ವಿಶೇಷ ವರದಿ
ಬೈಲಹೊಂಗಲ ಮತಕ್ಷೇತ್ರ ವ್ಯಾಪ್ತಿಯ ಸವದತ್ತಿ ತಾಲೂಕಿನ ಹಾರುಗೊಪ್ಪ ರಸ್ತೆಯ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಬೈಲಹೊಂಗಲ-ಮುರಗೋಡ ರಸ್ತೆಗೆ ಹೊಂದಿಕೊಂಡಿರುವ ಮರಕುಂಬಿಯಿಂದ ಸುಮಾರು 6 ಕಿಮೀ ಅಂತರವಿರುವ ಈ ರಸ್ತೆಯಲ್ಲಿ ಬೃಹದಾಕಾರದ ತೆಗ್ಗು-ಗುಂಡಿಗಳು ನಿರ್ಮಾಣವಾಗಿದ್ದು, ರಸ್ತೆ ಸ್ಥಿತಿ ನೋಡಿದರೆ ಇದು ಹೊಲಕ್ಕೆ ಹೋಗುವ ದಾರಿಯಂತೆ ಗೋಚರಿಸುತ್ತಿದೆ. ರಸ್ತೆಯಲ್ಲಿ ಗುಂಡಿಗಳಿಯೋ ಅಥವಾ ಗುಂಡಿಯಲ್ಲೇ ರಸ್ತೆಯಿದೆಯೋ ಎಂಬ ಅನುಮಾನ ಪ್ರಯಾಣಿಕರನ್ನು ಕಾಡುತ್ತದೆ. ಗುಂಡಿಗಳಲ್ಲಿ ಮಳೆ ನೀರು ನಿಲ್ಲುವುದರಿಂದ ವಾಹನ ಚಾಲಕರಿಗೆ ಗೊತ್ತಾಗದೆ ವಾಹನಗಳು ಅಪಘಾತಗಳು ಸಂಭವಿಸುತ್ತಿವೆ.
ರಸ್ತೆ ಆವರಿಸಿದ ಗಿಡಗಂಟೆಗಳು:ಮರಕುಂಬಿಯಿಂದ ಚಚಡಿಗೆ ತೆರಳಲು ಮುಖ್ಯರಸ್ತೆ ಇದಾಗಿದ್ದು, ರಾಜ್ಯ ಹೆದ್ದಾರಿಯಿಂದ ತಿರುವು ಪಡೆಯುವ ವೇಳೆ ಅಧಿಕ ಗಿಡಗಂಟೆಗಳು ಆವರಿಸಿವೆ. ಹೀಗಾಗಿ ಮುಂದಿನ ದಾರಿ ಕಾಣದೇ ಚಾಲಕರು ಯಾಮಾರುವಂತಾಗಿದೆ. ಗಿಡಗಳ ಕೊಂಬೆಗಳನ್ನು ತೆಗೆಯಬೇಕೆಂದು ಸ್ಥಳೀಯರು ಅನೇಕ ಬಾರಿ ಅಧಿಕಾರಿಗಳಿಗೆ ಮೌಖಿಕವಾಗಿ ಹೇಳಿದರೂ ಯಾರೂ ಕೇಳುವವರಿಲ್ಲ.
ಅಪಾಯವಿಲ್ಲದೆ ದಾಟುವುದೇ ಸವಾಲು:
ಪಂಚಗ್ಯಾರಂಟಿಗಳನ್ನು ನೀಡಿ ಜನರ ಸಂಕಷ್ಟ ದೂರ ಮಾಡುತ್ತಿದ್ದೇವೆ. ನಮ್ಮದು ಜನಪರ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಜನರಿಗೆ ನಿತ್ಯ ಅವಶ್ಯಕ ಮೂಲಸೌಲಭ್ಯಗಳು ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರ ಆಗ್ರಹವಾಗಿದೆ.ಬೈಲಹೊಂಗಲ ಉಪವಿಭಾಗ ವ್ಯಾಪ್ತಿಗೆ ಒಳಪಡುವ ಹಾರುಗೊಪ್ಪ ರಸ್ತೆಯು ತೀರಾ ಹದಗೆಟ್ಟಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಸುಮಾರು ನಾಲ್ಕುವರೆ ಕಿಮೀ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಮಳೆಗಾಲ ಮುಗಿದ ನಂತರ ರಸ್ತೆಯ ಅಭಿವೃದ್ಧಿಗೆ ಚಾಲನೆ ನೀಡಿ, ಇನ್ನುಳಿದ ಭಾಗವನ್ನು ಹಂತ ಹಂತವಾಗಿ ಅಭಿವೃದ್ಧಿಪರಿಸಲಾಗುವುದು.