ಮುಸ್ಲಿಮರು ಏನೇ ಮಾಡಿದ್ರೂ ಮಾಫಿ: ಅರವಿಂದ ಬೆಲ್ಲದ್ ಟೀಕೆ

KannadaprabhaNewsNetwork | Published : May 2, 2024 1:34 AM

ಸಾರಾಂಶ

ರಾಜ್ಯದಲ್ಲಿ ಮುಸ್ಲಿಮರು ಏನು ಮಾಡಿದರೂ ಮಾಫಿ ಮಾಡುತ್ತಾರೆ. ರಾಮನಗರ ಎಂಎಲ್ಎ ಮುಸ್ಲಿಂ ಅಲ್ವಾ. ಅದು ಸಹ ಮಾಫಿ ಮಾಡ್ತಾರೆ ಎಂದು ವಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.

- ಸಿದ್ದುಗೆ ಗಂಡಸ್ಥನ ಇದ್ದರೆ ರಾಮನಗರ ಎಂಎಲ್ಎ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲು - ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಸಿಬಿಐ ಸೇರಿದಂತೆ ಉನ್ನತ ಸಂಸ್ಥೆಗೆ ನೀಡಲು ಆಗ್ರಹ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಜ್ಯದಲ್ಲಿ ಮುಸ್ಲಿಮರು ಏನು ಮಾಡಿದರೂ ಮಾಫಿ ಮಾಡುತ್ತಾರೆ. ರಾಮನಗರ ಎಂಎಲ್ಎ ಮುಸ್ಲಿಂ ಅಲ್ವಾ. ಅದು ಸಹ ಮಾಫಿ ಮಾಡ್ತಾರೆ ಎಂದು ವಿಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಎಂಎಲ್ಎ ಅವರಿಂದಾಗಿ ಇಷ್ಟೆಲ್ಲಾ ಆದರೂ ಯಾಕೆ ಕ್ರಮ ಕೈಗೊಂಡಿಲ್ಲ? ಸಿದ್ದರಾಮಯ್ಯನಿಗೆ ಗಂಡಸ್ಥನ ಇದ್ದರೆ, ಮೊದಲು ಆಕ್ಷನ್ ತೆಗೆದುಕೊಳ್ಳಲಿ. ಇಷ್ಟೆಲ್ಲಾ ಆದರೂ ಆಕ್ಷನ್ ತಗೊಳ್ಳೋದಿಲ್ಲ, ಯಾಕ್ ಹೇಳ್ರೀ? ಅವ್ರು ಮುಸ್ಲಿಮರಲ್ವಾ ಅದಕ್ಕೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿ-ಕಾಂಗ್ರೆಸ್ ಅಂತೆಲ್ಲಾ ಬರುವುದಿಲ್ಲ. ಅದು ಮಹಿಳೆಯರ ಮರ್ಯಾದೆಯ ಪ್ರಶ್ನೆಯಾಗಿದೆ ಎಂದು ಹೇಳಿದರು.

ಪ್ರಕರಣ ತನಿಖೆ ನಡೆಸುವಂತೆ ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೂ, ಕಾಂಗ್ರೆಸ್ ಸರ್ಕಾರ ಮಾತ್ರ ತನಿಖೆಗೆ ವಿಳಂಬ ಮಾಡುತ್ತಿದೆ. ಈ ಬಗ್ಗೆ ಜನರಿಗೆ ಸಿದ್ದರಾಮಯ್ಯ ಸರ್ಕಾರ ಉತ್ತರ ಕೊಡಬೇಕು. ಯಾರ ಜೊತೆಗೆ ನೀವು ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡು, ತನಿಖೆಗೆ ವಿಳಂಬ ಮಾಡಿದ್ರಿ ಅಂತಾ ಹೇಳಿ. ತನಿಖೆಗೆ ರಾಜ್ಯ ಸರ್ಕಾರ ವಿಳಂಬ ಮಾಡಿದ್ದು ಏಕೆಂಬುದು ಮೊದಲು ರಾಜ್ಯದ ಜನರಿಗೆ ಗೊತ್ತಾಗಬೇಕಾಗಿದೆ ಎಂದು ಅವರು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಕೊಲೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಮೃತದೇಹವನ್ನು ನಾನು ಮರಣೋತ್ತರ ಪರೀಕ್ಷೆಗಿಂತ ಮೊದಲು ನೋಡಿದೆ. ಹೀಗೆಲ್ಲಾ ಕೊಲೆ ಮಾಡಲು ಎಲ್ಲಿ ತರಬೇತಿ ನೀಡುತ್ತಾರೆಂಬ ಬಗ್ಗೆ ಮೊದಲು ಗೊತ್ತಾಗಬೇಕಿದೆ. ಜಿಹಾದಿ ಮನಸ್ಥಿತಿಯನ್ನು ಹೊಂದಿರುವವರಿಂದ ಮಾತ್ರ ಇದು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದು ಯುವತಿಯರು, ಮಹಿಳೆಯರ ಜೊತೆಗೆ ಫೋಟೋ ತೆಗೆಸಿಕೊಂಡು, ಬ್ಲಾಕ್ ಮೇಲ್ ಮಾಡುವುದು, ಮತಾಂತರ ಆಗುವಂತೆ ಹೆದರಿಸುವುದು, ಅದಕ್ಕೆಲ್ಲಾ ಒಪ್ಪದೇ ಇದ್ದಾಗ ಕೊಲೆ ಮಾಡುವುದಾಗುತ್ತಿದೆ. ಈ ರೀತಿ ಕೊಲೆ ಮಾಡುವ ಜಿಹಾದಿಗಳಿಗೆ ತರಬೇತಿ ನೀಡುತ್ತಿದ್ದಾರೆ. ನೇಹಾ ಹತ್ಯೆ ಪ್ರಕರಣ‍ ಸಿಓಡಿಗೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದರು.

ಸಿಒಡಿ ಮೇಲೆಲ್ಲಾ ನಮಗೆ ನಂಬಿಕೆ ಇಲ್ಲ. ಪೊಲೀಸ್ ಇಲಾಖೆಯಲ್ಲಿ ಬೇಡವಾದವರನ್ನು ಸಿಒಡಿಗೆ ಹಾಕಿರ್ತಾರೆ. ಅಂಥವರ ತನಿಖೆ ನಾವು ಒಪ್ಪುವುದಿಲ್ಲ. ನ್ಯಾಯವನ್ನೂ ನಿರೀಕ್ಷೆ ಮಾಡುವುದಿಲ್ಲ. ಸಿಬಿಐ ಸೇರಿದಂತೆ ವಿವಿಧ ಅತ್ಯುನ್ನತ ತನಿಖಾ ಸಂಸ್ಥೆಗಳಿಗೆ ಪ್ರಕರಣದ ತನಿಖೆಯನ್ನು ಒಪ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಅರವಿಂದ ಬೆಲ್ಲದ್ ಒತ್ತಾಯಿಸಿದರು.

- - - (-ಫೋಟೋ: ಅರವಿಂದ ಬೆಲ್ಲದ್‌)

Share this article