ಮುಂಡರಗಿಯಲ್ಲಿ ನಗರೋತ್ಥಾನ ಕಾಮಗಾರಿ ಮುಗಿಯುವುದು ಯಾವಾಗ?

KannadaprabhaNewsNetwork | Published : Jun 14, 2024 1:00 AM

ಸಾರಾಂಶ

ಮುಂಡರಗಿ ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ನಗರೋತ್ಥಾನ ಕಾಮಗಾರಿಗಳು ಪ್ರಾರಂಭವಾಗಿ ವರ್ಷಗಳೇ ಆಗಿದ್ದು, ಈ ವರೆಗೂ ಮುಗಿದಿಲ್ಲ. ಇದರಿಂದ ಅಲ್ಲಿನ ನಿವಾಸಿಗಳಿಗೆ ಹೆಚ್ಚಿನ ತೊಂದರೆಯಾಗಿದೆ. ಕೂಡಲೇ ಕಾಮಗಾರಿ ಮುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶರಣು ಸೊಲಗಿ

ಮುಂಡರಗಿ: ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ನಗರೋತ್ಥಾನ ಕಾಮಗಾರಿಗಳು ಪ್ರಾರಂಭವಾಗಿ ವರ್ಷಗಳೇ ಆಗಿದ್ದು, ಈ ವರೆಗೂ ಮುಗಿದಿಲ್ಲ. ಇದರಿಂದ ಅಲ್ಲಿನ ನಿವಾಸಿಗಳಿಗೆ ಹೆಚ್ಚಿನ ತೊಂದರೆಯಾಗಿದ್ದು, ನಗರೋತ್ಥಾನ ಕಾಮಗಾರಿ ಮುಗಿಯುವುದಾದರೂ ಯಾವಾಗ ಎನ್ನುವುದು ಆಯಾ ಪ್ರದೇಶದ ನಿವಾಸಿಗಳ ಪ್ರಶ್ನೆಯಾಗಿದೆ.7ನೇ ವಾರ್ಡಿನ ಹುಡ್ಕೋ ಕಾಲನಿ, 8ನೇ ವಾರ್ಡಿನ ಅನ್ನದಾನೀಶ್ವರ ನಗರ, 23ನೇ ವಾರ್ಡಿ‌ನ ಹೆಸರೂರು ರಸ್ತೆ ಆಶ್ರಯ ಕಾಲನಿಯಲ್ಲಿ ಕಳೆದ 3-4 ತಿಂಗಳಿನಿಂದ ಚೆನ್ನಾಗಿಯೇ ಇದ್ದ ರಸ್ತೆಯನ್ನು ಅಗೆದು, ಅಲ್ಲಿ ದೊಡ್ಡ ದೊಡ್ಡ‌ ಕಡಿ ಹಾಕಿ‌ದ್ದಾರೆ, ಆದರೆ ಇದುವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ. ಇದರಿಂದ ನಿತ್ಯ‌‌ ಆ‌ ರಸ್ತೆಯ ಮೇಲೆ ಓಡಾಡುವ ಸಾರ್ವಜನಿಕರು ಆಯಾ ವಾರ್ಡಿನ ಪುರಸಭೆ ಸದಸ್ಯರಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ‌ ಹಾಕುತ್ತಿದ್ದಾರೆ.

ಇನ್ನು 18ನೇ ವಾರ್ಡಿನ ವಿದ್ಯಾನಗರದಲ್ಲಿ ಒಂದು ವರ್ಷದ ಹಿಂದೆ ಉತ್ತಮವಾಗಿದ್ದ ರಸ್ತೆಯನ್ನು ಸಂಪೂರ್ಣವಾಗಿ ಒಡೆದು ಹಾಕಿ ರಸ್ತೆಯ ಎರಡೂ ಪಕ್ಕದಲ್ಲಿನ ಚರಂಡಿಗಳನ್ನು ಒಡೆದು ಒಂದು ಪಕ್ಕದ ಚರಂಡಿಯನ್ನು ಪುನಃ ನಿರ್ಮಾಣ ಮಾಡಿದ್ದಾರೆ. ಮತ್ತೊಂದು ಪಕ್ಕದಲ್ಲಿ‌ ಚರಂಡಿ ನಿರ್ಮಾಣಕ್ಕೆ ತಾಂತ್ರಿಕ ಸಮಸ್ಯೆ ಇದೆ ಎಂದು ಹೇಳಲಾಗುತ್ತಿದೆ. ಎರಡೂ ಪಕ್ಕದಲ್ಲಿ ಚರಂಡಿ ಮಾಡದೇ ರಸ್ತೆ ಕಾಮಗಾರಿ ಮಾಡುವುದು ಸರಿಯಲ್ಲ ಎನ್ನುವ ಕಾರಣದಿಂದಾಗಿ ಕಾಮಗಾರಿ ಸ್ಥಗಿತವಾಗಿದೆ. ಈ ರಸ್ತೆಯಲ್ಲಿ ಶಾಲೆ ಇದ್ದು, ನಿತ್ಯ ಸಾವಿರಾರು ಮಕ್ಕಳು ಓಡಾಡುತ್ತಾರೆ. ಮಳೆಯಾದಾಗ ಅವರ ಪಾಡು ಹೇಳತೀರದಾಗಿರುತ್ತದೆ.

ಪುರಸಭೆಯಲ್ಲಿ ಕಳೆದ ಒಂದು ವರ್ಷದಿಂದ ಆಡಳಿತ ಮಂಡಳಿ ಇಲ್ಲ. ಹೀಗಾಗಿ ಏನಾದರೂ ಸಮಸ್ಯೆಗಳಿದ್ದರೆ ನಾವು ಯಾರನ್ನು ಕೇಳಬೇಕು ಎನ್ನುವುದು ಪಟ್ಟಣದ ಜನತೆಯ ಪ್ರಶ್ನೆಯಾಗಿದೆ. ಇದೀಗ ಉಪವಿಭಾಗಾಧಿಕಾರಿ ಇಲ್ಲಿನ ಪುರಸಭೆ ಆಡಳಿತಾಧಿಕಾರಿಯಾಗಿದ್ದಾರೆ. ಅವರು ಇಲ್ಲಿಗೆ ಬಂದು ಇಲ್ಲಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಗರೋತ್ಥಾನ ಕಾಮಗಾರಿ ವಿಳಂಬಕ್ಕೆ ಕಾರಣವೇನೆಂದು ವಿಚಾರಿಸಿ, ಶೀಘ್ರವೇ ಕಾಮಗಾರಿ ಪ್ರಾರಂಭಿಸಲು ಸೂಚಿಸಬೇಕು. ಯಾವುದೇ ಕಾಮಗಾರಿಗಾದರೂ ಕೆಲಸ ಪ್ರಾರಂಭಿಸಿ ಮುಗಿಸಲು ಕಾಲಾವಕಾಶ ಇರುತ್ತದೆ. ಆದ್ದರಿಂದ ಜಿಲ್ಲಾಧಿಕಾರಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾಮಗಾರಿ ಪ್ರಾರಂಭಿಸಲು ಮುಂದಾಗಬೇಕು ಎನ್ನುವುದು ಇಲ್ಲಿನ ಸಾರ್ವಜನಿಕರ ಒತ್ತಾಯವಾಗಿದೆ. ನಮ್ಮ 8ನೇ ವಾರ್ಡಿನ ಅನ್ನದಾನೀಶ್ವರ ನಗರದಲ್ಲಿ ರಸ್ತೆ ಕಾಮಗಾರಿ ಮಾಡುವುದಕ್ಕಾಗಿ ದೊಡ್ಡ ದೊಡ್ಡ ಕಡಿಗಳನ್ನು ಹಾಕಿದ್ದು, ಕಾಮಗಾರಿ ಸಾಕಷ್ಟು ವಿಳಂಬವಾಗಿದೆ. ವಾರ್ಡಿನ ಸಾರ್ವಜನಿಕರು ನಿತ್ಯವೂ ಮನೆಗೆ ಬಂದು ಜಗಳ ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಈ ಕೂಡಲೇ ಕಾಮಗಾರಿ ಪ್ರಾರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಮುಂಡರಗಿ ಪುರಸಭೆ ಸದಸ್ಯೆ ಶಾಂತವ್ವ ಪರಶುರಾಮ ಕರಡಿಕೊಳ್ಳ ಹೇಳುತ್ತಾರೆ.

ಮುಂಡರಗಿ ಪಟ್ಟಣದಲ್ಲಿ ನಗರೋತ್ಥಾನ ಕಾಮಗಾರಿ ವಿಳಂಬಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಯೋಜನೆ ನಿರ್ದೇಶಕರು ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ. ಕಾಮಗಾರಿ ಟೆಂಡರ್ ಪಡೆದ ಗುತ್ತಿಗೆದಾರಿಗೆ 2-3 ನೋಟಿಸ್ ಸಹ ನೀಡಲಾಗಿದೆ. ಗುತ್ತಿಗೆದಾರರು ಬುಧವಾರ ಬಂದಿದ್ದರು. ಕಾಮಗಾರಿ ನಡೆದ ಎಲ್ಲ ವಾರ್ಡ್‌ಗಳಿಗೆ‌ ಭೇಟಿ ನೀಡಿದ್ದು, ಕಾಮಗಾರಿ ಪ್ರಾರಂಭಿಸುವುದಾಗಿ ಹೇಳಿದ್ದಾರೆ ಎಂದು ಮುಂಡರಗಿ ಪುರಸಭೆ ಮುಖ್ಯಾಧಿಕಾರಿ ಶಂಕರ್ ಹುಲ್ಲಮ್ಮನವರ ಹೇಳುತ್ತಾರೆ.

Share this article