ಕೆ.ಎಂ. ಮಂಜುನಾಥ್
ಬಳ್ಳಾರಿ: ಎರಡು ಬಾರಿ ಮುಂದೂಡಿ ಮತ್ತೊಂದು ಮುಹೂರ್ತ ನಿಗದಿಗೊಂಡಿರುವ ಮೇಯರ್ ಆಯ್ಕೆ ಚುನಾವಣೆ ಜ. 10ರಂದು ಬೆಳಗ್ಗೆ 11 ಗಂಟೆಗೆ ಪಾಲಿಕೆ ಸಭಾಂಗಣದಲ್ಲಿ ಜರುಗಲಿದೆ. ಕೈ ಪಕ್ಷದ ಸದಸ್ಯರಿಗೆ ವಿಪ್ ಜಾರಿಗೊಳಿಸಿದ್ದು, ಬುಧವಾರ ನಡೆಯಲಿರುವ ಚುನಾವಣೆ ಸುಖಾಂತ್ಯ ಕಾಣಲಿದೆಯೇ ಅಥವಾ ಮತ್ತೊಂದು ಗೊಂದಲದ ಮಗ್ಗಲು ಅನಾವರಣಗೊಳ್ಳಲಿದೆಯೇ ಎಂಬ ಕೌತುಕ ಮೂಡಿದೆ.ಮೇಯರ್ ಸ್ಥಾನಕ್ಕೆ ಡಿ. ತ್ರಿವೇಣಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಕಳೆದ ವರ್ಷ ನವೆಂಬರ್ 28ಕ್ಕೆ ಚುನಾವಣೆ ನಡೆಯಬೇಕಿತ್ತು. ತಮ್ಮದೇ ಬೆಂಬಲಿಗನನ್ನು ಮೇಯರ್ ಪಟ್ಟಕ್ಕೆ ಕೂಡಿಸಬೇಕು ಎಂದು ಜಿಲ್ಲಾ ಸಚಿವ ಬಿ. ನಾಗೇಂದ್ರ ಹಾಗೂ ನಗರ ಶಾಸಕ ನಾರಾ ಭರತ್ ರೆಡ್ಡಿ ನಡುವಿನ ಮುಸುಕಿನ ಗುದ್ದಾಟದಿಂದಾಗಿ ಚುನಾವಣೆ ಮುಂದೂಡಿತು.
ಡಿ. 19ರಂದು ನಡೆಯಬೇಕಿದ್ದ ಚುನಾವಣೆ ಮತ್ತೆ ಮುಂದಕ್ಕಾಯಿತು. ಗಣಿ ಜಿಲ್ಲೆಯ ಕೈ ನಾಯಕರ ನಡುವಿನ ರಾಜಕೀಯ ಕಾದಾಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇತಿಶ್ರೀ ಹಾಡಿದ್ದು, ಬುಧವಾರ ಮೇಯರ್ ಆಯ್ಕೆ ಯಾವುದೇ ಗೊಂದಲ-ಗೋಜಲು ಇಲ್ಲದೆ ಚುನಾವಣೆ ನಡೆಯುವ ಸಾಧ್ಯತೆ ಗೋಚರಿಸುತ್ತಿಲ್ಲ.ಸಚಿವ- ಶಾಸಕ ಸಮ್ಮುಖದಲ್ಲಿ ಸಭೆ:
ಮೇಯರ್ ಆಯ್ಕೆ ಚುನಾವಣೆ ಹಿನ್ನೆಲೆಯಲ್ಲಿ ನಗರ ಹೊರವಲಯದ ಸಂಗನಕಲ್ಲು ಬಳಿಯ ಫಾರ್ಮ್ ಹೌಸ್‌ನಲ್ಲಿ ಮಂಗಳವಾರ ಸಭೆ ಜರುಗಿತು. ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ನಗರ ಶಾಸಕ ನಾರಾ ಭರತ್ ರೆಡ್ಡಿ, ಪಕ್ಷದ ಜಿಲ್ಲಾಧ್ಯಕ್ಷ ಮಹ್ಮದ್ ರಫೀಕ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು. ಮೇಯರ್ ಆಯ್ಕೆ ವೇಳೆ ಪಕ್ಷದ ಎಲ್ಲ ಸದಸ್ಯರು ಒಗ್ಗಟ್ಟು ಕಾಯ್ದುಕೊಳ್ಳಬೇಕು. ಪಕ್ಷಕ್ಕೆ ಮುಜುಗರವಾಗದಂತೆ ನೋಡಿಕೊಳ್ಳಬೇಕು. ಪ್ರತಿಪಕ್ಷವು ರಾಜಕೀಯ ಲಾಭ ಮಾಡಿಕೊಳ್ಳದಂತೆ ಎಲ್ಲರೂ ನಿಗಾ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಎಲ್ಲದಕ್ಕೂ ಗೋಣು ಹಾಕಿರುವ ಸದಸ್ಯರ ಮನಸ್ಸಿನಲ್ಲಿರುವುದೇನು ಎಂಬ ಗುಮಾನಿಯಿದೆ.ಚುನಾವಣೆ ವೀಕ್ಷಕರಾದ ಆರ್.ವಿ. ವೆಂಕಟೇಶ್ ಅವರು ನಗರಕ್ಕೆ ಆಗಮಿಸಿದ್ದು, ಸದಸ್ಯರ ಜತೆ ಚರ್ಚಿಸಲಿದ್ದಾರೆ. ಬೆಳಗ್ಗೆ ಹೊತ್ತಿಗೆ ಮತ್ತೊಬ್ಬ ವೀಕ್ಷಕ ಹಾಗೂ ಪಕ್ಷದ ಹಿರಿಯ ಮುಖಂಡ ಎಚ್.ಎಂ.ರೇವಣ್ಣ ಅವರು ನಗರಕ್ಕೆ ಆಗಮಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಕೈ ಸದಸ್ಯರಿಗೆ ಅಲ್ಲಂ ಭವನದಲ್ಲಿ ವಾಸ್ತವ್ಯ ವ್ಯವಸ್ಥೆ
ಮೇಯರ್ ಚುನಾವಣೆ ಮುನ್ನ ಯಾವುದೇ ರಾಜಕೀಯ ಬೆಳವಣಿಗೆ ಜರುಗಬಾರದು ಎಂಬ ಮುಂಜಾಗ್ರತೆ ಕ್ರಮ ವಹಿಸಿರುವ ಕೈ ಪಕ್ಷದ ನಾಯಕರು, ನಗರ ಹೊರವಲಯದ ಹೋಟೆಲ್ ಅಲ್ಲಂ ಭವನದಲ್ಲಿ ಕಾಂಗ್ರೆಸ್ ಸದಸ್ಯರಿಗೆ ವಾಸ್ತವ್ಯ ವ್ಯವಸ್ಥೆ ಮಾಡಿದ್ದಾರೆ. ಭವನದಲ್ಲಿ ಒಟ್ಟು 26 ಕೋಣೆಗಳನ್ನು ಬಾಡಿಗೆ ಪಡೆದಿದ್ದು, ಎಲ್ಲ ಸದಸ್ಯರು ಇಲ್ಲಿಯೇ ಇರಬೇಕು. ಚುನಾವಣೆ ಸಮಯದಲ್ಲಿ ನೇರವಾಗಿ ಪಾಲಿಕೆಯ ಕಡೆಗೆ ಬರಬೇಕು ಎಂದು ಪಕ್ಷದ ನಾಯಕರು ಸೂಚಿಸಿದ್ದಾರೆ ಎನ್ನಲಾಗಿದೆ.ಪಾಲಿಕೆಯ 39 ಚುನಾಯಿತ ಸದಸ್ಯ ಬಲದಲ್ಲಿ ಕಾಂಗ್ರೆಸ್ 21, ಬಿಜೆಪಿ 13 ಹಾಗೂ ಪಕ್ಷೇತರ 5 ಜನ ಸದಸ್ಯರಿದ್ದಾರೆ. ವಿಪ್ ಜಾರಿ: ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಶನಿವಾರವೇ ಪಕ್ಷದ ಪಾಲಿಕೆ ಸದಸ್ಯರಿಗೆ ವಿಪ್ ಜಾರಿಗೊಳಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಹ್ಮದ್ ರಫೀಕ್ ತಿಳಿಸಿದರು.