ಹುಬ್ಬಳ್ಳಿ: ಹೆಸ್ಕಾಂ ಸಮಸ್ಯೆಗಳ ಪರಿಹಾರಕ್ಕೆ ಪಾಲಿಕೆಯ 87 ಸದಸ್ಯರನ್ನೊಳಗೊಂಡ ವ್ಯಾಟ್ಸ್ ಆ್ಯಪ್ ಗ್ರುಪ್ ಮಾಡಿ. ಸದಸ್ಯರು ತಿಳಿಸುವ ಸಮಸ್ಯೆಗಳಿಗೆ ತಕ್ಷಣವೇ ಬಗೆಹರಿಸಲು ಕ್ರಮ ಕೈಗೊಳ್ಳಿ ಎಂದು ಮೇಯರ್ ರಾಮಣ್ಣ ಬಡಿಗೇರ್ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಜನರಿಗೆ ತೊಂದರೆ ಆಗುತ್ತಿರುವ ಟಿಸಿ ಸ್ಥಳಾಂತರ ಸೇರಿ ಹತ್ತಾರು ಸಮಸ್ಯೆ ಬಗೆಹರಿಸಲು ಹೆಸ್ಕಾಂ ಅಧಿಕಾರಿಗಳು ತ್ವರಿತ ಕ್ರಮವಹಿಸಬೇಕು. ಈ ನಿಟ್ಟಿನಲ್ಲಿ ಪಾಲಿಕೆ 87 ಸದಸ್ಯರನ್ನೊಳಗೊಂಡ ವ್ಯಾಟ್ಸಪ್ ಗ್ರುಪ್ ಮಾಡಿ, ಅದರಲ್ಲಿ ನೀಡುವ ಮಾಹಿತಿ ಅನುಸಾರ ಸಮಸ್ಯೆ ಪರಿಹರಿಸಬೇಕು. ಇನ್ನು ಕರ ಆಕರಣೆ ಸೇರಿ ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲು ಹೆಸ್ಕಾಂ ಎಂಡಿ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ರುದ್ರಭೂಮಿಗೆ ಜಾಗಒಂದೇ ಸಮುದಾಯದ ರುದ್ರಭೂಮಿಗಾಗಿ ಜಾಗ ಖರೀದಿಸಿದರೆ, ಉಳಿದ ಸಮುದಾಯದವರ ಕೆಂಗಣ್ಣಿಗೆ ಪಾಲಿಕೆ ಗುರಿಯಾಗಬೇಕಾಗುತ್ತದೆ. ರುದ್ರಭೂಮಿ ಎಲ್ಲ ಸಮುದಾಯಕ್ಕೂ ಅತ್ಯವಶ್ಯಕ. ಹೀಗಾಗಿ ಹು-ಧಾ ಮಹಾನಗರದ ನಾಲ್ಕು ದಿಕ್ಕಿನಲ್ಲಿ ರುದ್ರಭೂಮಿ ಜಾಗ ಖರೀದಿಗೆ ಪಾಲಿಕೆ ಆಯುಕ್ತರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸದಸ್ಯ ತಿಪ್ಪಣ್ಣ ಮಜ್ಜಗಿ, ವೀರಣ್ಣ ಸವಡಿ ಒತ್ತಾಯಿಸಿದರು. ಎಲ್ಲ ಸಮುದಾಯಕ್ಕೂ ರುದ್ರಭೂಮಿ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಆಯುಕ್ತರು ಪೂರಕ ಪ್ರಸ್ತಾವನೆ ಸಿದ್ಧಪಡಿಸಬೇಕು ಎಂದು ಮೇಯರ್ ಆದೇಶಿಸಿದರು.
ಪಾಲಿಕೆ ಸದಸ್ಯರಿಗೆ ವೈದ್ಯಕೀಯ ವೆಚ್ಚ ಭರಿಸಲು ಪಾಲಿಕೆಯಲ್ಲಿ ಅವಕಾಶವಿಲ್ಲ. ಈ ಸಂಬಂಧ ಸರ್ಕಾರ ನಿರ್ದೇಶನ ನೀಡಿದೆ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು. ಆಗ ಸದಸ್ಯ ಈರೇಶ ಅಂಚಟಗೇರಿ ಮಾತನಾಡಿ, ಪತ್ರಕರ್ತರು ಮತ್ತು ಪಾಲಿಕೆ ಸದಸ್ಯರನ್ನು ಒಳಗೊಂಡಂತೆ ಆರೋಗ್ಯ ವಿಮೆ ಮಾಡಲು ಕ್ರಮವಹಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಮೇಯರ್ ರಾಮಣ್ಣ ಬಡಿಗೇರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.