ಪ್ರತಿ ವರ್ಷ ಸಮುದ್ರ ಸೇರುವ ಸರಾಸರಿ 90 ಟಿಎಂಸಿ ನೀರು
ಲೋಕಾರ್ಪಣೆಗೊಂಡ ಸಿಂಗಟಾಲೂರು ಯೋಜನೆಗೆ ಕಾಲುವೆ ನಿರ್ಮಿಸಲಾಗುತ್ತಿಲ್ಲಹಿರೇಹಳ್ಳ ಎತ್ತರ ಹೆಚ್ಚಿಸುತ್ತಿಲ್ಲ ಯಾಕೆ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಪ್ರಸಕ್ತ ವರ್ಷ ತುಂಗಭದ್ರಾ ನದಿಯ ಮೂಲಕ ಬರೋಬ್ಬರಿ 200 ಟಿಎಂಸಿಗೂ ಅಧಿಕ ನೀರು ಆಂಧ್ರದಲ್ಲಿ ಸಮುದ್ರ ಸೇರಿದೆ. ತುಂಗಭದ್ರಾ ಬೋರ್ಡ್ ಲೆಕ್ಕಾಚಾರದ ಪ್ರಕಾರವೇ ಪ್ರತಿ ವರ್ಷ ಸರಾಸರಿ 90 ಟಿಎಂಸಿ ನೀರು ನದಿಯ ಮೂಲಕ ಹರಿದು ಹೋಗಿ ಸಮುದ್ರ ಸೇರುತ್ತದೆ. ಆದರೆ, ಈ ನೀರು ಸದ್ಬಳಕೆ ಮಾಡಿಕೊಳ್ಳುವ ಯೋಜನೆಗಳು ಮಾತ್ರ ಸುಮಾರು ವರ್ಷಗಳಿಂದ ಧೂಳು ಹಿಡಿದಿವೆ.ಬಚಾವತ್ ತೀರ್ಪು ಪ್ರಕಾರ ಮಂಜೂರಾದ ಎ,ಬಿ, ಸ್ಕೀಂ ನೀರನ್ನೇ ಇದುವರೆಗೂ ಬಳಕೆ ಮಾಡಿಕೊಳ್ಳಲು ಆಗಿಲ್ಲ. ಇನ್ನು ಅಂತಿಮ ತೀರ್ಪಿನಲ್ಲಿ ಹಂಚಿಕೆಯಾಗಿರುವ 40 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳುವುದು ದೂರದ ಮಾತು.
ತುಂಗಭದ್ರಾ ಜಲಾಶಯ ಹೂಳು ತುಂಬಿ ತನ್ನ ಸಂಗ್ರಹಣಾ ಸಾಮರ್ಥ್ಯ ಕಳೆದುಕೊಂಡಿದೆ. 133 ಟಿಎಂಸಿ ಇದ್ದ ಸಂಗ್ರಹಣಾ ಸಾಮರ್ಥ್ಯ ಈಗ 105ಕ್ಕೆ ಇಳಿದಿದೆ. ಬರೋಬ್ಬರಿ 28 ಟಿಎಂಸಿ ಹೂಳು ತುಂಬಿದೆ. ಹೀಗಾಗಿ, ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಪ್ರತಿ ವರ್ಷವೂ ರೈತರು ನೀರಿನ ಅಭಾವ ಎದುರಿಸುತ್ತಿದ್ದಾರೆ.ಸಮಾನಾಂತರ ಜಲಾಶಯ:ತುಂಗಭದ್ರಾ ನದಿಯಿಂದ ಹೆಚ್ಚುವರಿಯಾಗಿ ಹರಿದು ಹೋಗುವ ನೀರು ಬಳಕೆ ಮಾಡಿಕೊಳ್ಳುವ ಮತ್ತು ಹೂಳು ತುಂಬಿರುವುದರಿಂದ ಆಗಿರುವ ನಷ್ಟ ಭರ್ತಿ ಮಾಡಿಕೊಳ್ಳಲು ಸಮಾನಾಂತರ ಜಲಾಶಯ ನಿರ್ಮಾಣದ ಅಗತ್ಯವಿದೆ. ಇದು ಮನವರಿಕೆಯಾಗಿಯೇ ಬರೋಬ್ಬರಿ 50 ವರ್ಷವಾಗುತ್ತಾ ಬಂದಿದೆ. ಆದರೂ ನಿರ್ಮಾಣ ಮಾತ್ರ ಇನ್ನೂ ಆಗುತ್ತಿಲ್ಲ.
ತುಂಗಭದ್ರಾ ನದಿಯುದ್ದಕ್ಕೂ 9 ಸಮಾನಾಂತರ ಜಲಾಶಯ ನಿರ್ಮಾಣ ಯೋಜನೆ ರೂಪಿಸಲಾಗಿದ್ದರೂ ಕಳೆದ 45 ವರ್ಷಗಳಿಂದ ಜಾರಿಯಾಗುತ್ತಲೇ ಇಲ್ಲ. ಈಗ ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಮಾಡುವ ಕನಸು ಕಳೆದ ಹತ್ತು ವರ್ಷಗಳಿಂದ ಕೊಳೆಯುತ್ತಲೇ ಇದೆ.ಹಿಂದಿನ ಸರ್ಕಾರದ ಅವಧಿಯಲ್ಲಿ ಡಿಪಿಆರ್ ಮಾಡುವ ಘೋಷಣೆಯಾಗಿ ₹1 ಸಾವಿರ ಕೋಟಿ ಘೋಷಣೆ ಮಾಡಲಾಯಿತು. ಜಾರಿಗೆ ಬರಲೇ ಇಲ್ಲ. ಈಗಿನ ಸರ್ಕಾರ ಬಜೆಟ್ ನಲ್ಲಿ ₹5 ಸಾವಿರ ಕೋಟಿ ಘೋಷಣೆ ಮಾಡಲಾಗಿದೆ. ಆದರೆ, ಕಾರ್ಯಗತ ಮಾತ್ರ ಶೂನ್ಯ.
ಆಂಧ್ರ, ತೆಲಂಗಾಣ ಸರ್ಕಾರಗಳ ಸಮ್ಮತಿಯೂ ಬೇಕಾಗಿರುವುದರಿಂದ ಚರ್ಚೆಯಲ್ಲಿದೆ ಎಂದು ಹೇಳಲಾಗುತ್ತಿದೆಯಾದರೂ ಸರ್ಕಾರದಿಂದ ನವಲಿ ಸಮಾನಾಂತರ ಜಲಾಶಯದ ವಾಸ್ತವ ಸ್ಥಿತಿಗತಿಯ ಕುರಿತು ಮಾಹಿತಿ ಬಹಿರಂಗ ಮಾಡಿಲ್ಲ.ಲೋಕಾರ್ಪಣೆಗೊಂಡರೂ ಆಗದ ನೀರಾವರಿ:ಸಿಂಗಟಾಲೂರು ಏತನೀರಾವರಿ ಯೋಜನೆ 2012ರಲ್ಲಿಯೇ ಲೋಕಾರ್ಪಣೆಗೊಂಡಿದೆ. ಬಲಭಾಗದಲ್ಲಿ ನೀರಾವರಿಯಾಗುತ್ತಿದೆ. ಆದರೆ, ಎಡಭಾಗವಾದ ಕೊಪ್ಪಳ-ಗದಗ ಭಾಗದಲ್ಲಿ ಮಾತ್ರ ಇದುವರೆಗೂ ನೀರಾವರಿಯಾಗುತ್ತಲೇ ಇಲ್ಲ. ಪ್ರಯೋಗಗಳಲ್ಲಿಯೇ ಯೋಜನೆ ಮಣ್ಣುಪಾಲಾಗಿದೆ.
ತುಂತುರು ನೀರಾವರಿ ಯೋಜನೆ, ಹನಿ ನೀರಾವರಿ ಯೋಜನೆ ಎನ್ನುತ್ತಲೇ ಸಾವಿರಾರು ಕೋಟಿ ವ್ಯಯ ಮಾಡಲಾಗಿದೆ. ಈಗ ಮಧ್ಯಪ್ರದೇಶ ಮಾದರಿಯಲ್ಲಿ ಜಾರಿ ಮಾಡುವ ಕಾರ್ಯಾದೇಶವಾಗಿದ್ದರೂ ಜಾರಿಯಾಗುತ್ತಲೇ ಇಲ್ಲ. ಈ ನಡುವೆ ಸಿಂಗಟಾಲೂರು ಏತನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ರೈತರು ನೀರಿಗಾಗಿ ಕಾದು ಕಾದು ಸುಸ್ತಾಗಿ ಈಗ ಸೋಲಾರ್ ಮತ್ತು ವಿಂಡ್ ಪವರ್ ಪ್ಲಾಂಟ್ ಗಳಿಗೆ ತಮ್ಮ ಭೂಮಿಯನ್ನು ಗುತ್ತಿಗೆ ನೀಡಿದ್ದಾರೆ.ಈಗಾಗಲೇ ಅಧಿಕೃತವಾಗಿಯೇ ಬರೋಬ್ಬರಿ 6 ಸಾವಿರ ಹೆಕ್ಟೇರ್ ಪ್ರದೇಶವನ್ನು ಸೋಲಾರ್ ಮತ್ತು ವಿಂಡ್ ಮಿಲ್‌ಗೆ ನೀಡಲಾಗಿದೆ.
ಸಿಂಗಟಾಲೂರು ಏತನೀರಾವರಿ ಯೋಜನೆಯಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಯಾವುದೇ ಅಡೆತಡೆ ಇಲ್ಲದಿದ್ದರೂ ಕಾಲುವೆ ಮಾಡಿ, ರೈತರ ಭೂಮಿಗೆ ನೀರು ಕೊಡದೆ ಕಳೆದ 12 ವರ್ಷಗಳಿಂದ ಸತಾಯಿಸಲಾಗುತ್ತದೆ. ಪ್ರತಿ ವರ್ಷ ಹತ್ತು ಟಿಎಂಸಿ ನೀರು ಸಂಗ್ರಹವಾಗಿದ್ದು, ಬಳಕೆ ಮಾಡಿಕೊಳ್ಳಲು ಆಗದೆ ಪೋಲಾಗುತ್ತದೆ.ಹಿರೇಹಳ್ಳ ಯೋಜನೆ:ತುಂಗಭದ್ರಾ ಜಲಾಶಯಕ್ಕೆ ಹೂಳು ತಡೆಯುವುದಕ್ಕಾಗಿಯೇ ನಿರ್ಮಾಣವಾಗಿರುವ ಹಿರೇಹಳ್ಳ ಜಲಾಶಯವೂ ನಿರೀಕ್ಷಿತ ಸದ್ಬಳಕೆಯಾಗುತ್ತಲೇ ಇಲ್ಲ. ನೀರಾವರಿ ವ್ಯಾಪ್ತಿಯೂ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಹಾಗೆಯೇ ಅದರ ಎತ್ತರ ಹೆಚ್ಚಳ ಮಾಡುವ ಕಾರ್ಯವೂ ಇಂದಿಗೂ ಕಾರ್ಯತವಾಗುತ್ತಿಲ್ಲ.
ಹೀಗೆ ಜಿಲ್ಲೆಯಲ್ಲಿ ಅನೇಕ ನೀರಾವರಿ ಯೋಜನೆಗಳ ನನೆಗುದಿಗೆ ಬಿದ್ದಿದ್ದರಿಂದ ಪ್ರತಿ ವರ್ಷವೂ ನೂರಾರು ಟಿಎಂಸಿ ಸಮುದ್ರ ಸೇರಿ, ಪೋಲಾಗುತ್ತಲೇ ಇದೆ. ಇದರ ಸದ್ಬಳಕೆ ಯಾವಾಗ ಎಂದು ಈ ಭಾಗದ ರೈತರು, ಸಿಎಂ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಪ್ರಶ್ನಿಸಿದ್ದಾರೆ.