ಮಹಾಂತ ಮಠದ ಸ್ವಾಮಿಜಿಗೆ ಗನ್ ತೋರಿಸಿ ನಗ-ನಾಣ್ಯ ದೋಚಿ ಪರಾರಿ

KannadaprabhaNewsNetwork | Updated : Jul 06 2024, 11:21 AM IST

ಸಾರಾಂಶ

ಲಿಂಗಸುಗೂರು ಪಟ್ಟಣದ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಟಪದ ಮಠದಲ್ಲಿ ನಡೆದ ಕಳ್ಳತನ ಘಟನೆ ಕುರಿತು ರಾಯಚೂರು ಜಿಲ್ಲೆಯ ಹೆಚ್ಚುವರಿ ಎಸ್ಪಿಗಳಾದ ಶಿವಕುಮಾರ ದಂಡಿನ್, ಜಿ.ಹರೀಶ, ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ ಭೇಟಿ ನೀಡಿ ತನಿಖೆ ನಡೆಸಿದರು.

  ಲಿಂಗಸುಗೂರು :  ಪಟ್ಟಣದ ಬಸವಸಾಗರ ರಸ್ತೆಯಲ್ಲಿರುವ ಚಿತ್ತರಗಿ ವಿಜಯ ಮಹಾಂತೇಶ್ವರ ಶಾಖಾ ಮಠದ ಸ್ವಾಮಿಜಿಗೆ ಗನ್ ತೋರಿಸಿ ಹೆದರಿಸಿದ ಕಳ್ಳರು, ಲಕ್ಷಾಂತರ ಮೌಲ್ಯದ ನಗ-ನಾಣ್ಯ ದೋಚಿ ಪರಾರಿಯಾದ ಘಟನೆ ಜರುಗಿದೆ. ಒಟ್ಟು 35 ರಿಂದ 40 ಲಕ್ಷ ರು.ಗಳ ನಗ-ನಾಣ್ಯ ದೋಚಿ ಪರಾರಿಯಾಗಿದ್ದು ಪ್ರಕರಣ ಬೆಚ್ಚಿ ಬೀಳಿಸಿದೆ.

ಮದ್ಯರಾತ್ರಿ 1.30ರ ಸುಮಾರಿಗೆ ಭಕ್ತರ ನೆಪದಲಿ ಬಂದು ಇಬ್ಬರು ಕಳ್ಳರು ನಾವು ಕಲಬುರಗಿಯವರು ಎಂದು ಹೇಳಿ ಮಠದಲ್ಲಿ ಮಲಗಿದ್ದ ಪೀಠಾಧಿಪತಿ ಸಿದ್ದಲಿಂಗ ಸ್ವಾಮಿಜಿ ಕೋಣೆಯ ಬಾಗಿಲು ಬಡಿದಿದ್ದಾರೆ. ಆಗ ಎಚ್ಚರಗೊಂಡ ಸ್ವಾಮಿಜಿ ಬಾಗಿಲು ತೆರೆದಾಗ ಒಳನುಗ್ಗಿದ ಕಳ್ಳರು ಸ್ವಾಮಿಜಿಗೆ ಗನ್ ತೋರಿಸಿ ಹೆದರಿಸಿ ಮಠದಲ್ಲಿರುವ ಇರುವ ನಗ-ನಾಣ್ಯ ಕೊಡಲು ಹೇಳಿದಾಗ ಸ್ವಾಮಿಜಿ ಮಠದಲ್ಲಿ ಇದ್ದ ಬೆಳ್ಳಿ, ಬಂಗಾರದ ಆಭರಣಗಳನ್ನು ಕಳ್ಳರ ಜೋಳಿಗೆಗೆ ಹಾಕಿದ್ದಾರೆ.

ಮಠದಲ್ಲಿ ಪೂಜೆಗೆ ಬಳಸುತ್ತಿದ್ದ ಬೆಳ್ಳಿ 2 ಪ್ರಸಾದ ಬಟ್ಟಲು, 3 ಬೆಳ್ಳಿ ತಟ್ಟೆ, 4 ಬೆಳ್ಳಿ ತಂಬಿಗೆ, ಬೆಳ್ಳಿ 5 ಅಡುಗೆ ಸೌಟು, ಬೆಳ್ಳಿ 6 ದೀಪಾರತಿ, ಬೆಳ್ಳಿ 4 ನೈವೇದ್ಯ ಬಟ್ಟಲು, ಬೆಳ್ಳಿ 2 ದೊಡ್ಡ ಗ್ಲಾಸು, ಬೆಳ್ಳಿ 8 ಲೋಟ, ಬೆಳ್ಳಿ 1 ಧಾರಾಪಾತ್ರೆ, ಬೆಳ್ಳಿ 11 ಪಾದೋದಕದ ಬಟ್ಟಲು, ಬೆಳ್ಳಿ 1 ಜನಗುಟ್ಟಿ, ಬೆಳ್ಳಿ 8 ರಿಂದ 10 ಕೆಜಿ 4 ಸಮೇವು ಒಟ್ಟು ₹9 ಲಕ್ಷ ಬೆಲೆಬಾಳುವ ಬೆಳ್ಳಿ ಆಭರಣಗಳು, ಚಿನ್ನದ 1 ಲಿಂಗದಕಾಯಿ, ಚಿನ್ನದ 8 ಸುತ್ತು ಉಂಗುರಗಳು ಒಟ್ಟು ₹5 ಲಕ್ಷ ಚಿನ್ನದ ಆಭರಣಗಳು ಹಾಗೂ ಭಕ್ತರಿಂದ ಸಂಗ್ರಹಿಸಿದ್ದ ₹20 ರಿಂದ ₹25 ಲಕ್ಷ ನಗದು ಹಣ ದೋಚಿ ಪರಾರಿಯಾಗಿದ್ದಾರೆ.

ಘಟನೆ ನಡೆದ ಬೆಳಗಿನ ಜಾವ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಶಿವಕುಮಾರ ದಂಡಿನ್, ಅಪರಾಧ ವಿಭಾಗದ ಎಎಸ್ಪಿ ಜಿ.ಹರೀಶ, ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ, ಸಿಪಿಐ ಪುಂಡಲೀಕ ಪಟಾತರ್ ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

ಕಳ್ಳತನ ಮಾಡುವ ಮೊದಲೆ ಮಠದಲ್ಲಿನ ಸಿಸಿ ಕ್ಯಾಮೆರಾ ಬಂದ್ ಆಗಿರುವುದು ಕಳ್ಳರ ಚಾಲಾಕಿತನಕ್ಕೆ ಸಾಕ್ಷಿಯಾಗಿದ್ದು ಕಳ್ಳತನದ ಘಟನೆ ಅನೇಕ ಸಂಶಯ ಹುಟ್ಟುಹಾಕಿದೆ.

Share this article