ಕನ್ನಡಪ್ರಭ ವಾರ್ತೆ ಮಡಿಕೇರಿ
ನೀವು ಮಾತನಾಡುತ್ತಿರುವುದಕ್ಕೆ ನಾನು ಮಾತನಾಡಿದ್ದೇನೆ ಎಂದು ಹನಿಟ್ರ್ಯಾಪ್ ವಿಷಯದಲ್ಲಿ ಸಚಿವ ರಾಜಣ್ಣ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.ಭಾಗಮಂಡಲ ಕಾವೇರಿ ಜೂನಿಯರ್ ಕಾಲೇಜು ಹೆಲಿಪ್ಯಾಡ್‌ನಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದರು.
ನೀವು ಹಲೋ ಎಂದರೆ ಅವರು ಹಲೋ ಹಲೋ ಎನ್ನುತ್ತಾರೆ. ನೀವು ವಿಶ್ ಮಾಡಿದ್ರೆ ನಾನು ವಿಶ್ ಮಾಡುತ್ತೇನೆ. ನೀವು ವಿಶ್ ಮಾಡದಿದ್ದರೆ ನಾನು ವಿಶ್ ಮಾಡುತ್ತೇನಾ? ನೀವು ಮಾತನಾಡಿದಿದ್ದರೆ ನಾನು ಮಾತನಾಡುತ್ತಿದ್ದೆನಾ ಎಂದು ರಾಜಣ್ಣ ಅವರಿಗೆ ಪ್ರಶ್ನೆ ಮಾಡಿದ ಡಿ.ಕೆ. ಶಿವಕುಮಾರ್, ಹನಿಟ್ರ್ಯಾಪ್ ಸುಮ್ಮ ಸುಮ್ಮನೆ ಏನಾದರೂ ನಿಮ್ಮ ಹತ್ತಿರ ಬರುತ್ತದಾ ಎಂದು ಪ್ರಶ್ನೆ ಮುಂದಿಟ್ಟರು.ಡಿ.ಕೆ. ಶಿವಕುಮಾರ್ ಅವರೇ ಹನಿಟ್ರ್ಯಾಪ್ ಮಾಡಿಸಿದ್ದಾರೆ ಎಂದು ಶಾಸಕ ಮುನಿರತ್ನ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಬಿಜೆಪಿಯವರು ವಿಧಾನಸೌಧದಲ್ಲಿ ಏನೆಲ್ಲಾ ಮಾಡಿದ್ದಾರೆ. ಅದು ಕಂಪ್ಲೇಂಟ್ ಕಾಪಿಯಲ್ಲಿ ಇದೆಯಲ್ಲ. ಅಶೋಕ್‌ಗೆ ಏನೋ ಆಯ್ತು, ಯಡಿಯೂರಪ್ಪ ಅವರಿಗೆ ಅದೇನೋ ಆಯ್ತು ಅಂತ ಹೇಳ್ತಿದ್ರಲ್ಲ, ಪಾಪ ಅವರ ನೋವನ್ನು ಅವರು ಹೇಳಿಕೊಂಡಿದ್ದಾರೆ ಎಂದು ಹೇಳಿದರು.
ಶನಿವಾರದ ಕರ್ನಾಟಕ ಬಂದ್ ಬಗ್ಗೆ ಮಾತನಾಡಿ, ಒಳ್ಳೆಯ ಕೆಲಸವನ್ನು ನಾವು ರಕ್ಷಣೆ ಮಾಡುತ್ತೇವೆ. ರಾಜ್ಯದ ಹಿತವನ್ನು ಕಾಪಾಡುವ ಕೆಲಸ ಮಾಡುತ್ತೇವೆ. ದಯವಿಟ್ಟು ಎಲ್ಲರೂ ಶಾಂತಿ ಕಾಪಾಡಬೇಕು. ಕಾನೂನಿನಲ್ಲಿ ಎಷ್ಟಕ್ಕೆ ಅವಕಾಶವಿದೆ ಅಷ್ಟನ್ನು ಮಾತ್ರ ಉಪಯೋಗಿಸಿಕೊಳ್ಳಬಹುದು. ಯಾವ ಗಲಾಟೆ ಅಥವಾ ಬಂದ್ ಮಾಡುವ ಅಗತ್ಯವಿಲ್ಲ. ದಯವಿಟ್ಟು ಮನವಿ ಮಾಡಿಕೊಳ್ಳುತ್ತೇನೆ, ಬಂದ್ ಅವಶ್ಯಕತೆ ಇಲ್ಲ ಎಂದರು.ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಶನಿವಾರ ತಮಿಳುನಾಡಿನಲ್ಲಿ ಸ್ಟಾಲಿನ್ ಕರೆದಿರುವ ಸಭೆಗೆ ಹೋಗುತ್ತಿರುವುದಾಗಿ ಶಿವಕುಮಾರ್ ಇದೇ ವೇಳೆ ಮಾಹಿತಿ ನೀಡಿದರು. ತೆಲಂಗಾಣ ಸಿಎಂ ರೇವಂತ ರೆಡ್ಡಿ, ಕಾಂಗ್ರೆಸ್ ಮುಖಂಡರು ಕೂಡ ಈ ಸಭೆಯಲ್ಲಿ ಭಾಗವಹಿಸುತ್ತಾರೆ. ಅಲ್ಲಿ ನಮ್ಮ ರಾಜ್ಯ ಮತ್ತು ದಕ್ಷಿಣ ಭಾರತದ ರಾಜ್ಯಗಳ ಬಗೆಗಿನ ನ್ಯಾಯಕ್ಕೆ ಪ್ರತಿಪಾದನೆ ಮಾಡುತ್ತೇನೆ ಎಂದು ತಿಳಿಸಿದರು.
---------------ಕೊಡಗು ವಿವಿ ಬಗ್ಗೆ ಮಕ್ಕಳ ಅಭಿಪ್ರಾಯ ಸಂಗ್ರಹಕೊಡಗು ವಿವಿ ಮುಚ್ಚುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೊಡಗು ಹೆಸರು ಉಳಿಸಿಕೊಡುವಂತೆ ಇಬ್ಬರು ಶಾಸಕರು ಕೇಳಿದ್ದಾರೆ. ಯಾವ ವಿವಿಯನ್ನೂ ನಾವು ಮುಚ್ಚಕ್ಕಾಗಲ್ಲ, ವಿಲೀನ ಮಾಡಬಹುದಷ್ಟೇ. ಇದರಲ್ಲಿ ಪ್ರತಿಷ್ಠೆ ಪ್ರಶ್ನೆ ಏನೂ ಇಲ್ಲ. ಮೊದಲು ಮಕ್ಕಳ ಅಭಿಪ್ರಾಯ ಕೇಳಿ. ಸಿಬ್ಬಂದಿ ವರ್ಗ ಈಗಾಗಲೇ ಒಂದು ವರದಿ ಕೊಟ್ಟಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡಿದ್ದೇವೆ. ಈಗ ಮಕ್ಕಳ ಬಳಿ ಒಂದು ಅಭಿಯಾನ ಮಾಡಲು ಹೇಳಿದ್ದೇನೆ. ನನಗೆ ಅವರ ಭವಿಷ್ಯ ಮುಖ್ಯ, ನಮ್ಮ ಭವಿಷ್ಯ ಅಲ್ಲ ಎಂದು ಹೇಳಿದರು.
ಹೊಸ ವಿವಿ ಮಾಡಿದರೆ ಅದಕ್ಕೆ ರೆಕಾಗ್ನಿಷನ್ ಇರುವುದಿಲ್ಲ. ಬೆಂಗಳೂರು, ಮೈಸೂರು ವಿವಿಗೆ ಅದರದ್ದೇ ಆದ ಗೌರವವಿದೆ. ಬಿಜೆಪಿಯವರು ವಿವಿ ಮಾಡಿದ್ದಾರೆ ಅಂತ ಹೆಸರು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾ ಇದ್ದಾರೆ. ಆದರೆ ನಮಗೆ ಮಕ್ಕಳ ಭವಿಷ್ಯ ಮುಖ್ಯ. ಕೊಡಗು ವಿವಿಯಲ್ಲಿ 25 ಕಾಲೇಜು ಮಾತ್ರವಿದೆ. ಇದಕ್ಕೆ ಕೇವಲ ಎರಡು ಕೋಟಿ ಹಣ ಇಟ್ಟಿದ್ದಾರೆ. ಅದು ಬಿಡುಗಡೆಯಾಗಿಲ್ಲ. ಯೂನಿವರ್ಸಿಟಿ ಅಂದರೆ ಬೇರೆ ಲೆಕ್ಕಾಚಾರಗಳಿರುತ್ತವೆ. ಬಹಳಷ್ಟು ಮಕ್ಕಳು ಮಂಗಳೂರು ವಿವಿಯೇ ಒಳ್ಳೆದಿದೆ ಎನ್ನುತ್ತಿದ್ದಾರೆ. ಸಿಬ್ಬಂದಿ ಯಾರೂ ಕೂಡ ಕೊಡಗು ವಿವಿಯಲ್ಲಿ ಕೆಲಸ ಮಾಡಲು ಬಯಸುತ್ತಿಲ್ಲ. ಅವರಿಗೆಲ್ಲ ಸೀನಿಯಾರಿಟಿ ಹೋಗುತ್ತದೆ ಎಂದರು.