ಕನ್ನಡಪ್ರಭ ವಾರ್ತೆ ಮೈಸೂರುವರದಿಗಾರಿಕೆಯಲ್ಲಿ ತೊಡಗಿಸಿಕೊಳ್ಳುವವರು ನಿಖರತೆ, ವಸ್ತುನಿಷ್ಠತೆಗೆ ಹೆಚ್ಚು ಆದ್ಯತೆ ನೀಡಿ ನಿಮ್ಮದೇ ವಿಶ್ಲೇಷಣಾತ್ಮಕವಾಗಿ ಬರೆಯಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಹೇಳಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮಾಧ್ಯಮ ಅಕಾಡೆಮಿಯು ಮೈಸೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಭಾಗಿತ್ವದಲ್ಲಿ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿರುವ ಏನ್ ಸಮಾಚಾರ ಮಾಧ್ಯಮ ಹಬ್ಬ- 2025 ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.ವರದಿಗಾರರಾಗುವವರು ಮೊದಲು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹೆಚ್ಚು ಹೆಚ್ಚು ಓದಿದಾಗ ಒಳ್ಳೆಯ ಲೇಖನಗಳನ್ನು ಬರೆಯಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ವಾಟ್ಸ್ಯಾಪ್ ವಿವಿ, ಸಾಮಾಜಿಕ ಜಾಲತಾಣದ ಅಬ್ಬರ ಹೆಚ್ಚಾಗಿದೆ ಎಂದರು.ಯಾವುದೇ ವಿಷಯವನ್ನು ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಯೋಚಿಸಬೇಕೆ ಎಂಬುದನ್ನು ತಿಳಿಯಬೇಕು. ಆದರೆ ಅನೇಕ ಸಂದರ್ಭಗಳಲ್ಲಿ ಋಣಾತ್ಮಕ ಸುದ್ದಿಗಳೇ ಬಂದಿರುತ್ತವೆ. ಅದೇ ಕಾರಣಕ್ಕೆ ಓದುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಸುದ್ದಿಯನ್ನು ಆದಷ್ಟು ಬೇಗ ಜನರಿಗೆ ತಿಳಿಸಬೇಕು ಎಂಬ ಕಾರಣಕ್ಕೆ ಸುಳ್ಳು ಸುದ್ದಿಯೂ ಹರಿದಾಡುತ್ತದೆ. ಮಾರನೆಯ ದಿನ ಪತ್ರಿಕೆಯಲ್ಲಿ ಆ ಸುದ್ದಿಯೇ ಬಂದಿರುವುದಿಲ್ಲ. ಏಕೆಂದರೆ ಅಂತದ್ದು ನಡೆದಿರುವುದೇ ಇಲ್ಲ ಎಂದರು.ಪತ್ರಕರ್ತರಾಗಬೇಕು ಎನ್ನುವವರು ಮೊದಲು ಓದುವುದನ್ನು ರೂಢಿಸಿಕೊಂಡು ವಿಶ್ಲೇಷಣಾತ್ಮಕವಾಗಿ ತಮ್ಮ ಸ್ವಂತವಾಗಿ ಬರೆಯಬೇಕು. ವಸ್ತುನಿಷ್ಠತೆ, ಸಮಗ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವರದಿಗಾರಿಕೆಯಲ್ಲಿ ನಿಮ್ಮತನ ಇರಬೇಕು. ಅಲೆಕ್ಸ್, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡರೂ, ಅದರ ಮೇಲೆಯೇ ಅವಲಂಬಿತರಾಗಬಾರದು ಎಂದು ಅವರು ಹೇಳಿದರು.ಇತ್ತೀಚೆಗೆ ಸುಳ್ಳು ಬಹಳ ಬೇಗ ವೈರಲ್ ಅಗುತ್ತದೆ. ಒಂದು ಸುದ್ದಿಯನ್ನು ವಿಶ್ಲೇಷಿಸಬೇಕು, ಅದರಲ್ಲಿ ಹೊಸತನ ಇರಬೇಕು. ಆಗ ನಿಮ್ಮ ವರದಿಯಲ್ಲಿ ಗಟ್ಟಿತನ ಇರುತ್ತದೆ. ಸಮಾಜ ನಿಮ್ಮನ್ನು ಗುರುತಿಸುತ್ತದೆ. ಅನೇಕರು ನಿಮಗೆ ಅಭಿಮಾನಿಗಳೂ ಆಗುತ್ತಾರೆ. ನಿಮ್ಮ ಬರವಣಿಗೆ ಸಮಾಜ ತಿದ್ದುವ ಕೆಲಸ ಮಾಡಬೇಕು ಎಂದರು.ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಸಾಕಷ್ಟು ಬದಲಾಗಿದೆ. ನಾವು ದೂರದರ್ಶನದಲ್ಲಿ ಕಾಲುಗಂಟೆ ವಾರ್ತೆ ಕೇಳುತ್ತಿದ್ದೆವು. ಅಷ್ಟು ಸಮಯದಲ್ಲಿಯೇ ಎಲ್ಲಾ ಸುದ್ದಿಗಳೂ ಲಭ್ಯವಾಗುತ್ತಿತ್ತು. ಆದರೆ ಈಗ ಒಂದೇ ಸುದ್ದಿಯನ್ನು ಹೆಚ್ಚು ಕಾಲ ತೋರಿಸಲಾಗುತ್ತಿದೆ. ಮಾಧ್ಯಮ ಅಕಾಡೆಮಿಯಲ್ಲಿ ಹೊಸದಾಗಿ ಪತ್ರಕರ್ತರಾಗುವವರಿಗೆ ತರಬೇತಿ ನೀಡಲಾಗುತ್ತಿದೆ. ಇದನ್ನು ವಿದ್ಯಾರ್ಥಿಗಳು ಬಳಸಿಕೊಂಡು ಮುಂದುವರೆಯಬೇಕು ಎಂದು ಅವರು ಕಿವಿಮಾತು ಹೇಳಿದರು.ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಾಷಾ ಖಾನಂ ಮಾತನಾಡಿ, ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ಪ್ರೋತ್ಸಾಹದಿಂದ ಮಿಡಿಯಾ ಹಬ್ಬ ಆಚರಿಸುತ್ತಿದ್ದೇವೆ. ಇಂದು ಪತ್ರಿಕೋದ್ಯಮದ ಬಗ್ಗೆ ನಂಬಿಕೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಯುವ ಪತ್ರಕರ್ತರು ಅದನ್ನು ಬದಲಿಸಬೇಕು. ಅಕಾಡೆಮಿ ಮತ್ತು ಮಾಧ್ಯಮ ನಡುವೇ ಸೇತುವೆ ಇರಬೇಕು. ಇದರ ಮೂಲಕ ಉತ್ತಮ ವಿಷಯಗಳ ಬಗ್ಗೆ ಚರ್ಚೆ ಆಗಬೇಕು. ಕಲ್ಯಾಣ ಕರ್ನಾಟಕದ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುವ ಪತ್ರಕರ್ತಕರು ಕ್ಯಾಂಪಸ್ ನಲ್ಲಿ ಇರುವಾಗ ಎಂಜಾಯ್ ಮಾಡಿ. ಅದರೆ, ಹೊರಗೆ ಹೋದಾಗ ಪ್ರಶ್ನಿಸುವ ಮುನ್ನ ಅದರ ಬಗ್ಗೆ ತಿಳಿದುಕೊಳ್ಳಿ ಎಂದು ಸಲಹೆ ನೀಡಿದರು.
ಕಾಲೇಜಿನಲ್ಲಿ ನಡೆಯುವ ಅಣಕು ಪತ್ರಿಕಾಗೋಷ್ಠಿಗಳಲ್ಲಿ ಮೊದಲು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಆರಂಭದಲ್ಲಿ ತಪ್ಪಾದರೂ ಅದನ್ನು ಬದಿಗೊತ್ತಿ ಅಭ್ಯಾಸ ಮಾಡಿಕೊಳ್ಳಿ ಎಂದರು.ಅಕಾಡೆಮಿಯಿಂದ ಇಂಟರ್ನಶಿಪ್ ಗೆ ಆಹ್ವಾನಿಸಿದರೆ ಹೆಚ್ಚು ಮಂದಿ ಬರುವುದೇ ಇಲ್ಲ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಅವಕಾಶವಿದೆ. ಅಕಾಡೆಮಿಯ ಸಂಪರ್ಕ ಸಾಧಿಸಿ ಅವಕಾಶ ಸದುಪಯೋಗಪಡಿಸಿಕೊಳ್ಳಿ ಎಂದು ಅವರು ಹೇಳಿದರು.ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎನ್. ಮಮತಾ, ಅಕಾಡೆಮಿ ಕಾರ್ಯದರ್ಶಿ ಎಂ. ಸಹನಾ ಇದ್ದರು. ಮಾಧ್ಯಮ ಅಕಾಡೆಮಿ ಸದಸ್ಯೆ ಎಂ.ಸಿ. ಶೋಭಾ ನಿರೂಪಿಸಿದರು.-- ಬಾಕ್ಸ್-- --ನಿರಂತರ ಕಲಿಕೆ, ಅಭ್ಯಾಸವಿರಲಿ--ಹಿರಿಯ ಪತ್ರಕರ್ತೆ ಮಾಯಾ ಶರ್ಮಾ ಮಾತನಾಡಿ, ಮಾಹಿತಿ ಪ್ರಮುಖ ಶಕ್ತಿಯಾಗಿ ಪಾತ್ರವಹಿಸುತ್ತದೆ. ಇಂದು ಅನೇಕ ಸವಾಲನ್ನು ಎದುರಿಸಬೇಕಿದೆ. ಪ್ರೆಸ್ ರ್ಯಾಂಕಿಂಗ್ ಕಡಿಮೆ ಆಗುತ್ತಿದೆ ಎಂದು ಭಾವಿಸಬಾರದು. ಮಾಧ್ಯಮ ಇಂದು ಒಂದು ಕಡೆಗೆ ವಾಲುತ್ತಿದೆ. ತಟಸ್ಥರಾಗಿದ್ದು ಸುದ್ದಿ ಮಾಡುವುದು ಕಡಿಮೆಯಾಗಿದೆ. ನೀವು ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು. ನಿರಂತರ ಕಲಿಕೆ ಮತ್ತು ಅಭ್ಯಾಸದಿಂದ ತಜ್ಞತೆ ಲಭಿಸುತ್ತದೆ ಎಂದು ಹೇಳಿದರು.ಬದಲಾವಣೆಗೆ ವೇಗವಾಗಿ ಒಗ್ಗಿಕೊಳ್ಳುವ ಕ್ಷಮತೆ ಬೆಳೆಸಿಕೊಳ್ಳಬೇಕು, ಮಾಧ್ಯಮ ಕಲಿಕಾರ್ಥಿಗಳು ಮೊದಲು ಗುರಿ ತಲುಪಲು ಮಾನಸಿಕವಾಗಿ ಸಿದ್ಧರಾಗಬೇಕು. ಆತ್ಮ ಸಂತೃಪ್ತಿ ನೀಡುವ ವೃತ್ತಿ ಪ್ರಾಮಾಣಿಕತೆ ಸರಳತೆ ಇರಬೇಕು. ಫೇಕ್ ನ್ಯೂಸ್ ಬಗ್ಗೆ ಅರಿತುಕೊಳ್ಳಬೇಕು. ವಾಟ್ಸ್ ಅಪ್ ಯೂನಿವರ್ಸಿಟಿಯಿಂದ ಸುಳ್ಳು ಮಾಹಿತಿ ಹರಡುತ್ತಿದೆ. ಎಐ, ಸಾಮಾಜಿಕ ಜಾಲತಾಣದಿಂದ ಒಳಿತು ಇದೆ. ಕೆಡಕು ಇದೆ. ಅದನ್ನು ಉತ್ತಮವಾಗಿ ಬಳಸಿಕೊಳ್ಳಿ ಎಂದರು.