ಅನುಮಾನಗಳಿಗೆ ಉತ್ತರ ಸಿಗದಿದ್ದಾಗ ಗವಿಮಠಕ್ಕೆ ಬನ್ನಿ: ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ

KannadaprabhaNewsNetwork | Updated : Jan 18 2025, 12:56 PM IST

ಸಾರಾಂಶ

ನೋವು, ಅನುಮಾನಗಳಿಗೆ ಉತ್ತರ ಸಿಗದಿದ್ದಾಗ ಗಮ್ಯ, ವಿಜ್ಞಾನದ ಸಿದ್ದಿ ಸ್ಥಳ ಗವಿಸಿದ್ಧೇಶ್ವರ ಗವಿಮಠಕ್ಕೆ ಬನ್ನಿ.

 ಕೊಪ್ಪಳ : ನೋವು, ಅನುಮಾನಗಳಿಗೆ ಉತ್ತರ ಸಿಗದಿದ್ದಾಗ ಗಮ್ಯ, ವಿಜ್ಞಾನದ ಸಿದ್ದಿ ಸ್ಥಳ ಗವಿಸಿದ್ಧೇಶ್ವರ ಗವಿಮಠಕ್ಕೆ ಬನ್ನಿ. ಜೀವನದ ಅನುಮಾನಗಳಿಗೆ ಸಮಾರೋಪ ಹೇಳಿ ಎಂದು ಬೆಂಗಳೂರಿನ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.

ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಜಾತ್ರಾ ಮಹೋತ್ಸವ ಸಮಾರಂಭದ ಸಮಾರೋಪ ನುಡಿಗಳನ್ನಾಡಿದ ಅವರು, ಶುದ್ಧ ಮನದಿಂದ ಇಲ್ಲಿ ಎಲ್ಲ ಶರಣರು ಸೇರಿದ್ದಾರೆ. ಸಂತರೆ ಇಲ್ಲಿ ಮೇಳೈಸಿದ್ದಾರೆ. ಇಂಥ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆಯನ್ನು ಗವಿಶ್ರೀಗಳು ಮಾಡಿದ್ದಾರೆ. ಕವಿರಾಜ ಮಾರ್ಗದಲ್ಲಿ ಕೊಪ್ಪಳ ಮಹತ್ವವನ್ನು ಸಾರಿ ಹೇಳಲಾಗಿದೆ. ದೂರದಿಂದ ಸಂತರೊಬ್ಬರು ಬಂದು ಕೊಪ್ಪಳದಲ್ಲಿ ನೆಲೆಯೂರಿದರು.‌ ಅಂದಿನಿಂದ ಶುರುವಾಯಿತು ಇಲ್ಲಿಯ ಬೆಳವಣಿಗೆ. ಗವಿಯಲ್ಲಿ ನೆಲೆಯೂರಿದ ಪರಿಣಾಮ ಅದು ಗವಿಮಠವಾಯಿತು.

ಗಮ್ಯ ಗವಿಯ ಮೊದಲ ಅಕ್ಷರದ ಗ ಅರ್ಥ. ಹಾಗೆ ವಿ ಎನ್ನುವುದು ವಿಜ್ಞಾನ ಎನ್ನುವ ಅರ್ಥ.‌ ಗಮ್ಯದೊಂದಿಗೆ ವಿಜ್ಷಾನ ಸಿದ್ದಿ ಆಗಿರುವುದೇ ಗವಿಮಠ ಆಗಿದೆ ಎಂದರು. ಇಲ್ಲಿ ಸಿದ್ದಿ ಪುರುಷರು ಸಮಾಜದ ಸಿದ್ದಿಗೆ ಶ್ರಮಿಸುತ್ತಿದ್ದಾರೆ. ಅವರೇ ಗವಿಸಿದ್ಧೇಶ್ವರರು ಎಂದರು. ಇಲ್ಲಿ ಗವಿ, ಅಲ್ಲಿ ಸವಿ(ದಾಸೋಹ). ಶರೀರವನ್ನು ಉಳಿಸಿಕೊಳ್ಳಲು ಮಿತ ಅಹಾರ ಸೇವನೆ ಇರಬೇಕು. ಮಿರ್ಚಿ ದಾಸೋಹವೂ ಇಲ್ಲಿದೆ.

ಇದು ಮೂರು ದಿನಗಳಿಗೆ ಮುಗಿದು ಹೋಯಿತಾ ಅನಿಸುವಂತಾಯಿತು. ಹದಿನಾಲ್ಕು ಲಕ್ಷ ಜಿಲೇಬಿ, ಐದು ಲಕ್ಷ ಮಿರ್ಚಿ, ಅಬ್ಬಾ ಕೇಳಿದರೆ ನಮಗೆ ಅಚ್ಚರಿಯಾಗುತ್ತದೆ ಎಂದರು.

ತಿಂಗಳಿಗೆ ಬರುವ ವೇತನಕ್ಕಿಂತ ಅಧಿಕ ಏನಾದರೂ ತಂದರೆ ನಿಮ್ಮ ಮನೆಯವರು ತಂದರೆ ನೀವು ಅದನ್ನು ವಾಪಸ್ಸು ಕಳುಹಿಸಬೇಕಾಗಿರುವುದು ಶರಣೆಯರ ಕೆಲಸ. ಆಯ್ದಕ್ಕಿ ಶರಣೆ ತನ್ನ ಪತಿ ಹೆಚ್ಚಿಗೆ ತಂದಿದ್ದನ್ನು ವಿರೋಧಿಸಿ ಬಸವಣ್ಣನ ಭಂಡಾರಕ್ಕೆ ಕೊಟ್ಟು ಬಾ ಅದನ್ನು ಎಂದು ಹೇಳಿದರು. ಅಂತ ಮನಸ್ಥಿತಿ ಇಂದು ಬರಬೇಕಾಗಿದೆ. ತಿನ್ನುವ ಮೊದಲು ಯಾರಿಗಾದರೂ ಕೊಟ್ಟು ತಿನ್ನಬೇಕು. ‌ನ್ಯಾಯಯುತವಾಗಿ ಇಲ್ಲದ ಆದಾಯ ನಾಯಿಯ‌ ಮೊಲೆ ಹಾಲಿನಂತೆ ಎಂದರು.

ಉತ್ತಮವಾದ ಸದ್ವಿಚಾರಗಳನ್ನು ಈ ನಾಡು ಪ್ರಪಂಚಕ್ಕೆ ಹಬ್ಬಿಸಿತ್ತು. ಕಾಲಘಟ್ಟದಲ್ಲಿ ಆದ ಬದಲಾವಣೆಯಿಂದ ಸಂಸ್ಕೃತ, ಸಂಸ್ಕೃತಿ ಹೋಯಿತು. ಮನೆಗಳಲ್ಲಿ ತಾಯಂದಿರು ಸಂಜೆ ದೀಪ ಹಚ್ಚಿ ದೇವರಿಗೆ ನಮಸ್ಕರಿಸಿದ ತಾಯಿ ಈಗ ಕಾಣುತ್ತಿಲ್ಲ. ಧಾರವಾಹಿಯ ಮೊರೆ ಹೋಗುತ್ತಿದ್ದಾರೆ, ರೀಲ್ಸ್ ಮಾಡುತ್ತಿದ್ದಾರೆ. ಗವಿಶ್ರೀಗಳು ಹೇಳಿದ ಲವ್ ಇಸ್ ಫಸ್ಟ್ ಸೈಟ್ ಅಂತಾ ಹೇಳಿದರು. ಒಟ್ಟಿಗೆ ಕುಳಿತು ಊಟ ಮಾಡುವ ಹಾಗಿಲ್ಲ, ಒಟ್ಟಿಗೆ ಕುಳಿತು ಚರ್ಚೆ ಮಾಡುವ ಹಾಗಿಲ್ಲ. ಅಂತಹ ಸ್ಥಿತಿಗೆ ಬಂದಿದ್ದೇವೆ. ಮಕ್ಕಳಿಗೆ ಸಂಸ್ಕೃತಿ ಸಿಗುತ್ತಿಲ್ಲ ಎಂದರು.

Share this article