ಶಿಗ್ಗಾಂವಿ: ಅನಾರೋಗ್ಯದಿಂದ ಬಳಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟನೆಂದು ಅಂತ್ಯಕ್ರಿಯೆಗಾಗಿ ಊರಿಗೆ ಕರೆತರುತ್ತಿದ್ದಾಗ ಆ ವ್ಯಕ್ತಿ ಎದ್ದು ಕುಳಿತು ಅಚ್ಚರಿ ಮೂಡಿಸಿದ ಘಟನೆ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ.
ಬಂಕಾಪುರದ ಮಂಜುನಾಥ ನಗರದ ಬಿಷ್ಠಪ್ಪ ಅಶೋಕ ಗುಡಿಮನಿ (45) ಮತ್ತೆ ಬದುಕಿದ ವ್ಯಕ್ತಿ. ಅನಾರೋಗ್ಯದಿಂದ ಬಳಲುತ್ತಿದ್ದ ಈತನನ್ನು ನಾಲ್ಕೈದು ದಿನಗಳ ಹಿಂದೆ ಧಾರವಾಡದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಭಾನುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಉಸಿರಾಟ ಇಲ್ಲದಿದ್ದಾಗ ವೈದ್ಯರು ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಬಳಿಕ ಆತನ ಪತ್ನಿ ಶೀಲಾ, ಸಂಬಂಧಿಕರ ಜತೆಗೆ ಆಂಬ್ಯುಲೆನ್ಸ್‌ನಲ್ಲಿ ಬಂಕಾಪುರಕ್ಕೆ ಕರೆದುಕೊಂಡು ಬರುತ್ತಿದ್ದರು. ಊರು ಹತ್ತಿರ ಬರುತ್ತಿದ್ದಂತೆ `ಡಾಬಾ ಬಂತು ನೋಡು ಊಟ ಮಾಡುತ್ತೀಯಾ' ಎಂದು ಪತ್ನಿ ಗೋಳಾಡಿ ಕಣ್ಣೀರಿಡುತ್ತಿದ್ದಾಗ, ಮೃತವ್ಯಕ್ತಿ ಉಸಿರು ಬಿಟ್ಟಿದ್ದರಿಂದ ದೇಹ ಅಲ್ಲಾಡಿದೆ. ಆಗ ಗಾಬರಿಯಾಗಿ ವಾಪಾಸ್ ಶಿಗ್ಗಾಂವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ತಪಾಸಣೆ ಮಾಡಿದ ವೈದ್ಯರು ಬದುಕಿರುವುದನ್ನು ದೃಢಪಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಬಿಷ್ಠಪ್ಪ ಮೃತಪಟ್ಟಿದ್ದಾನೆಂಬ ಸುದ್ದಿ ಹರಡುತ್ತಲೇ ಬಂಕಾಪುರದಲ್ಲಿ ಗ್ರಾಮಸ್ಥರು ಬ್ಯಾನರ್‌ಗಳನ್ನು ಹಾಕಿದ್ದಾರೆ. ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿಯೂ ಭಾವಪೂರ್ಣ ಶ್ರದ್ಧಾಂಜಲಿ ಪೋಟೋ ಮತ್ತು ಬ್ಯಾನರ್‌ಗಳು ಹರಿದಾಡಿವೆ. ಓಂ ಶಾಂತಿ ಎಂದು ವಾಟ್ಸ್ ಗ್ರೂಪ್‌ಗಳಲ್ಲಿ ಮೇಸೆಜ್‌ಗಳು ವೈರಲ್ ಆಗಿದ್ದವು. ಅಲ್ಲದೇ ಮೃತನ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು.
ಸ್ಮಶಾನದಲ್ಲಿ ಕಟ್ಟಿಗೆ ಸಂಗ್ರಹಿಸಿದ್ದರು. ಸತ್ತ ವ್ಯಕ್ತಿ ಬದುಕುಳಿದ ಸುದ್ದಿ ಕೇಳಿ ಈಗ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ. ಜತೆಗೆ, ಆಯುಷ್ಯ ಕೊಟ್ಟು ದೇವರು ಕಾಪಾಡಲಿ ಎಂದು ಹರಸುತ್ತಿದ್ದಾರೆ. ಮೂರುನಾಲ್ಕು ದಿನದಿಂದ ನಮ್ಮ ಸಂಬಂಧಿ ಬಿಷ್ಠಪ್ಪ ಅಶೋಕ ಗುಡಿಮನಿ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ವೈದ್ಯರು ಮೃತಪಟ್ಟಿದ್ದಾನೆ ಎಂದು ಹೇಳಿದ ಬಳಿಕ ಅವರ ಪತ್ನಿ ಶೀಲಾ ಮನೆಗೆ ಕರೆದುಕೊಂಡು ಬರುತ್ತಿದ್ದಾಗ ನಮ್ಮೂರ ಡಾಬಾ ಬಳಿ ಉಸಿರಾಡಿದ್ದಾನೆ.
ಆಗ ವಾಪಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದೇವೆ ಬಿಷ್ಠಪ್ಪ ಸಂಬಂಧಿ ನಿಂಗಪ್ಪ ಗೂಡಿಮನಿ ಹೇಳಿದರು.ಬಿಷ್ಠಪ್ಪ ಮತ್ತು ಕುಟುಂಬಸ್ಥರು ಭಾನುವಾರ ಸಂಜೆ 4.20ಕ್ಕೆ ಕಿಮ್ಸ್ ಆಸ್ಪತ್ರೆಗೆ ಬಂದಿದ್ದಾರೆ. ನಮ್ಮ ಆಸ್ಪತ್ರೆಗೆ ಬಂದಾಗ ಬಿಷ್ಠಪ್ಪ ಜೀವಂತವಾಗಿದ್ದು, ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ನಮ್ಮ ಆಸ್ಪತ್ರೆಯ ಮುಖ್ಯವೈದ್ಯ ಡಾ. ಸಚಿನ್ ಹೊಸಕಟ್ಟಿ ಅವರ ನೇತೃತ್ವ ತಂಡ ಕೂಡಲೇ ಚಿಕಿತ್ಸೆ ಮುಂದುವರೆಸಿದೆ. ನಾವು ಖಾಸಗಿ ಆಸ್ಪತ್ರೆಯವರು ನೀಡಿದ ವರದಿ ಪರಿಶೀಲಿಸಿದ್ದೇವೆ. ರೋಗಿ ಸಂಬಂಧಿಗಳು, ತಜ್ಞ ವೈದ್ಯರ ಸಲಹೆಯನ್ನು ಧಿಕ್ಕರಿಸಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿರೋದು ಕಂಡು ಬಂದಿದೆ ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಹೇಳಿದ್ದಾರೆ.