ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಪೀಪಲ್ಸ್ ಪಾರ್ಕ್ ಕೇಂದ್ರ ಸಾರ್ವಜನಿಕ ಗ್ರಂಥಾಲಯದಲ್ಲಿ ಅಭಿರುಚಿ ಪ್ರಕಾಶನವು ಶುಕ್ರವಾರ ಆಯೋಜಿಸಿದ್ದ ಎಸ್.ಎಲ್. ಚನ್ನಬಸವಣ್ಣ ಅವರ ಅಲ್ಕೆಬುಲಾನದ ಹೃದಯದಿಂದ ದಕ್ಷಿಣ ಸುಡಾನಿನ ಅನುಭವ ಕಥನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಕೃತಿ ಕುರಿತು ಮಾತನಾಡಿದರು.
ಪೊಲೀಸ್ ಅಧಿಕಾರಿ ಎಸ್.ಎಲ್, ಚನ್ನಬಸವಣ್ಣನವರು ದಕ್ಷಿಣ ಸುಡಾನಿನ ಅನುಭವವನ್ನು ಹೃದಯದಿಂದ ಬರೆದಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಪ್ರವಾಸ ಕಥನಗಳಿವೆ. ಅವುಗಳು ಮನರಂಜನೆಯಿಂದ ಕೂಡಿವೆ. ಆದರೆ, ಚನ್ನಬಸವಣ್ಣನವರ ಆಫ್ರಿಕಾದ ಅನುಭವ ಕಥನ ಭಯಾನಕ ಮತ್ತು ರೋಚಕತೆಯಿಂದ ಕೂಡಿದೆ. ಸಮಸ್ಯೆಯನ್ನು ಆಹ್ವಾನಿಸಿಕೊಂಡು ಕರ್ತವ್ಯ ನಿರ್ವಹಿಸಿ ಆ ಅನುಭವವನ್ನು ದಾಖಲು ಮಾಡಿರುವುದು ಕನ್ನಡದ ಹೆಮ್ಮೆ ಎಂದರು.ಅಧಿಕಾರಕ್ಕೆ ಕೊನೇ ಬರಬಹುದು. ಅಕ್ಷರಕ್ಕೆ ಅಳಿವಿಲ್ಲ. 2500 ವರ್ಷಗಳ ಹಿಂದೆ ವ್ಯಾಸ, ಮಹರ್ಷಿ ವಾಲ್ಮೀಕಿ ಬರೆದ ಮಹಾಕಾವ್ಯಗಳು ನಮ್ಮ ಕಣ್ಣ ಮುಂದಿವೆ. ನೆಲ-ಜಲ, ಬೆಟ್ಟ-ಗುಡ್ಡಗಳಿಗೆ ಹೆಸರಿಟ್ಟಿದ್ದೇವೆ. ಎಲ್ಲದರ ಮೇಲೆ ಪರಿಣಾಮ ಬೀರಿವೆ. ಹಾಗಾಗಿಯೇ ಗದಗಿನ ಕೋಳಿವಾಡದ ಕುಮಾರವ್ಯಾಸನ ಕಾವ್ಯವನ್ನು ಹಾರ್ವರ್ಡ್ ವಿವಿ ಪ್ರಕಟಿಸುತ್ತಿದೆ ಎಂದು ಅವರು ಹೇಳಿದರು.
ಕೃತಿಯ ಲೇಖಕರಾದ ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕ ಎಸ್.ಎಲ್. ಚನ್ನಬಸವಣ್ಣ ಮಾತನಾಡಿ, ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಅಧಿಕಾರಿಯಾಗಿ ವಿಭಿನ್ನವಾದ ಅನುಭವವನ್ನು ನಾನು ಪಡೆದುಕೊಂಡೆ. ಅನುಭವ ಗಂಭೀರವಾಗಿದ್ದರೂ ನೆನಪಿನ ಅಂಚಿಗೆ ಸರಿಯುತ್ತದೆ. ಕೃತಿಯಾದಾಗ ಇತಿಹಾಸದ ಭಾಗವಾಗುತ್ತದೆ. ಈ ಆಶಯದಲ್ಲಿ ಕೃತಿ ರೂಪುಗೊಂಡಿತು ಎಂದು ಹೇಳಿದರು.
ಕೃತಿಯನ್ನು ನಿವೃತ್ತ ಡಿಐಜಿಪಿ ಡಾ.ಡಿ.ಸಿ. ರಾಜಪ್ಪ ಬಿಡುಗಡೆಗೊಳಿಸಿದರು. ಪ್ರಕಾಶಕ ಅಭಿರುಚಿ ಗಣೇಶ್ ಸ್ವಾಗತಿಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ವಂದಿಸಿದರು. ಕ್ರಾಂತಿರಾಜ್ ಒಡೆಯರ್ ನಿರೂಪಿಸಿದರು. ದೇವಾನಂದ ವರಪ್ರಸಾದ್, ಸಿದ್ದು ಬದನವಾಳು ಗೀತೆಗಳನ್ನು ಹಾಡಿದರು.