ಉಡುಪಿ : ಶ್ರೀ ಕೃಷ್ಣನ ಹುಟ್ಟು ಹಬ್ಬ - ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮದಲ್ಲಿ ಮುಳುಗಿದ್ದ ಕೃಷ್ಣಮಠ, ಬಡಗುಮಾಳಿಗೆ, ರಾಜಾಂಗಣ, ರಥಬೀದಿ ಆವರದಲ್ಲಿ ಎಲ್ಲಿ ನೋಡಿದರೂ ಮುದ್ದು ಕೃಷ್ಣರೇ ಕಾಣಿಸುತಿದ್ದರು.
ಕಾಳಿಂಗ ಮರ್ದನ ಕೃಷ್ಣ, ಕಂಸ ಮರ್ಧನ ಕೃಷ್ಣ, ಬೆಣ್ಣೆಮೊಸರು ಕಳ್ಳ ಕೃಷ್ಣ, ಗೀತಾಕೃಷ್ಣ, ಕೊಳಲು ಕೃಷ್ಣ ಹೀಗೆ ಹತ್ತಾರು ಬಗೆಯ ಕೃಷ್ಣಂದಿರುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಕೆಲವೇ ತಿಂಗಳು ವಯಸ್ಸಿನ ಕಂದಮ್ಮಗಳಿಗೂ ಅವರ ತಾಯಂದಿರು ಕೃಷ್ಣನ ವೇಷ ಹಾಕಿಸಿ ಕರೆತಂದು ಸಂಭ್ರಮಿಸುತಿದ್ದರು.ಕೆಲವು ಪುಟಾಣಿ ಕೃಷ್ಣರು ಗಾಬರಿಯಿಂದ ಅಳುತಿದ್ದರೇ, ಇನ್ನು ಕೆಲವು ಕೃಷ್ಣಂದಿರು ತಾಯಿಯ ಭುಜದ ಮೇಲೆ ತೂಕಡಿಸುತಿದ್ದರು, ಕೆಲವು ಮಕ್ಕಳಂತೂ ತಾವೇ ಸ್ವತಃ ಕೃಷ್ಣ ಎಂಬಂತೆ ತುಂಟಾಟದಲ್ಲಿ ತೊಡಗಿದ್ದವು.
ಈ ಪುಟಾಣಿಗಳ ತಂದೆತಾಯಂದಿರಿಗಂತೂ ಈ ಕೃಷ್ಣ ಜನ್ಮಾಷ್ಟಮಿ ಜೀವನದ ಅತ್ಯಂತ ಸ್ಮರಣೀಯ ದಿನವಾಗಿತ್ತು, ತಮ್ಮ ಮಕ್ಕಳಿಗೆ ಅತ್ಯಂತ ಶೃದ್ಧೆಯಿಂದ ಕೃಷ್ಣನ ವೇಷಭೂಷಣ, ಕಿರೀಟ, ಆಭರಣ, ಗೆಜ್ಜೆಗಳನ್ನು ತೊಡಿಸಿ, ಕೃಷ್ಣನ ಮಠದಲ್ಲಿ ಶ್ರೀಗಳ ಸಮ್ಮುಖದಲ್ಲಿ ಪ್ರದರ್ಶನಕ್ಕೆ ಕರೆತಂದಿದ್ದರು, ಫೋಟೋಗಳನ್ನು ಕ್ಲಿಕ್ಕಿಸುತಿದ್ದರು.ಒಟ್ಟಿನಲ್ಲಿ ಕೃಷ್ಣಮಠ ಶುಕ್ರವಾರ ಕೃಷ್ಣಮಯವಾಗಿತ್ತು, ಪುಟಾಣಿ ಕೃಷ್ಣಂದಿರ ಮಠವಾಗಿ ಕಾಣಿಸುತಿತ್ತು.