ಕುಮಟಾ ತಾಲೂಕು ಆಡಳಿತ ಸೌಧದ ಲಿಫ್ಟ್ ದುರಸ್ತಿ ಯಾವಾಗ?

KannadaprabhaNewsNetwork | Published : Jan 13, 2025 12:48 AM

ಸಾರಾಂಶ

ಲಿಫ್ಟ್ ಸರಿಪಡಿಸದೇ ಕಾಲಹರಣ ಮಾಡುತ್ತಿರುವುದು ಯಾಕೆ ಎಂಬುದು ಸಾರ್ವಜನಿಕರ ಮನಸ್ಸಿನಲ್ಲಿ ಮೂಡುತ್ತಿರುವ ಪ್ರಶ್ನೆಯಾಗಿದೆ.

ಕುಮಟಾ: ಪಟ್ಟಣದ ಮೂರೂರು ರಸ್ತೆಯಲ್ಲಿರುವ ತಾಲೂಕು ಆಡಳಿತ ಸೌಧದ ಲಿಫ್ಟ್ ವ್ಯವಸ್ಥೆ ನಾಲ್ಕೈದು ತಿಂಗಳ ಹಿಂದೆಯೇ ಹಾಳಾಗಿದ್ದರೂ ಈವರೆಗೆ ದುರಸ್ತಿ ಮಾಡಿಸದೇ ವೃದ್ಧರು, ಅಸಹಾಯಕರು, ಅಂಗವಿಕಲರ ಸಂಕಟ ನಿರ್ಲಕ್ಷಿಸಲಾಗಿದೆ.

ತಾಲೂಕು ಆಡಳಿತ ಸೌಧ ಉದ್ಘಾಟನೆಗೊಂಡ ಬಳಿಕ ಗಿಬ್ ವೃತ್ತದ ಬಳಿ ಇದ್ದ ತಹಸೀಲ್ದಾರ್ ಕಚೇರಿ, ಕಂದಾಯ ವಿಭಾಗಗಳು, ಉಪವಿಭಾಗಾಧಿಕಾರಿ ಕಚೇರಿ ಸಹಿತ ಒಂದೊಂದೇ ಕಾರ್ಯಾಲಯಗಳು ಸ್ಥಳಾಂತರಗೊಂಡಿವೆ. ಇತ್ತೀಚೆಗೆ ಸಬ್ ರಿಜಿಸ್ಟ್ರಾರ್ ಕಚೇರಿಯೂ ತಾಲೂಕು ಸೌಧಕ್ಕೆ ಬಂದಿದೆ.

ಉದ್ಘಾಟನೆ ಕಾಲಕ್ಕೆ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಲಿಫ್ಟ್ ಕಾರ್ಯಭಾರದಿಂದಲೋ, ಗುಣಮಟ್ಟದ ಕಾರಣದಿಂದಲೋ ಬಹಳ ಬೇಗನೆ ಕೆಟ್ಟು ಕೂತಿದೆ. ಲಿಫ್ಟ್‌ ಒಂದೆಡೆ ಓರೆಯಾಗಿರುವುದರಿಂದ ಅಪಾಯಕಾರಿಯೂ ಆಗಿರುವಂತೆ ಕಂಡುಬರುತ್ತಿದೆ. ಆದರೂ ಲಿಫ್ಟ್ ಸರಿಪಡಿಸದೇ ಕಾಲಹರಣ ಮಾಡುತ್ತಿರುವುದು ಯಾಕೆ ಎಂಬುದು ಸಾರ್ವಜನಿಕರ ಮನಸ್ಸಿನಲ್ಲಿ ಮೂಡುತ್ತಿರುವ ಪ್ರಶ್ನೆಯಾಗಿದೆ. ತಾಲೂಕು ಆಡಳಿತ ಸೌಧದಲ್ಲಿ ಹೆಚ್ಚಿನ ಪ್ರಮಾಣದ ಸಾರ್ವಜನಿಕರಿಗೆ ಮೊದಲ ಅಂತಸ್ತು ಹಾಗೂ ಎರಡನೇ ಅಂತಸ್ತಿನಲ್ಲೇ ಕೆಲಸ ಇರುತ್ತದೆ. ಏಕೆಂದರೆ ನೆಲಹಂತದಲ್ಲಿ ಕೇವಲ ಉಪನೋಂದಣಾಧಿಕಾರಿ ಕಚೇರಿ ಮತ್ತು ಆಧಾರ ಕೇಂದ್ರ ಮಾತ್ರ ಇದೆ. ಹೀಗಾಗಿ ಮೇಲಿನ ಅಂತಸ್ತುಗಳಿಗೆ ಹೆಚ್ಚಿನ ಸಂಖ್ಯೆಯ ಜನ ಓಡಾಡಲೇಬೇಕು. ವೃದ್ಧರು, ಅಸಹಾಯಕರು, ಅಂಗವಿಕಲರು, ಸೊಂಟ- ಮೊಣಕಾಲು ನೋವು ಇರುವವರು ಮೊದಲ ಮಹಡಿ ಹತ್ತುವುದರಲ್ಲೇ ಸುಸ್ತಾಗುತ್ತಾರೆ. ಸ್ವಲ್ಪ ಹೆಚ್ಚಿನ ಪ್ರಮಾಣದ ಅಂಗವಿಕಲತೆ ಉಳ್ಳವವರನ್ನು ಹೊತ್ತೊಯ್ಯಬೇಕಾಗುತ್ತದೆ.

ಎಲ್ಲ ಮೆಟ್ಟಿಲುಗಳನ್ನು ಹತ್ತಿಳಿದರೆ ಒಂದು ಸಲಕ್ಕೆ ೬೦ಕ್ಕಿಂತಲೂ ಹೆಚ್ಚು ಮೆಟ್ಟಿಲುಗಳನ್ನು ಏರಿಳಿಯುವುದು ಎಲ್ಲರಿಗೂ ಅನಿವಾರ್ಯ ಪರಿಸ್ಥಿತಿ ಇಲ್ಲಿದೆ. ಸರ್ಕಾರಿ ಉದ್ಯೋಗಿಗಳಲ್ಲೂ ಕೆಲವರು ಅಂಗವಿಕಲರಿದ್ದು, ಅವರಿಗೂ ಸುಖವಿಲ್ಲದಂತಾಗಿದೆ. ಹೀಗಾಗಿ ಲಿಫ್ಟ್ ವ್ಯವಸ್ಥೆ ಕೆಟ್ಟಿರುವುದನ್ನು ಸರಿಪಡಿಸದೇ ಇರುವ ಬಗ್ಗೆ ಅಸಮಾಧಾನದ ಮಾತುಗಳು ದಿನಿವಿಡೀ ಇಲ್ಲಿ ಸಾರ್ವಜನಿಕರಿಂದ ಕೇಳಬಹುದಾಗಿದೆ.

ಒಂದು ಲಿಫ್ಟ್ ದುರಸ್ತಿ ಮಾಡದಿದ್ದ ಮೇಲೆ ಮೂರ್ನಾಲ್ಕು ಮಹಡಿಯ ಕಟ್ಟಡಕ್ಕೆ ಕಚೇರಿಗಳನ್ನು ಸ್ಥಳಾಂತರಿಸಿದ್ದಾದರೂ ಯಾಕೆ? ಬಹಳಷ್ಟು ಜನರಿಗೆ ಲಿಫ್ಟ್‌ ಇಲ್ಲದಿದ್ದರೆ ಮೆಟ್ಟಿಲೇರುವುದು ಕಷ್ಟ ಎಂದು ಗೊತ್ತಿದ್ದರೂ ಸಮಸ್ಯೆ ಬಗೆಹರಿಸದೇ ಸತಾಯಿಸುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು. ಲಿಫ್ಟ್‌ ಸರಿ ಮಾಡುವುದಕ್ಕೂ ಜನರು ಪ್ರತಿಭಟನೆ ಮಾಡಲಿ ಎಂದು ಅಧಿಕಾರಿಗಳು ಕಾಯುತ್ತಿದ್ದಾರೆಯೇ ಎಂದು ಜನರು ಪ್ರಶ್ನಿಸುವಂತಾಗಿದೆ.

ದುರಸ್ತಿಗೆ ಕ್ರಮ: ಇಲ್ಲಿನ ಲಿಫ್ಟ್‌ ಸಮಸ್ಯೆಯಾಗಿದ್ದರಿಂದ ದುರಸ್ತಿಗೆ ಹೆಚ್ಚಿನ ಹಣಕಾಸು ಹೊಂದಿಸುವ ಅನಿವಾರ್ಯತೆ ಇತ್ತು. ಈಗಾಗಲೇ ಹಣಕಾಸಿನ ಸಮಸ್ಯೆ ಬಗೆಹರಿದಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ಸತೀಶ ಗೌಡ ತಿಳಿಸಿದರು.

ಮೊದಲ ಆದ್ಯತೆ: ಹಳೆಯ ತಾಲೂಕಾಡಳಿತದ ಕಟ್ಟಡಗಳು ಜನರಿಗೆ ಬಂದು ಹೋಗುವುದಕ್ಕೆ ಅನುಕೂಲಕರವಾಗಿತ್ತು. ಎಲ್ಲಿಯೂ ಮಹಡಿ ಹತ್ತುವ ಅನಿವಾರ್ಯತೆ ಇರಲಿಲ್ಲ. ಈಗ ಹೊಸ ತಾಲೂಕು ಆಡಳಿತ ಸೌಧ ಕಟ್ಟಿದ್ದೇನೋ ಸರಿ, ಆದರೆ ಲಿಫ್ಟ್‌ ಕೆಟ್ಟರೆ ಕೂಡಲೇ ಸರಿಪಡಿಸುವುದು ಮೊದಲ ಆದ್ಯತೆಯಾಗಬೇಕು ಎಂದು ಹಂದಿಗೋಣದ ರಾಮಚಂದ್ರ ಭಟ್ ತಿಳಿಸಿದರು.

Share this article