ಆತ್ಮವಿಶ್ವಾಸವಿದ್ದಾಗ ಪರೀಕ್ಷೆ ಭಯ ಇರುವುದಿಲ್ಲ: ಕೆ.ಪಿ.ಬಾಬು

KannadaprabhaNewsNetwork | Published : Feb 5, 2024 1:47 AM

ಸಾರಾಂಶ

ವಿದ್ಯಾರ್ಥಿಗಳು ಕಷ್ಟಪಟ್ಟು ಓದುವ ಬದಲಾಗಿ ಇಷ್ಟಪಟ್ಟು ಓದಬೇಕು. ಆಗ ಯಾವುದೇ ಪರೀಕ್ಷೆಯನ್ನಾದರೂ ಸುಲಭವಾಗಿ ಎದುರಿಸಬಹುದು. ಎಷ್ಟು ತಾಸು ಓದಿದೆ ಎನ್ನುವುದು ಮುಖ್ಯವಲ್ಲ. ಎಷ್ಟು ವಿಷಯಗಳು ತಲೆಯಲ್ಲಿ ಸಂಗ್ರಹವಾದವು ಎನ್ನುವುದು ಮುಖ್ಯ. ಇಷ್ಟಪಟ್ಟು ಓದಿದ ವಿಷಯಗಳು ನೆನಪಿನಲ್ಲಿ ಉಳಿಯುತ್ತವೆ. ಓದಿದಷ್ಟು ಮನನ ಮಾಡಿಕೊಳ್ಳುವ ಜೊತೆಗೆ ಸಹಪಾಠಿಗಳೊಂದಿಗೂ ಚರ್ಚಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಂಡಾಗ ಪರೀಕ್ಷೆಯ ಭಯ ಇರುವುದಿಲ್ಲ. ಓದುವ ವಿಷಯದಲ್ಲಿ ಭರವಸೆ ಇರಬೇಕೇ ಹೊರತು ಭಯ ಅಲ್ಲ ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ಹೇಳಿದರು.

ನಗರದ ಶ್ರೀ ಲಕ್ಷ್ಮೀಜನಾರ್ದನ ಶಿಕ್ಷಣ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದುವ ಬದಲಾಗಿ ಇಷ್ಟಪಟ್ಟು ಓದಬೇಕು. ಆಗ ಯಾವುದೇ ಪರೀಕ್ಷೆಯನ್ನಾದರೂ ಸುಲಭವಾಗಿ ಎದುರಿಸಬಹುದು. ಎಷ್ಟು ತಾಸು ಓದಿದೆ ಎನ್ನುವುದು ಮುಖ್ಯವಲ್ಲ. ಎಷ್ಟು ವಿಷಯಗಳು ತಲೆಯಲ್ಲಿ ಸಂಗ್ರಹವಾದವು ಎನ್ನುವುದು ಮುಖ್ಯ. ಇಷ್ಟಪಟ್ಟು ಓದಿದ ವಿಷಯಗಳು ನೆನಪಿನಲ್ಲಿ ಉಳಿಯುತ್ತವೆ ಎಂದರು.

ವಿದ್ಯಾರ್ಥಿಗಳು ನದಿ, ನಗರ, ಇತಿಹಾಸ ಇಸವಿ ಸೇರಿದಂತೆ ಕೆಲ ಮಾಹಿತಿಗಳನ್ನು ಕೋಡ್‌ವರ್ಡ್ ಮೂಲಕ ನೆನಪಿನಲ್ಲಿಟ್ಟುಕೊಳ್ಳಬೇಕು. ಅಧ್ಯಯನಕ್ಕೆ ವಿಷಯವಾರು ವೇಳಾಪಟ್ಟಿ ಹಾಕಿಕೊಳ್ಳಬೇಕು. ಓದಿದಷ್ಟು ಮನನ ಮಾಡಿಕೊಳ್ಳುವ ಜೊತೆಗೆ ಸಹಪಾಠಿಗಳೊಂದಿಗೂ ಚರ್ಚಿಸಬೇಕು. ಇಂತಹ ಹಲವು ತಂತ್ರಗಳನ್ನು ಅನುಸರಿಸಿದಾಗ ಕಷ್ಟವಾದ ವಿಷಯಗಳು ಇಷ್ಟವಾಗುತ್ತವೆ ಎಂದು ನುಡಿದರು.

ಒತ್ತಡವನ್ನು ದೂರ ಮಾಡುವ ಸಾಧನಗಳಲ್ಲಿ ದೃಢಸಂಕಲ್ಪವೂ ಒಂದಾಗಿದೆ. ಇದಕ್ಕಾಗಿ ವಿದ್ಯಾರ್ಥಿ ಜೀವನದಲ್ಲಿ ಕೆಲವು ಕ್ರಮಗಳನ್ನು ಅನುಸರಿಸುವುದು ಉತ್ತಮ. ಓದು, ನಿದ್ರೆ, ಆಹಾರ, ವಿಶ್ರಾಂತಿ, ಟಿವಿ, ಮೊಬೈಲ್ ಸೇರಿದಂತೆ ಎಲ್ಲದಕ್ಕೂ ವೇಳಾಪಟ್ಟಿಯನ್ನು ಅನುಸರಿಸಬೇಕು. ಇದು ನಮ್ಮಲ್ಲಿರುವ ಒತ್ತಡವನ್ನು ತಗ್ಗಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಅದು ಕುಗ್ಗದಂತೆ ಎಚ್ಚರ ವಹಿಸಬೇಕು. ಬೇರೆ ವಿದ್ಯಾರ್ಥಿಗಳೊಂದಿಗೆ ಹೋಲಿಸಿಕೊಂಡು ತಮ್ಮ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬಾರದು. ನಕಾರಾತ್ಮಕ ಧೋರಣೆಗಳಿಂದ ದೂರವಿರುವಂತೆ ಹೇಳಿದರು.

ವಿದ್ಯಾರ್ಥಿಗಳು ತಮ್ಮ ಗುರಿ ಮತ್ತು ಸಾಧನೆ ಕುರಿತು ಸದಾ ಎಚ್ಚರದಿಂದ ಇರಬೇಕು. ಕೇವಲ ಪರೀಕ್ಷೆಯಷ್ಟೇ ಅಲ್ಲದೆ ಬದುಕಿನಲ್ಲಿ ಯಾವುದೇ ಸಾಧನೆ ಮಾಡಬೇಕಾದರೂ ಎಚ್ಚರಿಕೆ ಅಗತ್ಯ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ಅಳತೆಗೋಲು ಇದ್ದಂತೆ. ಎಲ್ಲರಲ್ಲೂ ಪರೀಕ್ಷೆ ಬಗ್ಗೆ ಆತಂಕವಿದ್ದೇ ಇರುತ್ತದೆ. ಅದನ್ನು ನಿವಾರಿಸಿಕೊಂಡು ನಿರಾಳವಾಗಿ ಹೇಗೆ ಪರೀಕ್ಷೆ ಬರೆಯಬೇಕು ಎಂಬುದನ್ನು ರೂಢಿಸಿಕೊಳ್ಳುವಂತೆ ತಿಳಿಸಿದರು.

Share this article