ವಿಧಾನಸಭೆ ಚುನಾವಣೆ ವೇಳೆ ಯಾರ ಜತೆ ಒಳಒಪ್ಪಂದ ಮಾಡಿಕೊಂಡಿದ್ದಿರಿ? ಯಶವಂತರಾವ್ ಜಾಧವ್‌ ಒತ್ತಾಯ

KannadaprabhaNewsNetwork | Updated : Dec 27 2024, 10:27 AM IST

ಸಾರಾಂಶ

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಜೊತೆ ಒಳಒಪ್ಪಂದ ಮಾಡಿಕೊಂಡಿರುವ ಬಿಜೆಪಿಯವರ ಹೆಸರು ಬಹಿರಂಗಪಡಿಸುವಂತೆ ಚನ್ನಗಿರಿ ಶಿವಗಂಗಾ ಬಸವರಾಜ ಅವರನ್ನು ಯಶವಂತರಾವ್ ಜಾಧವ್‌ ಒತ್ತಾಯಿಸಿದ್ದಾರೆ.  

 ದಾವಣಗೆರೆ : ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಜೊತೆ ಒಳಒಪ್ಪಂದ ಮಾಡಿಕೊಂಡಿರುವ ಬಿಜೆಪಿಯವರ ಹೆಸರು ಬಹಿರಂಗಪಡಿಸುವಂತೆ ಚನ್ನಗಿರಿ ಶಿವಗಂಗಾ ಬಸವರಾಜ ಅವರನ್ನು ಯಶವಂತರಾವ್ ಜಾಧವ್‌ ಒತ್ತಾಯಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಾವು ಯಾರೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದರೆಂಬುದನ್ನು ಬಹಿರಂಗಪಡಿಸಲಿ ಎಂದು ಬಿಜೆಪಿ ಯುವ ಮುಖಂಡ ರಾಜು ವೀರಣ್ಣ ಸವಾಲು ಹಾಕಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ವೇಳೆ ಯಶವಂತ ರಾವ್‌ ಯಾರೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದರು? ಪಾಲಿಕೆ ಮೇಯರ್ ಚುನಾವಣೆ ವೇಳೆ ತಮ್ಮ ಪುತ್ರ, ಪಾಲಿಕೆ ಸದಸ್ಯ ರಾಕೇಶ ಜಾಧವ್‌ಗೆ ವಿದೇಶ ಪ್ರವಾಸಕ್ಕೆ ಕಳಿಸಿದ್ದು ಯಾಕೆ? ಯಾವ ಉದ್ದೇಶಕ್ಕೆ? ಆಗ ಯಾರೊಂದಿಗೆ ಒಳಒಪ್ಪಂದ ಮಾಡಿಕೊಂಡು, ಕಳಿಸಿದ್ದಿರಿ ಎಂದು ಪ್ರಶ್ನಿಸಿದರು.

ತಮ್ಮದು ಪಕ್ಷ ನಿಷ್ಠೆ ಎನ್ನುವ ನೀವು ಪಕ್ಷದ ಹಿರಿಯರು, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಬಗ್ಗೆ ಎಷ್ಟು ಸಲ ಮಾತನಾಡಿದ್ದೀರಿ? ಇದೇನಾ ನಿಮ್ಮ ಪಕ್ಷ ನಿಷ್ಠೆ? ನಮ್ಮ ಬಗ್ಗೆ ಹೆಳವರೆಂಬ ಪದಗಳನ್ನು ಬಳಸಿದ್ದೀರಿ. ಬಿಜೆಪಿಯಲ್ಲಿ ಭಿನ್ನಮತವಾಗಲು ಯಾರು ಕಾರಣರೆಂಬುದನ್ನು ಮೊದಲು ಅರಿಯಬೇಕು. ವ್ಯಕ್ತಿ ಪೂಜೆ ಮಾಡುವುದರಿಂದ ಸೃಷ್ಟಿಯಾಗಿದ್ದು, ಇಂತಹವರಿಂದಲೇ ನಮ್ಮ ಪಕ್ಷಕ್ಕೆ, ನಿಷ್ಟಾವಂತ ಕಾರ್ಯಕರ್ತರಿಗೆ ತೀವ್ರ ಮುಜುಗರ ಉಂಟಾಗುತ್ತಿದೆ ಎಂದರು.

ದಾವಣಗೆರೆ ದಕ್ಷಿಣಕ್ಕೆ ನಾಲ್ಕು ಸಲ ಸ್ಪರ್ಧಿಸಿ, ಸೋತಿದ್ದೀರಿ. ಬಿಜೆಪಿ ಜಿಲ್ಲಾಧ್ಯಕ್ಷ, ದೂಡಾ ಅಧ್ಯಕ್ಷ, ನಗರಸಭೆ ಅಧ್ಯಕ್ಷ ಹೀಗೆ ಸಾಕಷ್ಟುಅಧಿಕಾರ, ಸ್ಥಾನಮಾನ ಅನುಭವಿಸಿದ್ದೀರಿ. ಇದಕ್ಕೆಲ್ಲಾ ಜಿಲ್ಲಾ ಬಿಜೆಪಿ ನಾಯಕರು ಕಾರಣವೆಂಬುದನ್ನು ಅರಿಯಿರಿ ಎಂದು ರಾಜು ತಿಳಿಸಿದರು.

ಇನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಗ್ಗೆ ಮಾತನಾಡುತ್ತಿರುವ ನಿಮಗೆ ಕೆಲ ದಿನಗಳ ಹಿಂದೆ ಸಾಯಿ ಇಂಟರ್ ನ್ಯಾಷನಲ್‌ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲೇ ರೇಣುಕಾಚಾರ್ಯರ ಸಂಘಟನೆ, ತಾಕತ್ತು ಏನೆಂಬುದನ್ನೂ ತೋರಿಸಿದ್ದಾರೆ. ಇನ್ನು ಮುಂದೆ ಮಾಧ್ಯಮಗಳ ಬಳಿ ಹೇಳಿಕೆ ನೀಡುವುದನ್ನು ನಿಲ್ಲಿಸದಿದ್ದರೆ ನಿಮ್ಮ ವಿರುದ್ಧ ನಾವೂ ಮಾತನಾಡಬೇಕಾಗುತ್ತದೆ ಎಂದು ರಾಜು ವೀರಣ್ಣ ಎಚ್ಚರಿಸಿದರು.

ಪಕ್ಷದ ಮುಖಂಡರಾದ ಪ್ರವೀಣ ರಾವ್ ಜಾಧವ್, ಪಂಜು ಪೈಲ್ವಾನ್, ಸುಮಂತ್‌, ಮಂಜುನಾಥ, ವೆಂಕಟೇಶ, ಧರ್ಮರಾಜ, ಗಿರೀಶ ಇತರರು ಇದ್ದರು. 

Share this article