ಗೃಹಲಕ್ಷ್ಮೀ ಹಣ ಯಾವಾಗ ಬರುತ್ತೆ?

KannadaprabhaNewsNetwork | Published : Aug 2, 2024 12:48 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು ಸರ್ಕಾರ ನೀಡುವ ಗೃಹಲಕ್ಷ್ಮಿ ಯೋಜನೆಯ ₹ 2 ಸಾವಿರ ಗ್ಯಾರಂಟಿ ಹಣ ಕಳೆದ ಎರಡು ತಿಂಗಳಿನಿಂದ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ. ಜೂನ್ ಮತ್ತು ಜುಲೈ ತಿಂಗಳ ₹2000 ಹಣ ಆಗಸ್ಟ್‌ ಬಂದರೂ ಬಾರದ್ದರಿಂದ ಲಕ್ಷಾಂತರ ಕುಟುಂಬಗಳ ಯಜಮಾನಿಯರ ಮುಖದಲ್ಲಿ ಬೇಸರ ಮೂಡಿಸಿದೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು ಸರ್ಕಾರ ನೀಡುವ ಗೃಹಲಕ್ಷ್ಮಿ ಯೋಜನೆಯ ₹ 2 ಸಾವಿರ ಗ್ಯಾರಂಟಿ ಹಣ ಕಳೆದ ಎರಡು ತಿಂಗಳಿನಿಂದ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ. ಜೂನ್ ಮತ್ತು ಜುಲೈ ತಿಂಗಳ ₹2000 ಹಣ ಆಗಸ್ಟ್‌ ಬಂದರೂ ಬಾರದ್ದರಿಂದ ಲಕ್ಷಾಂತರ ಕುಟುಂಬಗಳ ಯಜಮಾನಿಯರ ಮುಖದಲ್ಲಿ ಬೇಸರ ಮೂಡಿಸಿದೆ.

ಲೋಕ ಚುನಾವಣೆ ವೇಳೆ ಬಂದ ಹಣ:

ಮೇ 7ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಗೃಹಿಣಿಯರ ಮನವೊಲಿಸಿ ಮತಗಳ ಲಾಭ ಮಾಡಿಕೊಳ್ಳಲೆಂದು ಹಿಂದೆ ಬಾಕಿ ಉಳಿದಿದ್ದ ಎಲ್ಲ ತಿಂಗಳು ಹಣವನ್ನು ಏಪ್ರಿಲ್ ಹಾಗೂ ಮೇನಲ್ಲಿಯೇ ಮೂರು ಬಾರಿ ಟಕಾ ಟಕ್‌ ಎಂದು ಖಾತೆಗಳಿಗೆ ಸರ್ಕಾರ ಜಮೆ ಮಾಡಿತ್ತು. ಆದರೆ ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಸಿಗದ ಹಿನ್ನೆಲೆಯಲ್ಲಿ ಮತ್ತು ಚುನಾವಣೆ ಮುಗಿದ ಮೇಲೆ ಈಗ ಮಹಿಳೆಯರ ಖಾತೆಗಳಿಗೆ ಹಣ ಜಮೆಯಾಗಿಲ್ಲ.

ಮಾರ್ಚ್ ತಿಂಗಳ ಬಾಕಿಯನ್ನು ಏಪ್ರಿಲ್ 16ರಂದು, ಏಪ್ರಿಲ್‌ ತಿಂಗಳ ಹಣವನ್ನು ಏಪ್ರಿಲ್‌ 23ಕ್ಕೆ, ಮೇ ತಿಂಗಳದ್ದು ಮೇ 4ರಂದೇ ಫಲಾನುಭವಿಗಳ ಖಾತೆಗೆ ಹಾಕಲಾಗಿತ್ತು. ಚುನಾವಣೆಗೂ ಮೊದಲು ಬಾಕಿ ಉಳಿಸಿಕೊಳ್ಳಬಾರದು ಎಂದು ಮೇ ತಿಂಗಳ ಆರಂಭದಲ್ಲೇ ಜಮೆ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಲೋಕಸಭೆಯಲ್ಲಿ ಮಹಿಳಾ ಮತದಾರರ ಮೇಲೆ ಕಣ್ಣಿಟ್ಟು ಈ ತಂತ್ರವನ್ನೂ ಬಳಸಿತ್ತು. ಆದರೆ, ಅದಕ್ಕೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಆದರೆ, ಈಗ ಎರಡು ತಿಂಗಳು ಗತಿಸಿದರೂ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತಿಲ್ಲ.

ಜಿಲ್ಲೆಯ ಮಹಿಳೆಯರಿಗೆ ಬಂದ ಹಣವೆಷ್ಟು?:

ಜಿಲ್ಲೆಯಲ್ಲಿ 5,20,906 ಪಡಿತರ ಚೀಟಿಗಳಲ್ಲಿ ಮಹಿಳಾ ಫಲಾನುಭವಿಗಳು ಯಜಮಾನಿಯರಿದ್ದಾರೆ. ಅದರಲ್ಲಿ 4,84,632 ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದುವರೆಗೆ 4,76,971 ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ 905,30,54,000 ಹಣವನ್ನು ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶೇ.93.04 ಪ್ರಗತಿ ಸಾಧಿಸಿದ್ದು, ಕೇವಲ 6.96ರಷ್ಟು ಮಾತ್ರ ಬಾಕಿ ಉಳಿದಿವೆ. ಇನ್ನೂ, ಅರ್ಜಿ ಹಾಕಿರುವ 4,84,632 ಫಲಾನುಭವಿಗಳಿಗೆ ಹಣ ಜಮೆ ಆಗಿದೆ. ಕೇವಲ 36,274 ಫಲಾನುಭವಿಗಳಿಗೆ ಮಾತ್ರ ತಾಂತ್ರಿಕ ತೊಂದರೆಗಳಿಂದ ಹಣ ಜಮೆ ಆಗಿಲ್ಲ. ಇದರಲ್ಲಿ, ತಿದ್ದುಪಡಿಯಾದ ಪಡಿತರ ಚೀಟಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣೆ ಆಗದಿರುವುದು. ಐಟಿ ಹಾಗೂ ಜಿಎಸ್‌ಟಿದಾರರು. ಮಹಿಳಾ ಸರ್ಕಾರಿ ನೌಕರರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

ಇತ್ತೀಚೆಗಷ್ಟೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಶೀಘ್ರದಲ್ಲಿ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ, ಜುಲೈ ಮುಗಿದು ಆಗಸ್ಟ್‌ ಬಂದರೂ ಇನ್ನೂ ಹಣ ಮಹಿಳೆಯರ ಖಾತೆ ಸೇರಿಲ್ಲ.

---------------------------------------------------------------

ಕೋಟ್‌....

ಗೃಹಲಕ್ಷ್ಮಿ ಯೋಜನೆಯ ಹಣ ಮಕ್ಕಳ ನೋಟ್‌ಬುಕ್, ಬಟ್ಟೆ, ದಿನಬಳಕೆ ವಸ್ತುಗಳ ಖರೀದಿ ಸೇರಿದಂತೆ ಅವಶ್ಯಕತೆಗಳಿಗೆ ಉಪಯೋಗವಾಗುತ್ತಿತ್ತು. ನಮ್ಮಂತಹ ಅನೇಕ ಬಡ ಕುಟುಂಬಗಳಿಗೆ ಆಧಾರವಾಗಿದೆ. ಆಯಾ ತಿಂಗಳ ಹಣವನ್ನು ಆಯಾ ತಿಂಗಳು ಮುಗಿಯುವುದರೊಳಗೆ ಹಾಕಿದರೆ ಬಹಳಷ್ಟು ಅನುಕೂಲ ಆಗಲಿದೆ. ಜೂನ್, ಜುಲೈ ತಿಂಗಳ ಹಣ ಯಾವಾಗ ಬರುತ್ತದೋ ಎಂದು ಕಾಯುತ್ತಿದ್ದೇವೆ.

- ಅಶ್ವಿನಿ, ಫಲಾನುಭವಿ

-----------------------

ಆಗಸ್ಟ್ 2023ರಿಂದ ಮೇ 2024ರ ವರೆಗೆ ಜಿಲ್ಲೆಯಲ್ಲಿ ಈಗಾಗಲೇ 10 ಕಂತುಗಳಲ್ಲಿ ಹಣ ಪಾವತಿಸಲಾಗಿದೆ. ಸರ್ಕಾರದಲ್ಲಿ ಯಾವುದೇ ಹಣದ ಕೊರತೆ ಇಲ್ಲ. ಇಲಾಖೆ ಸಚಿವರು ಅತ್ಯಂತ ಕಾಳಜಿಯಿಂದ ಮಹಿಳೆಯರಿಗೆ ಸಹಾಯಧನ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ನೇರವಾಗಿ ಅರ್ಹರ ಖಾತೆಗಳಿಗೆ ಹಣ ಸಂದಾಯವಾಗಲಿದೆ. ಜೂನ್ ತಿಂಗಳ ಫಲಾನುಭವಿಗಳ ಲಿಸ್ಟ್ ಈಗಾಗಲೇ ಸಂದಾಯವಾಗಿದ್ದು, ಈ ವಾರದಲ್ಲಿ ಡಿಬಿಟಿ ಮೂಲಕ ಖಾತೆಗೆ ಹಣ ಜಮೆ ಆಗಲಿದೆ.

- ಕೆ.ಕೆ.ಚವ್ಹಾಣ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

Share this article