸಲಾಗುತ್ತಿದೆ. ಈವರೆಗೆ ನಡೆದ ಪ್ರಜಾಸೇವಾ ಆಂದೋಲನಗಳಲ್ಲಿ ಒಟ್ಟು 1003 ಅರ್ಜಿಗಳು ಸ್ವೀಕೃತವಾಗಿ ಅವು ಗಳಲ್ಲಿ 761 ಅರ್ಜಿ ವಿಲೇವಾರಿ ಮಾಡಲಾಗಿದೆ. ಉಳಿದ ೨೪೩ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಪ್ರತಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಇವುಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.ಜನರ ಸಮಸ್ಯೆಗೆ ಹಿಂಬರಹ ನೀಡುವುದಕ್ಕೆ ಸೀಮಿತವಾಗದೆ, ಗುಣಮಟ್ಟ ಮತ್ತು ಶಾಶ್ವತ ಪರಿಹಾರ ಕಂಡು ಕೊಳ್ಳು ವುದೇ ಈ ಆಂದೋಲನದ ಪ್ರಮುಖ ಉದ್ದೇಶ ಎಂದು ಹೇಳಿದರು.

----ಬಾಕ್ಸ್‌---

ಹಲವು ಸಮಸ್ಯೆಗೆ ಜಂಟಿ ಸರ್ವೇಯಿಂದ ಪರಿಹಾರ

ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಂಟಿ ಸರ್ವೇ ಮುಂದಿನ 2 ತಿಂಗಳಲ್ಲಿ ಪೂರ್ಣಗೊಂಡ ತಕ್ಷಣ ರೈತರ ಭೂಮಿ ಪೋಡಿ ಹಾಗೂ ಡೀಮ್ಡ್ ಅರಣ್ಯ ಸಂಬಂಧ ದಶಕಗಳ ಹಳೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಭರವಸೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 50,000 ಎಕರೆ ಡೀಮ್ಡ್ ಅರಣ್ಯ ಭೂಮಿ ಕಂದಾಯ ಇಲಾಖೆಗೆ ಬಿಟ್ಟುಕೊಡುವ ಪ್ರಕ್ರಿಯೆಗೆ ಜಂಟಿ ಸರ್ವೇ ಯಿಂದ ಹಾದಿ ಸುಗಮವಾಗಲಿದೆ. ಸೆಕ್ಷನ್ 4 ಜಾರಿಯಾದ ಜಾಗಗಳಿಗೆ ಸೂಕ್ತ ಕಾನೂನಾತ್ಮಕ ಪರಿಶೀಲನೆ ನಡೆಸಲಾಗುವುದು ಎಂದಿದ್ದಾರೆ.

---ಅಧಿಕಾರಿಗಳಿಂದ ಲಂಚದ ಬೇಡಿಕೆ:

ಸರ್ವೇಗೆ ಲಂಚ ಕೇಳಲಾಗುತ್ತಿದೆ. ಲಂಚ ನೀಡಲಿಲ್ಲ ಎಂಬ ಒಂದೇ ಕಾರಣಕ್ಕೆ ದಾಖಲೆ ಕಳೆದು ಹಾಕಿದ್ದಾರೆ ಎಂದು ಶ್ರೇಷ್ಠಿ ಎಂಬುವವರು ಆರೋಪಿಸಿದರೆ, ಲಂಚ ಪಡೆದು ಖಾಸಗಿ ಲೇಔಟ್‌ ನಿರ್ಮಾಣ ಮಾಡಿದವರಿಗೆ ಪಟ್ಟಣ ಪಂಚಾಯಿತಿ ಯಿಂದ ಎನ್‌ಒಸಿ ನೀಡಲಾಗಿದೆ ಎಂದು ಮಾಜಿ ಸೈನಿಕ ರವಿಕುಮಾರ್‌ ಸಚಿವರ ಮುಂದೇ ದೂರಿದ ಘಟನೆ ಅರ್ಜಿ ಸ್ವೀಕಾರ ಸಮಾರಂಭದಲ್ಲಿ ನಡೆಯಿತು.

ದುರ್ಗದಹಳ್ಳಿ ಕೆರೆಗೆ ಬೇಲಿ:

ತಾಲೂಕಿ ದುರ್ಗದ ಹಳ್ಳಿ 26 ಗುಂಟೆ ಕೆರೆಗೆ ಖಾಸಗಿ ವ್ಯಕ್ತಿ ಬೇಲಿ ಹಾಕಿದ್ದಾನೆ. ಜನ-ಜಾನುವಾರುಮ ಪ್ರಾಣಿ ಪಕ್ಷಿಗಳು ನೀರು ಕುಡಿಯು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಲಿ ಹಾಕಲು ಸರ್ಕಾರಿ ಅಧಿಕಾರಿಗಳೇ ಸಹಕಾರ ನೀಡಿದ್ದಾರೆ ಎಂಬ ದೂರು ಕೇಳಿ ಬಂತು. ಅದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕಿ ನಯನಾ ಮೋಟಮ್ಮ, ತಕ್ಷಣ ಬೇಲಿ ತೆರವುಗೊಳಿಸಲು ಅಧಿಕಾರಿ ಗಳಿಗೆ ತಾಕೀತು ಮಾಡಿದರು.

ಅಧಿಕಾರಿಗಳಿಗೆ ಅರ್ಥವಾಗಲೆಂದು 3 ಭಾಷೆಯಲ್ಲಿ ಅರ್ಜಿ2023ರಲ್ಲಿ ಮುತ್ತಿಗೆಪುರದಲ್ಲಿ ಒಳಚರಂಡಿ ಕಾಮಗಾರಿ ಮಾಡಲಾಗಿತ್ತು. ಆದರೆ, ಒಳಚರಂಡಿ ಸಂಪೂರ್ಣ ನೀರು ತುಂಬಿದೆ. ಈ ಬಗ್ಗೆ ಸುಮಾರು 30 ಅರ್ಜಿಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ಅಧಿಕಾರಿಗಳಿಗೆ ಅರ್ಥವಾಗಲಿ ಎಂಬ ಕಾರಣಕ್ಕೆ ಕನ್ನಡ, ಇಂಗ್ಲಿಷ್‌, ಹಿಂದಿ ಹೀಗೆ ಮೂರು ಭಾಷೆಯಲ್ಲಿ ಅರ್ಜಿ ನೀಡಿದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ನಿವಾಸಿಯೊಬ್ಬರು ಅಳಲು ತೋಡಿಕೊಂಡರು.-- ಬಾಕ್ಸ್‌ --

7 ಗುಂಟೆ ನಿವೇಶನಕ್ಕೆ ಮಾಜಿ ಸೈನಿಕ ಅಲೆದಾಟ

1983ರಲ್ಲಿ ಸೇನೆಯಿಂದ ನಿವೃತ್ತರಾದ ಚಂದ್ರಶೇಖರ್‌ ಅವರು 1988 ರಿಂದ 7 ಗುಂಟೆ ನಿವೇಶನಕ್ಕೆ ಅರ್ಜಿ ಸಲ್ಲಿಸಿ ಮಂಜೂ ರಾತಿ ಪಡೆಯಲು ಅಲೆದಾಡುತ್ತಿರುವುದಾಗಿ ಹೇಳಿಕೊಂಡರು.

ತಾಲೂಕು ಕಚೇರಿ ಒಳಗೆ ಪ್ರವೇಶಕ್ಕೂ ಅಧಿಕಾರಿಗಳು ಅವಕಾಶ ನೀಡದೇ ಹೊರಗೆ ನಿಲ್ಲಿಸುತ್ತಾರೆ. ಹಾರಿಕೆ ಉತ್ತರ ನೀಡುತ್ತಾರೆ ಎಂದರು.

ಅದಕ್ಕೆ ಪ್ರಕ್ರಿಯೆ ನೀಡಿದ ಡಿಸಿ ಆದ್ಯತೆ ಮೇರೆಗೆ ನಿವೇಶನ ಮಂಜೂರು ಮಾಡಲಾಗುವುದು. ಸರ್ಕಾರ ಮಾಜಿ ಸೈನಿಕರಿಗೆ ವಿಶೇಷ ಕಾರ್ಯಕ್ರಮ ರೂಪಿಸಿದೆ. ಅ.15ರ ಒಳಗೆ ಅರ್ಜಿ ಸಲ್ಲಿಸಿದವರಿಗೆ ನವೆಂಬರ್‌ ಅಂತ್ಯದೊಳಗೆ ಅಂತಿಮ ತೀರ್ಮಾನಿಸಿ ನಿವೇಶನ ನೀಡಲಾಗುವುದು ಎಂಬ ಭರವಸೆ ನೀಡಿದರು.

--- ಬಾಕ್ಸ್‌----

ಜಿಲ್ಲಾ ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು ಕೊಡಿ

ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಅವರು ಜಿಲ್ಲೆಯ ಪ್ರವಾಸೋದ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ರಾಣಿ ಝರೀ ಫಾಲ್ಸ್‌ನಲ್ಲಿ ರೋಪ್‌ ವೇ ನಿರ್ಮಾಣ, ಜಿಲ್ಲೆಯಲ್ಲಿ ರಸ್ತೆ, ರೈಲ್ವೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಮನವಿ ಮಾಡಿದರು.

ಅದಕ್ಕೆ ಪ್ರಕ್ರಿಯೆ ನೀಡಿದ ಸಚಿವ ಕೆ.ಜೆ. ಜಾರ್ಜ್‌ ಮಂಗಳೂರಿನಲ್ಲಿ ಸಚಿವ ಸಂಪುಟದಲ್ಲಿ ಕರಾವಳಿ ಮತ್ತು ಮಲೆನಾಡು ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ಕಾಯ್ದೆ ರೂಪಿಸಲು ಅನುಮೋದನೆ ನೀಡಲಾಗಿದೆ. ಸಾಕಷ್ಟು ಪ್ರಮಾಣದ ಅನುದಾನ ನೀಡಲು ಸರ್ಕಾರ ನಿರ್ಧರಿಸಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಗೇಶಪುರವನ್ನು ಮಾದರಿ ಗ್ರಾಮವನ್ನಾಗಿಸುವ ಸಂಕಲ್ಪ
ಕಲಬುರಗಿ: ಟ್ಯಾಂಕರ್‌ನಲ್ಲಿ ನೀರು ಪೂರೈಕೆ