ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಶಾಶ್ವತ ನೆಲೆ ಯಾವಾಗ?

KannadaprabhaNewsNetwork |  
Published : Sep 27, 2026, 02:15 AM IST
ಕೊಪ್ಪಳ ವಿಶ್ವವಿದ್ಯಾಲಯ | Kannada Prabha

ಸಾರಾಂಶ

ಕೊಪ್ಪಳ ವಿಶ್ವವಿದ್ಯಾಲಯ ಆರಂಭವಾಗಿ ಆರು-ಏಳು ವರ್ಷಗಳು ಕಳೆದರೂ, ಇದುವರೆಗೆ ಸ್ವಂತ ನೆಲೆ ಕಂಡುಕೊಳ್ಳಲು ಸಾಧ್ಯವಾಗದಿರುವುದು ಜಿಲ್ಲೆಯ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ವಿಶ್ವವಿದ್ಯಾಲಯಕ್ಕೆ ಸೂಕ್ತ ಜಾಗ ಗುರುತಿಸಿ, ಭವಿಷ್ಯದ ಅಗತ್ಯಕ್ಕೆ ತಕ್ಕಂತೆ ಶಾಶ್ವತ ಕಟ್ಟಡ ನಿರ್ಮಾಣ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಇನ್ನಷ್ಟು ವೇಗ ತೋರಬೇಕಿದೆ ಎಂಬ ಆಗ್ರಹ ಕೇಳಿಬರುತ್ತಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯ ಆರಂಭವಾಗಿ ಆರು-ಏಳು ವರ್ಷಗಳು ಕಳೆದರೂ, ಇದುವರೆಗೆ ಸ್ವಂತ ನೆಲೆ ಕಂಡುಕೊಳ್ಳಲು ಸಾಧ್ಯವಾಗದಿರುವುದು ಜಿಲ್ಲೆಯ ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ವಿಶ್ವವಿದ್ಯಾಲಯಕ್ಕೆ ಸೂಕ್ತ ಜಾಗ ಗುರುತಿಸಿ, ಭವಿಷ್ಯದ ಅಗತ್ಯಕ್ಕೆ ತಕ್ಕಂತೆ ಶಾಶ್ವತ ಕಟ್ಟಡ ನಿರ್ಮಾಣ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಇನ್ನಷ್ಟು ವೇಗ ತೋರಬೇಕಿದೆ ಎಂಬ ಆಗ್ರಹ ಕೇಳಿಬರುತ್ತಿದೆ.

ಕೊಪ್ಪಳ ಜಿಲ್ಲಾ ಕೇಂದ್ರದ ಸುತ್ತಮುತ್ತಲೇ ವಿಶ್ವವಿದ್ಯಾಲಯ ಸ್ಥಾಪಿಸುವ ಉದ್ದೇಶದಿಂದ ಸರ್ಕಾರ ವಿಶ್ವವಿದ್ಯಾಲಯ ಮಂಜೂರು ಮಾಡಿತ್ತು. ಆದರೆ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಸ್ವಂತ ಕಟ್ಟಡವಿರಲಿ, ಬಾಡಿಗೆ ಕಟ್ಟಡ ಅಥವಾ ಸರ್ಕಾರಿ ಕಟ್ಟಡವೂ ದೊರೆಯದ ಹಿನ್ನೆಲೆಯಲ್ಲಿ ಕುಕನೂರು ತಾಲೂಕಿನ ತಳಕಲ್‌ನಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕಟ್ಟಡದಲ್ಲೇ ಹಲವು ವರ್ಷಗಳಿಂದ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ.

ವಿಶ್ವವಿದ್ಯಾಲಯವನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಿ, ಕೊಪ್ಪಳ ಸುತ್ತಮುತ್ತ ಶಾಶ್ವತ ಕ್ಯಾಂಪಸ್ ನಿರ್ಮಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಈ ಕುರಿತು ಸಚಿವರು ಹಾಗೂ ಸರ್ಕಾರಕ್ಕೆ ಮನವಿಗಳನ್ನೂ ಸಲ್ಲಿಸಲಾಗಿದೆ. ಆದರೆ ಜಾಗ ಗುರುತಿಸುವ ಪ್ರಕ್ರಿಯೆ ನಿಧಾನಗತಿಯಲ್ಲಿರುವುದು ವಿಶ್ವವಿದ್ಯಾಲಯದ ಭವಿಷ್ಯದ ಬಗ್ಗೆ ಪ್ರಶ್ನೆ ಮೂಡಿಸಿದೆ.

ಕೊಪ್ಪಳ ವಿಶ್ವವಿದ್ಯಾಲಯವನ್ನು ಕುಕನೂರು ತಾಲೂಕಿನಲ್ಲಿ ಮುಂದುವರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಚರ್ಚೆಯೂ ಜಿಲ್ಲೆಯಲ್ಲಿ ಇದೆ. ಹಿಂದೆ ಸಚಿವರಾಗಿದ್ದ ಹಾಲಪ್ಪ ಆಚಾರ್ ಹಾಗೂ ಈಗ ಉನ್ನತ ಶಿಕ್ಷಣ ಸಚಿವರಾಗಿರುವ ಬಸವರಾಜ ರಾಯರಡ್ಡಿ ಅವರ ಕ್ಷೇತ್ರದಲ್ಲೇ ವಿಶ್ವವಿದ್ಯಾಲಯ ಉಳಿಯಬೇಕು ಎಂಬ ಅಭಿಪ್ರಾಯವೂ ಇದೆ. ಆದರೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಯಾವುದೇ ಕಾರಣಕ್ಕೂ ವಿಶ್ವವಿದ್ಯಾಲಯವನ್ನು ಕೊಪ್ಪಳದಲ್ಲೇ ಸ್ಥಾಪಿಸುವುದಾಗಿ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಈಗ ಸೂಕ್ತ ಜಾಗ ಗುರುತಿಸಿ ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ.

ಸಚಿವರೇ ಅವಕಾಶ ಬಳಸಿಕೊಳ್ಳಿ: ಪ್ರಸ್ತುತ ಉನ್ನತ ಶಿಕ್ಷಣ ಸಚಿವರೂ ಕೊಪ್ಪಳ ಜಿಲ್ಲೆಯವರೇ ಆಗಿರುವುದು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಮಹತ್ವದ ಅವಕಾಶವಾಗಿದೆ. ಹೊಸದಾಗಿ ಆರಂಭವಾದ ವಿಶ್ವವಿದ್ಯಾಲಯಗಳ ಕುರಿತು ಈ ಹಿಂದೆ ಆರ್ಥಿಕ ಹೊರೆಯ ಹಿನ್ನೆಲೆಯಲ್ಲಿ ಸರ್ಕಾರದಲ್ಲಿ ಚರ್ಚೆಗಳು ನಡೆದಿದ್ದವು. ಆದರೆ ಇದೀಗ ಅವುಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಸರ್ಕಾರದ ಧೋರಣೆ ಬದಲಾಗಿರುವ ಹಿನ್ನೆಲೆಯಲ್ಲಿ ಕೊಪ್ಪಳ ವಿಶ್ವವಿದ್ಯಾಲಯಕ್ಕೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅವಕಾಶವಿದೆ.

ಜಿಲ್ಲೆಯ ಆಡಳಿತ ಪಕ್ಷದ ಜನಪ್ರತಿನಿಧಿಗಳು ಪ್ರತಿಷ್ಠೆ ಬದಿಗಿಟ್ಟು, ಲಭ್ಯವಿರುವ ಸರ್ಕಾರಿ ಭೂಮಿಯನ್ನು ತ್ವರಿತವಾಗಿ ಗುರುತಿಸಿ, ಶಾಶ್ವತ ಕ್ಯಾಂಪಸ್ ನಿರ್ಮಾಣಕ್ಕೆ ಮುಂದಾಗಬೇಕು. ಸಚಿವ ಬಸವರಾಜ ರಾಯರಡ್ಡಿ ಅವರು ಈ ವಿಚಾರಕ್ಕೆ ವಿಶೇಷ ಆದ್ಯತೆ ನೀಡಬೇಕು ಎಂಬುದು ಜಿಲ್ಲೆಯ ಜನರ ಒತ್ತಾಯವಾಗಿದೆ.

ಜಾಗ ಹುಡುಕಾಟ ನಿಧಾನ: ಕೊಪ್ಪಳ ಸುತ್ತಮುತ್ತ ಸರ್ಕಾರಿ ಭೂಮಿ ಗುರುತಿಸುವ ಪ್ರಯತ್ನ ನಡೆದಿದ್ದು, ಬಹದ್ದೂರ್‌ಬಂಡಿ ಸುತ್ತಮುತ್ತಲಿನ ಪ್ರದೇಶ, ಕಿನ್ನಾಳ ಸಮೀಪದ ಜಲಾಶಯ ವ್ಯಾಪ್ತಿಯ ಸರ್ಕಾರಿ ಜಮೀನು ಸೇರಿದಂತೆ ವಿವಿಧ ಪ್ರದೇಶಗಳನ್ನು ಪರಿಶೀಲಿಸಲಾಗಿದೆ. ಹುಲಿಕೆರೆ ಸಮೀಪ ಅರಣ್ಯ ಇಲಾಖೆ ವ್ಯಾಪ್ತಿಯ ಸುಮಾರು 50 ಎಕರೆ ಸಮತಟ್ಟಾದ ಭೂಮಿ ಲಭ್ಯವಿರುವ ಬಗ್ಗೆಯೂ ಚರ್ಚೆ ನಡೆದಿದೆ. ಇವುಗಳ ಪೈಕಿ ವಿಶ್ವವಿದ್ಯಾಲಯಕ್ಕೆ ಸೂಕ್ತವಾದ ಸ್ಥಳವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಕೂಡಲೇ ಅಂತಿಮಗೊಳಿಸಬೇಕಿದೆ.ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಸೂಕ್ತ ಜಾಗ ಗುರುತಿಸುವ ಪ್ರಯತ್ನ ನಡೆದಿದೆ. ಶೀಘ್ರದಲ್ಲೇ ಜಾಗವನ್ನು ಅಂತಿಮಗೊಳಿಸಿ, ಕೊಪ್ಪಳ ಸುತ್ತಮುತ್ತ ವಿಶ್ವವಿದ್ಯಾಲಯ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಹೇಳಿದರು.

ಕೊಪ್ಪಳ ವಿಶ್ವವಿದ್ಯಾಲಯವನ್ನು ಕೊಪ್ಪಳ ಸುತ್ತಮುತ್ತ ಸ್ಥಾಪಿಸುವುದಕ್ಕೆ ನನ್ನ ಸಹಮತವಿದೆ. ಆದರೆ ಸೂಕ್ತ ಜಾಗವನ್ನು ಸ್ಥಳೀಯ ಶಾಸಕರು ಗುರುತಿಸಿ ನೀಡುವ ಅಗತ್ಯವಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಸಂಭ್ರಮವಿರಬೇಕು: ಪ್ರೊ. ಕೃಷ್ಣಮೂರ್ತಿ
ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿ