ದಕ್ಷಿಣ ಕಾಶಿಯ ಅಭಿವೃದ್ಧಿ ಯಾವಾಗ...?

KannadaprabhaNewsNetwork |  
Published : Feb 08, 2024, 01:31 AM IST
೭ಕೆಎಲ್‌ಆರ್-೫-೧ಕೋಲಾರದ ಹೊರವಲಯದ ಅಂತರಗಂಗೆಯ ಬೆಟ್ಟದ ಕೆಳಗಿರುವ ಸಾರ್ವಜನಿಕರ ಬಳಕೆಗೆ ಬಾರದ ಶೌಚಾಲಯಕ್ಕೆ ಬೀಗ ಹಾಕಿರುವುದು. | Kannada Prabha

ಸಾರಾಂಶ

ದೇವಸ್ಥಾನದ ಬಳಿ ಬಸವಣ್ಣನ ಬಾಯಿಂದ ವರ್ಷದ ೩೬೫ ದಿನವೂ ನೀರು ಬರುವುದು ವಿಶೇಷ, ಭಕ್ತರು ಈ ನೀರಿನಲ್ಲಿ ಸ್ನಾನ ಮಾಡಿದರೆ ಒಳ್ಳೆಯದೆಂದು ನಂಬಿದ್ದಾರೆ, ವರ್ಷಕ್ಕೊಮ್ಮೆ ಬರುವ ಕೊನೆಯ ಕಾರ್ತಿಕ ಸೋಮವಾರದಂದು ರಾಜ್ಯದ್ಯಂತ ಭಕ್ತಾಧಿಗಳು ಬಂದು ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಇಂತಹ ಕ್ಷೇತ್ರವನ್ನು ಜಿಲ್ಲಾಡಳಿತ ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದೆ,

ಗಮನ ಹರಿಸುತ್ತಿಲ್ಲ ಸಂಬಂಧಪಟ್ಟ ಅಧಿಕಾರಿಗಳು । ಪ್ರವಾಸಿ ತಾಣಗಳ ಬಗ್ಗೆ ಜಿಲ್ಲಾಡಳಿತಕ್ಕೆ ಕಾಳಜಿ ಇಲ್ಲವೇ । ಅನುದಾನಗಳ ಕೊರತೆಯೇ ಇಲ್ಲವೇ ಇಚ್ಚಾಶಕ್ತಿಯ ಕೊರತೆಯೇ । ಸಾರ್ವಜನಿಕರ ಪ್ರಶ್ನೆ

ಸ್ಕಂದಕುಮಾರ್ ಬಿ.ಎಸ್

ಕನ್ನಡಪ್ರಭ ವಾರ್ತೆ ಕೋಲಾರ

ರಾಜಧಾನಿಯಿಂದ ಕೇವಲ ೬೫ ಕಿಮೀ ದೂರದಲ್ಲಿರುವ ಕೋಲಾರ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಅವುಗಳಲ್ಲಿ ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಅಂತರಗಂಗೆ ಬೆಟ್ಟವೂ ಒಂದು, ಆದರೆ ಅಂತರಗಂಗೆ ಕ್ಷೇತ್ರವು ಅಭಿವೃದ್ಧಿಯಾಗಿಲ್ಲದಿರುವುದರಿಂದ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಕೋಲಾರ ನಗರದಿಂದ ಕೇವಲ ೪ ಕಿಮೀ ದೂರದಲ್ಲಿರುವ ಅಂತರಗಂಗೆಗೆ ತೆರಳಲು ಪ್ರವಾಸಿಗರಿಗೆ ಬಸ್‌ ಸೌಲಭ್ಯವಿಲ್ಲ, ಈ ಕ್ಷೇತ್ರದಲ್ಲಿ ಶಿವ ನೆಲೆಸಿದ್ದು, ಪ್ರತಿ ಸೋಮವಾರ, ಶುಕ್ರವಾರ ವಿಶೇಷ ಪೂಜಾ ಕೈಕಂರ್ಯಗಳು ನಡೆಯುತ್ತವೆ.

ದೇವಸ್ಥಾನದ ಬಳಿ ಬಸವಣ್ಣನ ಬಾಯಿಂದ ವರ್ಷದ ೩೬೫ ದಿನವೂ ನೀರು ಬರುವುದು ವಿಶೇಷ, ಭಕ್ತರು ಈ ನೀರಿನಲ್ಲಿ ಸ್ನಾನ ಮಾಡಿದರೆ ಒಳ್ಳೆಯದೆಂದು ನಂಬಿದ್ದಾರೆ, ವರ್ಷಕ್ಕೊಮ್ಮೆ ಬರುವ ಕೊನೆಯ ಕಾರ್ತಿಕ ಸೋಮವಾರದಂದು ರಾಜ್ಯದ್ಯಂತ ಭಕ್ತಾಧಿಗಳು ಬಂದು ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಇಂತಹ ಕ್ಷೇತ್ರವನ್ನು ಜಿಲ್ಲಾಡಳಿತ ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದೆ, ಪ್ರವಾಸಿಗರಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ, ವಿಶ್ರಾಂತಿ ಕೊಠಡಿಯಿಲ್ಲ, ಸ್ವಚ್ಛತೆಯಿಲ್ಲ, ಪ್ರವಾಸಿ ತಾಣದ ಕುರಿತು ಇತಿಹಾಸ ತಿಳಿಸುವ ನಾಮಫಲಕವೂ ಇಲ್ಲ,

ಅಂತಗಂಗೆ ಕ್ಷೇತ್ರವು ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು, ವನ್ಯಜೀವಿಗಳ ವಾಸಸ್ಥಳವೂ ಹೌದು. ಹಲವು ವರ್ಷಗಳಿಂದ ಪ್ರವಾಸಿಗರಿಗೆ ಅಂತರಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಅವಕಾಶ ನೀಡಿರುವ ಅರಣ್ಯ ಇಲಾಖೆಯಿಂದ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಂಡರಷ್ಟೆ ಟ್ರಕ್ಕಿಂಗ್‌ಗೆ ಪ್ರವಾಸಿಗರು ತೆರಳಬಹುದು, ಟ್ರೆಕ್ಕಿಂಗ್‌ಗೆ ಆಗಮಿಸುವ ಪ್ರವಾಸಿಗರಿಗೆ ಪ್ಲಾಸ್ಟಿಕ್ ಕವರ್, ನೀರಿನ ಬಾಟಲ್ ಕೊಂಡೊಯ್ಯಲು ಯಾವುದೇ ನಿಂಬಂಧನೆಗಳಿಲ್ಲ, ಇದರಿಂದ ವನ್ಯ ಸಂಪತ್ತಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಮೊದಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ಲಾಸ್ಟಿಕ್ ನಿಷೇಧಕ್ಕೆ ಕಡಿವಾಣ ಹಾಕಬೇಕಿದೆ.

ಪ್ರಾರಂಭದಲ್ಲಿ ಅಧಿಕಾರ ವಹಿಸಿಕೊಂಡ ಜಿಲ್ಲಾಧಿಕಾರಿ ಪ್ರವಾಸಿ ತಾಣಗಳ ಕುರಿತು ಡ್ರೋನ್ ಮೂಲಕ ವಿಡಿಯೋ ಚಿತ್ರೀಕರಿಸಿ, ಇತಿಹಾಸವನ್ನು ತಿಳಿಸುವ ಕೆಲಸ ಮಾಡಿದ್ದರಿಂದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುತ್ತಾರೆಂದು ಜಿಲ್ಲೆಯ ಜನರು ನಂಬಿದ್ದರು, ಆದರೆ ಜಿಲ್ಲಾಧಿಕಾರಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲಾತಣಗಳನ್ನು ಹರಿಬಿಟ್ಟಿದ್ದೇ ದೊಡ್ಡ ಸಾಧನೆ, ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಎಂದು ಸಾರ್ವಜನಿಕರ ಆರೋಪವಾಗಿದೆ.

ಇಲ್ಲಿನ ಟೆಂಡರ್‌ನಿಂದ ಬರುವ ಹಣದಿಂದಲೇ ಅಂತರಗಂಗೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಬಹುದು ಎನ್ನುತ್ತಾರೆ ಪ್ರವಾಸಿಗರು.

ಮೊದಲು ಅಂತಗಂಗೆ ಕ್ಷೇತ್ರದಲ್ಲಿ ಜಿಂಕೆ, ನವಿಲುಗಳ ದೊಡ್ಡ ಪಾರ್ಕ್ ಇತ್ತು, ಆದರೆ, ಅದೆಲ್ಲ ಈಗಿಲ್ಲ, ನಾಮಕಾವಸ್ಥೆಗೆ ಶೌಚಾಲಯವಿದ್ದು, ನೀರಿನ ವ್ಯವಸ್ಥೆಯಿಲ್ಲ, ಅಂತರಗಂಗೆ ಬಳಿಯಿರುವ ಬೋರ್ ವೇಲ್ ಕೆಟ್ಟು ತಿಂಗಳುಗಳೇ ಕಳೆದಿವೆ, ಸಾಕಷ್ಟು ಮೂಲಭೂತ ಸೌಲಭ್ಯಗಳಿಂದ ಅಂತರಗಂಗೆ ಕ್ಷೇತ್ರವು ವಂಚಿತವಾಗಿದೆ. ಆದಷ್ಟು ಬೇಗ ಅಂತರಗಂಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳು ಶುರುವಾಗಿ ಪ್ರವಾಸಿಗರನ್ನು ಆರ್ಕಷಿಸುವಂತಾಗಲಿ ಎಂಬುದೇ ಪ್ರಜಾ ಪ್ರಗತಿಯ ಆಶಯ.

--------

ಬಾಕ್ಸ್..........

ಪ್ಲಾಸ್ಟಿಕ್ ಬಳಕೆ ನಿಷೇಧಿಸಿ

ವನ್ಯ ಜೀವಿಗಳನ್ನು ರಕ್ಷಿಸೋಣ ಎನ್ನುವ ದೇಯೋದ್ದೇಶದಿಂದ ಆಳಿಲು ಸೇವೆ ತಂಡದಿಂದ ಬೆಟ್ಟದಲ್ಲಿ ಎತ್ತೇಚ್ಛವಾಗಿ ಬಿಸಾಡಿದ್ದ ಪ್ಲಾಸ್ಟಿಕ್ ಕವರ್, ಬಟ್ಟೆಗಳನ್ನು ಸ್ವಚ್ಚಗೊಳಿಸಿ, ಅಂತರಗಂಗೆ ಕ್ಷೇತ್ರಕ್ಕೆ ಬರುವ ಪ್ರವಾಸಿಗರಿಗೆ ಪ್ಲಾಸ್ಟಿಕ್ ಬಳಕೆಯಿಂದ ವನ್ಯಜೀವಿಗಳ ಮೇಲೆ ಉಂಟಾಗುವ ದುಷ್ಪರಿಣಾಮದ ಕುರಿತು ಅರಿವು ಮೂಡಿಸಿದ್ದಾರೆ. ಮುಜಾರಾಯಿ ಇಲಾಖೆ ಹಾಗೂ ಜಿಲ್ಲಾಡಳಿತ ಪ್ಲಾಸ್ಟಿಕ್ ನಿಷೇಧಿತ ಪ್ರದೇಶವೆಂದು ನಾಮಫಲಕ ಹಾಕಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು ಎನ್ನುವುದು ಅಳಿಲು ಸೇವೆ ತಂಡದ ಮನವಿ. --------

ಕೋಟ್..........

ಕೋಲಾರ ಪ್ರವಾಸಿ ತಾಣಗಳ ಕುರಿತು ವಿಡಿಯೋ ಚಿತ್ರಿಕರಿಸಿದ ಜಿಲ್ಲಾಧಿಕಾರಿಗಳು ಅದ್ಬುತವಾಗಿ ಪ್ರಚಾರವನ್ನು ನೀಡಿದರು. ಆದರೆ ಪ್ರವಾಸಿ ತಾಣಗಳಿಗೆ ಕಾಯಕಲ್ಪ ಕಲ್ಪಿಸುವಲ್ಲಿ ಹಾಗೂ ಪ್ರವಾಸಿ ತಾಣಗಳು ಪ್ರವಾಸಿಗರನ್ನು ಆಕರ್ಷಿಸುವಂತೆ ಅಭಿವೃದ್ಧಿಪಡಿಸುವಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಮುಜರಾಯಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ವಿಫಲಾಗಿದೆ. ಇನ್ನಾದರೂ ಕೋಲಾರದ ಪ್ರವಾಸಿ ತಾಣಗಳಿಗೆ ಕಾಯಕಲ್ಪ ಕಲ್ಪಿಸಿ ಪ್ರವಾಸಿಗರನ್ನು ಆಕರ್ಷಿಸುವಂತಾಗಲಿ.

-ಕೆ.ನಾರಾಯಣಗೌಡ, ರೈತ ಸಂಘದ ರಾಜ್ಯ ಉಪಾಧ್ಯಕ್ಷ.--------

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ